ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ | ಖಾಸಗಿ ವಿವಿಗಳು ಎಚ್ಚರವಹಿಸಲಿ: ಸಚಿವ ಡಾ. ಎಂ.ಸಿ.ಸುಧಾಕರ್

ರಾಷ್ಟ್ರೀಯ ವಿಚಾರ ಸಂಕಿರಣ
Published 22 ಡಿಸೆಂಬರ್ 2023, 22:30 IST
Last Updated 22 ಡಿಸೆಂಬರ್ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವಿಶ್ವವಿದ್ಯಾಲಯಗಳು ಇತರೆ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧೆಗಿಳಿಯುವ ಭರಾಟೆಯಲ್ಲಿ ಮೌಲ್ಯಮಾಪನದಲ್ಲಿ ಅಶಿಸ್ತು ತೋರಿಸುತ್ತಿದ್ದು, ಇದು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಖಾಸಗಿ ವಿವಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ‌ಡಾ.ಎಂ.ಸಿ.ಸುಧಾಕರ್ ಎಚ್ಚರಿಕೆ ನೀಡಿದರು.

ಕಾಮೆಡ್ -ಕೆ ಕೇರ್ ಹಾಗೂ ಎಜುಕೇಶನ್ ಪ್ರಮೋಷನ್ ಸೊಸೈಟಿ ಫಾರ್ ಇಂಡಿಯಾ (ಇಪಿಎಸ್ಐ) ಸಹಯೋಗದೊಂದಿಗೆ ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಮಾಡುವುದು’ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿರುವುದು ಕೇವಲ 17 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು. ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿದೆ. ಖಾಸಗಿ ವಿವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ನೀಡುತ್ತಿದ್ದು, ಸರ್ಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಸಿಗುತ್ತಿದೆ. ಖಾಸಗಿ ವಿವಿಗಳ ನಡುವಿರುವ ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಚಿವರು ಹೇಳಿದರು. 

ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಜಯರಾಂ, ‘ಪ್ರತಿ ವರ್ಷ ರಾಜ್ಯದಲ್ಲಿ 1.10 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯುತ್ತಾರೆ. ಆದರೆ ಶೇ 10ರಷ್ಟು ಮಂದಿಗಷ್ಟೇ ಉದ್ಯೋಗ ಸಿಗುತ್ತಿದೆ. ಕೌಶಲ ಆಧಾರಿತ ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಒಕ್ಕೂಟ ‌‌ಒಂದು ಸಮಿತಿ ರಚಿಸಿ, ಆ ಸಮಿತಿಯಿಂದ ವರದಿ ಪಡೆದು ಅನುಷ್ಠಾನ ಮಾಡುತ್ತಿದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಕೌಶಲಯುಕ್ತ ಶಿಕ್ಷಣ ದೊರೆಯುವದರ ಜೊತೆಗೆ, ಉದ್ಯೋಗವೂ ಲಭಿಸಲಿದೆ’ ಎಂದರು.

ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ವಿ ಐ ಟಿ) ಸಂಸ್ಥಾಪಕ ಕುಲಪತಿ ಜಿ.ವಿಶ್ವನಾಥನ್ ಮಾತನಾಡಿ, ‘ನಾವು ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಆ ಶಾಲೆಗಳಿಗೆ ಅಗತ್ಯವಿರುವ ಸೌಕರ್ಯಗಳನ್ನು ನೀಡುತ್ತಿದ್ದೇವೆ. ಪ್ರತಿ ವರ್ಷ ₹9 ಕೋಟಿ ಮೊತ್ತವನ್ನು ವಿದ್ಯಾರ್ಥಿ ವೇತನಕ್ಕೆ ನೀಡುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ವಿದ್ಯಾ ಸಂಸ್ಥೆಯ ಮಾಲೀಕರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT