ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರ ದಾನೋಜಿಪಾಳ್ಯದ ಬಳಿ ಮೋರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ದೊಡ್ಡಬಳ್ಳಾಪುರದ ಬಸವೇಶ್ವರ ಬಡಾವಣೆ ನಿವಾಸಿ ಸಂತೋಷ್ ಕುಮಾರ್ (32) ಅವರ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಶನಿವಾರ ಮಧ್ಯಾಹ್ನ ಮೃತದೇಹ ಕಂಡು ಪೊಲೀಸರಿಗೆ ತಿಳಿಸಿದರು. ಇನ್‌ಸ್ಪೆಕ್ಟರ್ ಶಶಿಧರ್ ಅವರ
ತಂಡ, ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್‌ನಿಂದ ಸಂಬಂಧಿಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರು. ಸ್ಥಳಕ್ಕಾಗಮಿಸಿದ ಸಂಬಂಧಿಗಳು ಕೈಮೇಲಿದ್ದ ಹಚ್ಚೆ ಹಾಗೂ ಬಟ್ಟೆ, ಕನ್ನಡಕದ ಆಧಾರದ ಮೇಲೆ ಸಂತೋಷ್ ಕುಮಾರ್ ಎಂದು ಗುರುತಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚೆ ಗ್ರಾಮದ ನಿವಾಸಿ ಸಂತೋಷ್ ಕುಮಾರ್, ದೊಡ್ಡಬಳ್ಳಾಪುರದ ಬಸವೇಶ್ವರ ಬಡಾವಣೆಯಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದರು. 15 ವರ್ಷಗಳಿಂದ ಚಾಟ್ಸ್ ಅಂಗಡಿ ನಡೆಸುತ್ತಿದ್ದರು.
‘ವಾರದ ಹಿಂದೆ ಪತ್ನಿಯನ್ನು ತವರು ಮನೆಗೆ ಕಳಿಸಲು ನಂಜನಗೂಡಿಗೆ ತೆರಳಿದ್ದ ಸಂತೋಷ್, ಬಳಿಕ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳಿದ್ದರು. ಅವರು ಅಪಘಾತದಿಂದ ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದರೂ, ಕೊಲೆ ಆಗಿರುವ ಶಂಕೆಯಿದೆ. ಕುಟುಂಬಸ್ಥರ ದೂರಿನ ಅನುಸಾರ ತನಿಖೆ
ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.