ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ರಾಷ್ಟ್ರೀಯ ನಾಯಕ’ರೇ ಬಹುತ್ವಕ್ಕೆ ಅಪಾಯ: ಆಶಾದೇವಿ

’ನೂರೊಸಗೆಗಳು‘ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಆಶಾದೇವಿ
Published 24 ಮಾರ್ಚ್ 2024, 15:17 IST
Last Updated 24 ಮಾರ್ಚ್ 2024, 15:17 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಿಟನ್‌ನಲ್ಲಿ ನಿಂತು ಬಸವಣ್ಣ ನನಗೆ ಸ್ಫೂರ್ತಿ ಎಂದು ಹೇಳುವ ರಾಷ್ಟ್ರೀಯ ನಾಯಕರು ಭಾರತದಲ್ಲಿ ಬಸವಣ್ಣನ ತತ್ವಕ್ಕೆ ವಿರುದ್ಧವಾಗಿ ಇದ್ದಾರೆ. ಬಹುತ್ವಕ್ಕೆ ಈ ರಾಷ್ಟ್ರೀಯ ನಾಯಕರೇ ದೊಡ್ಡ ಅಪಾಯ’ ಎಂದು ವಿಮರ್ಶಕಿ ಎಂ.ಎಸ್‌. ಆಶಾದೇವಿ ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಲಂಡನ್‌ನ ಬಸವ ಅಂತರರಾಷ್ಟ್ರೀಯ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ‘ಬಹುತ್ವ ಭಾರತ, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ವಚನ ಸಂಭ್ರಮ’ ಕಾರ್ಯಕ್ರಮದಲ್ಲಿ ಪುಷ್ಪ ಬಣಕಾರ್‌ ಅವರ ‘ನೂರೊಸಗೆಗಳು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

'ನಮ್ಮ ದೇಶದ ತಳಹದಿ, ಮೂಲತತ್ವವೇ ಬಹುತ್ವ. ಭಾರತಕ್ಕೆ ಮತ್ತೊಂದು ಹೆಸರೇ ಬಹುತ್ವ. ಈ ಮೂಲತತ್ವವನ್ನೇ ನಾಶಮಾಡಲು ರಾಷ್ಟ್ರೀಯ ನಾಯಕರು ಹೊರಟಿದ್ದಾರೆ' ಎಂದು ಟೀಕಿಸಿದರು.

'ಜನಸಮುದಾಯದ ಬೇರೆ ಬೇರೆ ಸಂಸ್ಕೃತಿಗಳನ್ನು ಶ್ರೇಣೀಕೃತ ವೈವಸ್ಥೆಯಲ್ಲಿ ಮೇಲು ಕೀಳು ಎಂದು ವಿಂಗಡಿಸಲಾಗಿದೆ. ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲ ಎಂಬ ಸಮಾನ ವೇದಿಕೆಯಲ್ಲಿ ಎಲ್ಲ ಸಂಸ್ಕೃತಿಗಳನ್ನು ತರಬೇಕು. ಉಪಸಂಸ್ಕೃತಿ ಎಂದು ವಿಂಗಡಿಸುವುದು ಕೂಡ ಸರಿಯಲ್ಲ' ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ್ ಮಾತನಾಡಿ, ‘ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿವೆ. ಅವೆಲ್ಲ ಒಂದು ವಿಚಾರ, ಒಂದು ಆಯಾಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಡಿದೆದ್ದು ಮೊಳಗಿಸಿದ್ದ ಕ್ರಾಂತಿ ಕಹಳೆಯಾಗಿತ್ತು. ಆದರೆ, ಶರಣರ ಕ್ರಾಂತಿ ಎಲ್ಲ ಆಯಾಮಗಳನ್ನು ಒಳಗೊಂಡಿರುವಂತದ್ದಾಗಿದೆ. ಎಲ್ಲ ಸ್ತರದ ಜನರ ನೋವುಗಳನ್ನು ಒಳಗೊಂಡ ಕ್ರಾಂತಿ. ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕನಲ್ಲ, ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಶಿವಾಜಿಯನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಾಗ ಅಲ್ಲಿ ಎಲ್ಲ ಕಡೆಗಳಲ್ಲಿ ಸಂಭ್ರಮಾಚರಣೆ, ವಿಜಯೋತ್ಸವಗಳು ನಡೆದವು. ಕರ್ನಾಟಕದಲ್ಲಿ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಾಗ ಯಾವ ಸಂಭ್ರಮವೂ ಕಂಡು ಬರಲಿಲ್ಲ. ಮಠಗಳೂ ಸುಮ್ಮನೆ ಕುಳಿತಿದ್ದವು’ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌, ಕೃತಿಕಾರ್ತಿ ಪುಷ್ಪಾ ಬಣಕಾರ್‌, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಮೀಳಾ ಗರಡಿ, ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಗೀತಾ ಜಯಂತ್‌, ಮಧುರಾ ಅಶೋಕ್‌ ಕುಮಾರ್‌, ಪ್ರಮೀಳಾ ಪಾಲನೇತ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT