ಶುಕ್ರವಾರ, ಫೆಬ್ರವರಿ 21, 2020
16 °C
ಸ್ಮಾರ್ಟ್‌ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ

ಕಬ್ಬನ್‌ ಉದ್ಯಾನಕ್ಕೆ ನವ ರೂಪ: ಅಭಿಪ್ರಾಯ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಬ್ಬನ್‌ ಉದ್ಯಾನದಲ್ಲಿ ಶೀಘ್ರವೇ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ. ಉದ್ಯಾನದ ಅಂದ ಹೆಚ್ಚಿಸಲು ಎರಡು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 2021ರ ಮಾರ್ಚ್‌ ಅಂತ್ಯದೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ.

ಮೊದಲ ಹಂತದಲ್ಲಿ ಉದ್ಯಾನದಲ್ಲಿರುವ ಪಾದಚಾರಿ ಮಾರ್ಗಗಳ ನವೀಕರಣ, ವಾಯುವಿಹಾರ ಪಥ ಅಭಿವೃದ್ಧಿ, ನೀರು ಶುದ್ಧೀಕರಣ ವ್ಯವಸ್ಥೆ, ಸೈಕಲ್ ಸವಾರರಿಗೆ ಪ್ರತ್ಯೇಕ ಪಥ ಹಾಗೂ ಕಮಲದ ಕೊಳದ ಸುತ್ತ ಸಂಚಾರಿ ಮಾರ್ಗ ಬರಲಿದೆ.

ಉದ್ಯಾನದ ಅಗತ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ವಾಯುವಿಹಾರಿಗಳು ಹಾಗೂ ಸಾರ್ವ
ಜನಿಕರ ಜತೆ ಅಭಿಪ್ರಾಯ ಸಂಗ್ರಹ ಸಭೆ ಉದ್ಯಾನದಲ್ಲಿ ಭಾನುವಾರ ನಡೆಯಿತು. ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.

ಉದ್ಯಾನದಲ್ಲಿ ಭದ್ರತೆಗಾಗಿ ಸಿ.ಸಿ.ಕ್ಯಾಮೆರಾ ಅಳವಡಿಕೆ, ತುರ್ತು ಚಿಕಿತ್ಸಾ ಕೇಂದ್ರ, ವಾಹನ ನಿಲುಗಡೆಗೆ ಸ್ಥಳ ನಿಗದಿ,
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹೈಟೆಕ್‌ ಶೌಚಾಲಯಗಳ ನಿರ್ಮಾಣ, ತೆರೆದ ವ್ಯಾಯಾಮ ಪರಿಕರಗಳ ಅಳವಡಿಕೆ, ತೆರವಾಗಿರುವ ಬಿದಿರು ಮೆಳೆಗಳ ಮೂಲ ಸ್ಥಳದಲ್ಲಿ ಬಿದಿರು ಸಸಿಗಳನ್ನು ನೆಡುವಂತೆ ನಾಗರಿಕರು ಸಲಹೆ ನೀಡಿದರು.

ಮೇಯರ್‌ ಎಂ.ಗೌತಮ್ ಕುಮಾರ್, ‘ಉದ್ಯಾನವನ್ನು ಸುಂದರಗೊಳಿಸಿ, ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ. ಜನಸ್ನೇಹಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ಅವರಿಂದಲೇ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ’ ಎಂದರು.

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ‘ಎರಡು
ಹಂತಗಳಲ್ಲಿ ಕಾಮಗಾರಿಗಳು ನಡೆಯಲಿವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಾಗಿದೆ’ ಎಂದು ವಿವರಿಸಿದರು.

‘ಸಾರ್ವಜನಿಕರ ಅಭಿರುಚಿಗಳಿಗೆ ತಕ್ಕಂತೆ ಉದ್ಯಾನ ಸಿದ್ಧವಾಗಲಿದೆ. ಕಾಮಗಾರಿಗಳೆಲ್ಲ ಪರಿಸರಸ್ನೇಹಿಯಾಗಿದ್ದು, ಈ ಮಾರ್ಚ್‌ನಿಂದ  ಆರಂಭವಾಗಲಿವೆ’ ಎಂದರು.

ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಜಂಟಿ ನಿರ್ದೇಶಕ ಎಂ.ಜಗದೀಶ್ ಇದ್ದರು.

***

ಉದ್ಯಾನದಲ್ಲಿ ಕಾಂಕ್ರೀಟ್‌ರಹಿತ ಕಾಮಗಾರಿಗಳು ನಡೆಯಲಿ ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ. ಆರಂಭವಾಗಲಿರುವ ಕಾಮಗಾರಿಗಳು ಪರಿಸರಸ್ನೇಹಿಯಾಗಿ ಇರಲಿವೆ.

ಜಿ.ಕುಸುಮಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ (ಕಬ್ಬನ್‌ ಉದ್ಯಾನ)

ಕಾಮಗಾರಿಗಳಿಂದ ಉದ್ಯಾನ ಸ್ವರೂಪ ಬದಲಾಗಬಹುದು. ಆದರೆ, ಉದ್ಯಾನದಲ್ಲಿ ಹೆಚ್ಚು ಮರಗಳನ್ನು ಬೆಳೆಸುವುದು ಇಲಾಖೆಯ ಆದ್ಯತೆಯಾಗಿರಲಿ.

ಎಸ್‌.ಉಮೇಶ್‌, ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ

ಎರಡನೇ ಹಂತದ ಕಾಮಗಾರಿಗಳು

* ಕರಗದ ಕುಂಟೆ ಅಭಿವೃದ್ಧಿ

* ಕಾರಂಜಿಗಳು

* ಕಲ್ಯಾಣಿ ಅಭಿವೃದ್ಧಿ

* ಆಯುರ್ವೇದ ಉದ್ಯಾನ 

* ಜೈವಿಕ ಅನಿಲ ಘಟಕ ಸ್ಥಾಪನೆ

* ಸೈಕಲ್ ನಿಲುಗಡೆಗೆ ವ್ಯವಸ್ಥೆ

* ಉದ್ಯಾನದ ಸುತ್ತ ರಕ್ಷಣಾ ಬೇಲಿ

* ಪಾರಿವಾಳಗಳಿಗೆ ಆಹಾರ ನೀಡಲು ಪ್ರತ್ಯೇಕ ಸ್ಥಳ

ಅಂಕಿ ಅಂಶ

2 ಹಂತಗಳಲ್ಲಿ ಉದ್ಯಾನದ ಅಭಿವೃದ್ಧಿ

₹20 ಕೋಟಿ - ಪ್ರತಿ ಹಂತದ ಕಾಮಗಾರಿ ವೆಚ್ಚ

₹40 ಕೋಟಿ - ಸ್ಮಾರ್ಟ್‌ ಸಿಟಿ ಯೋಜನೆಯ ಒಟ್ಟು ವೆಚ್ಚ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು