ಗುರುವಾರ , ಆಗಸ್ಟ್ 18, 2022
25 °C
ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಪರಿಷ್ಕೃತ ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕೋವಿಡ್ ಕಾಣಿಸಿಕೊಂಡರೆ ಶಾಲೆ, ಕಚೇರಿ ಮುಚ್ಚಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲೆ ಮತ್ತು ಕಚೇರಿಗಳಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟರೂ ಮುಚ್ಚಬೇಕಾಗಿಲ್ಲ. ಆದರೆ, ಸೋಂಕಿನ ಲಕ್ಷಣ ಹೊಂದಿರುವವರನ್ನು ಬರದಂತೆ ನಿರ್ಬಂಧಿಸಿ, ಸ್ವಯಂ ನಿಗಾ ವ್ಯವಸ್ಥೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತ ಡಿ. ರಂದೀಪ್ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ. 

‘ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಕೋವಿಡ್ ಲಕ್ಷಣ ಕಾಣಿಸಿಕೊಂಡಾಗ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಬೇಕು. ಸೋಂಕಿತರಾಗಿಲ್ಲ ಎಂಬ ವರದಿ ಬಂದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಲಸ್ಟರ್‌ಗಳಲ್ಲಿ ರೋಗ ಲಕ್ಷಣಗಳು ಇರುವವರಿಗೆ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಬೇಕು. ಕ್ಲಸ್ಟರ್ ಪ್ರಕರಣಗಳು ವರದಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಬೇಕು’ ಎಂದು ಹೇಳಿದ್ದಾರೆ. 

‘ಅಪಾರ್ಟ್‌ಮೆಂಟ್ ವಸತಿ ಸಮುಚ್ಚ ಯದಲ್ಲಿ 3–5 ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಿ, ನಿಗದಿತ ಬ್ಲಾಕ್‌ನಲ್ಲಿ ಲಕ್ಷಣ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಬೇಕು. 5ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟರೆ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಬೇಕು. 15 ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾದಲ್ಲಿ ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯದಲ್ಲಿ ಲಕ್ಷಣ ಹೊಂದಿರುವ ಎಲ್ಲರನ್ನೂ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರಾದಲ್ಲಿ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆ, ಆರೈಕೆ ಕೇಂದ್ರ ಅಥವಾ ಮನೆ ಚಿಕಿತ್ಸೆ ನಿರ್ಧರಿಸಬೇಕು’ ಎಂದು ತಿಳಿಸಿದ್ದಾರೆ. 

‘60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್ ಲಕ್ಷಣಗಳು ಗೋಚರಿಸಿದರೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಬೇಕು’ ಎಂದಿದ್ದಾರೆ. 

 

ನಗರದಲ್ಲಿ 968 ಪ್ರಕರಣ ದೃಢ

ಬೆಂಗಳೂರು: ಬೆಂಗಳೂರಿನಲ್ಲಿ 887 ಸೇರಿ ರಾಜ್ಯದಲ್ಲಿ 968 ಮಂದಿ ಕೋವಿಡ್ ಪೀಡಿತರಾಗಿರುವುದು ಮಂಗಳವಾರ ದೃಢಪಟ್ಟಿದೆ. ಇದರಲ್ಲಿ ಹಳೆಯ ಪ್ರಕರಣಗಳೂ ಸೇರಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ತಾಂತ್ರಿಕ ಕಾರಣದಿಂದ ವಾರದಿಂದ ಸೋಂಕು ದೃಢ ಪ್ರಕರಣಗಳ ದಾಖಲಾತಿಯಲ್ಲಿ ವ್ಯತ್ಯಾಸವಾಗಿತ್ತು. ಆ ಪ್ರಕರಣಗಳನ್ನು ಸೇರಿಸಿದ್ದರಿಂದ ಮಂಗಳವಾರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. 

ಒಂದು ದಿನದ ಅವಧಿಯಲ್ಲಿ 17,784 ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ 5.44ರಷ್ಟಿದೆ. ಕೋವಿಡ್ ಪೀಡಿತರಲ್ಲಿ ದಕ್ಷಿಣ ಕನ್ನಡದಲ್ಲಿ 78 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 

ರಾಜ್ಯದಲ್ಲಿ 4,918 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿಯೇ 4,682 ಸೋಂಕಿತರು ಇದ್ದಾರೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 39.66 ಲಕ್ಷಕ್ಕೆ ಏರಿಕೆಯಾಗಿದೆ. 39.21 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ಗೆ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 40,073ಕ್ಕೆ ಏರಿಕೆಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು