ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಾನಂದ ಪುರಿ ಸ್ವಾಮೀಜಿ ಪೀಠಾರೋಹಣ

ಗಾಣಿಗ ಗುರುಪೀಠ ಹೆಮ್ಮರವಾಗಲಿ: ಬಿಎಸ್‌ವೈ ಹಾರೈಕೆ
Last Updated 15 ಮೇ 2022, 19:46 IST
ಅಕ್ಷರ ಗಾತ್ರ

ನೆಲಮಂಗಲ: ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠವನ್ನು ಭಾನುವಾರ ಉದ್ಘಾಟಿಸಲಾಯಿತು.
ಪೀಠದ ಪ್ರಥಮ ಗುರುಗಳಾದ ಪೂರ್ಣಾನಂದ ಪುರಿ ಸ್ವಾಮೀಜಿಯವರ ಪೀಠಾರೋಹಣ ನೆರವೇರಿತು. ಅವರಿಗೆ ರಾಜರಾಜೇಶ್ವರ ಮಠದ ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಪಟ್ಟಾಧಿಕಾರ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಿ.ಎಸ್‌.ಯಡಿಯೂರಪ್ಪ, ‘ಗಾಣಿಗ ಸಮಾಜದ ಉಳಿವಿಗೆ ಹಾಗೂ ಏಳಿಗೆಗಾಗಿ 2016ರಲ್ಲೇ ಈ ಮಠವು ಸ್ಥಾಪನೆಯಾಗಿದ್ದರೂ ಗುರುಗಳಿರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜಕೀಯ ಕಾರ್ಯದರ್ಶಿಯಾಗಿ, ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಮಾಡಿದ್ದ ಬಿ.ಜೆ.ಪುಟ್ಟಸ್ವಾಮಿ ಅಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ. ಪೂರ್ಣಾನಂದ ಪುರಿ ಶ್ರೀಗಳಾಗಿ ಪೀಠಾರೋಹಣ ಮಾಡಿ ಈ ಕೊರತೆ ನೀಗಿಸಿದ್ದಾರೆ. ಮಠ ಹೆಮ್ಮರವಾಗಲಿ. ಸಮಾಜದ ಸೇವೆಗೆ ಸದಾ ಶ್ರಮಿಸಲಿ’ ಎಂದು ಹಾರೈಸಿದರು.

ಜಯೇಂದ್ರಪುರಿ ಸ್ವಾಮೀಜಿ, ‘ಗಾಣಿಗರು ಎಣ್ಣೆಯನ್ನು ಕೊಟ್ಟಿದ್ದಾರೆ. ಘರ್ಷಣೆಯನ್ನು ತಡೆಯುವ ಎಣ್ಣೆಯಿಂದಾಗಿ ಯಂತ್ರ ಹಾಗೂ ವಾಹನ ಚಲಿಸುತ್ತದೆ.ಕಸುಬಿನಿಂದ ಗುರುತಿಸಿಕೊಂಡಿರುವ ಸಮಾಜ ಬಂಧವರು ಭಿನ್ನಾಭಿಪ್ರಾಯಗಳನ್ನು ತೊರೆಯಬೇಕು. ಗುರುವಿನ ಆಶೀರ್ವಾದ ಪಡೆದು ಅಭಿವೃದ್ಧಿ ಹೊಂದಬೇಕು’ ಎಂದರು.

ನೇಕಾರ ತೊಗಟವೀರ ದಿವ್ಯಜ್ಞಾನಾನಂದ ಶ್ರೀ, ‘ವ್ಯಕ್ತಿತ್ವ ಬೆಳೆಸಲು ಮಠ ಪ್ರಾರಂಭವಾಗಿದೆ. ಸಮುದಾಯದವರು ತಿಂಗಳ ಒಂದಷ್ಟು ಸಮಯವನ್ನು ಮಠದ ಸೇವೆಗೆ ಮೀಸಲಿಡಬೇಕು’ ಎಂದರು.

ಗಾಣಿಗರ ಅಭಿವೃದ್ಧಿ ಮಂಡಳಿ ರಚಿಸಿ ಹೆಚ್ಚಿನ ಅನುದಾನ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ವಿ.ಆರ್.ಸುದರ್ಶನ್ ಒತ್ತಾಯಿಸಿದರು. ‘ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸುತ್ತೇನೆ’ ಎಂದುವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಶ್ರೀ, ಶಿವಾನಂದಾಶ್ರಮದ ರಮಣಾನಂದಶ್ರೀ, ಮುಖಂಡರಾದ ಎಸ್.ಹರೀಶ್, ಜಿ.ಮರಿಸ್ವಾಮಿ, ಗುಜರಾತಿನ ಗಾಣಿಗ ಮುಖಂಡ ಲಲಿತ್ ಶಾ ಗುಗಾಲಿಯ, ಐಎಎಸ್ ಅಧಿಕಾರಿ ವಾಸಂತಿ ಅಮರ್, ವಕೀಲ ಡಿ.ಪ್ರಭಾಕರ್, ಮಂಜುನಾಥ್ ಪೂನಂ, ಟ್ರಸ್ಟಿಗಳಾದ ರಂಗರಾಜು, ರಾಜಶೇಖರ್, ನರಸಿಂಹಯ್ಯ, ವರಸಿದ್ಧಿ ವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT