ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಂಡಹಳ್ಳಿ ಕೆರೆಗೆ ಶುದ್ಧೀಕರಿಸಿದ ನೀರು: ₹2.50 ಕೋಟಿ ವೆಚ್ಚದ ಯೋಜನೆ

Last Updated 7 ಜೂನ್ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕಲುಷಿತ ನೀರಿನಿಂದ ಹಾಳಾಗಿರುವ ನಾಯಂಡಹಳ್ಳಿ ಕೆರೆಗೆ ತ್ಯಾಜ್ಯನೀರು ಸಂಸ್ಕರಣಾ ಘಟಕ‌ದಿಂದ (ಎಸ್‌ಟಿಪಿ) ಶುದ್ಧೀಕರಿಸಿದ ನೀರು ಹರಿಸಲು ಜಲ ಮಂಡಳಿ ಯೋಜನೆ ರೂಪಿಸಿದೆ.

ನಾಯಂಡಹಳ್ಳಿ‌ ಕೆರೆಯು ಸುಮಾರು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಈ ಕೆರೆಯನ್ನು ₹10 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದೆ. ಸುತ್ತಲೂ ಏರಿಗಳನ್ನು ನಿರ್ಮಿಸಿ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿದೆ.

ಪಾದಚಾರಿ ಮಾರ್ಗದ ಎರಡೂ ಬದಿಯಲ್ಲಿ ಚೈನ್‌ಲಿಂಕ್ ತಂತಿ ಬೇಲಿ ನಿರ್ಮಿಸಿದೆ. ಆದರೂ ಕಲುಷಿತ ನೀರು ಹರಿದು ಕೆರೆ ಸಂಪೂರ್ಣ ಹಾಳಾಗಿದೆ. ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಕೆರೆಯ ತುಂಬೆಲ್ಲಾ ಜೊಂಡು ತುಂಬಿಕೊಂಡಿದೆ. ಅದನ್ನು ತೆಗೆದು ಮತ್ತೊಮ್ಮೆ ಅಭಿವೃದ್ಧಿಪಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

ವೃಷಭಾವತಿ ಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವ ಕಾಮಗಾರಿಯೂ ಇದರಲ್ಲಿ ಸೇರಿದೆ. ಯೋಗ ಕೇಂದ್ರ, ಬೋಟಿಂಗ್, ಮಕ್ಕಳ ಆಟದಂಗಳ, ವಯಸ್ಕರಿಗೆ ಹೊರಾಂಗಣ ವ್ಯಾಯಾಮ ಶಾಲೆ ನಿರ್ಮಿಸಲು ಪಾಲಿಕೆ ಉದ್ದೇಶಿಸಿದೆ.

‘ನಾಯಂಡಹಳ್ಳಿ ಕೆರೆಗೆ ದಿನವೊಂದಕ್ಕೆ 6 ಕೋಟಿಯಿಂದ 8 ಕೋಟಿ ಲೀಟರ್ ನೀರು ಬೇಕಾಗುತ್ತದೆ. ಸಮೀಪದಲ್ಲೇ ಇರುವ ಎಸ್‌ಟಿಪಿಯಿಂದ ಪೈಪ್‌ಲೈನ್ ಮೂಲಕ ತರಲಾಗುತ್ತದೆ. ಇದಕ್ಕಾಗಿ ₹2.50 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ’ ಎಂದು ಜಲ ಮಂಡಳಿ ಮುಖ್ಯ ಎಂಜಿನಿಯರ್ (ತ್ಯಾಜ್ಯ ನೀರು ನಿರ್ವಹಣೆ) ಜಿ.ಸಿ. ಗಂಗಾಧರ್ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಎಸ್‌ಟಿಪಿಯಿಂದ ಶುದ್ಧೀಕರಿಸಿದ ನೀರನ್ನು ಕೆರೆ ಹರಿಸುತ್ತಿರುವುದು ಇದೇ ಮೊದಲಲ್ಲ. ಕಲ್ಕೆರೆ ಮತ್ತು ರಾಚೇನಹಳ್ಳಿ ಕೆರೆಯಲ್ಲೂ ಈ ಪ್ರಯೋಗ ಮಾಡಲಾಗಿದೆ. ನಾಯಂಡಹಳ್ಳಿ ಕೆರೆಗೆ ನೀರು ಹರಿಸುವ ಯೋಜನೆಗೆ ಬಿಬಿಎಂಪಿ ಹಣಕಾಸು ಒದಗಿಸಿದೆ. ಪೈಪ್‌ಲೈನ್‌ ಅಳವಡಿಸಿ ಕೆರೆಗೆ ನೀರು ಹರಿಸುವುದಷ್ಟೇ ನಮ್ಮ ಕೆಲಸ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT