ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ಕೋಗೆ ಹೊಸ ರೈಲು: ಸಿ.ಎಂ ಚಾಲನೆ

Last Updated 7 ಮಾರ್ಚ್ 2020, 22:03 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ-ಕಾರವಾರ- ವಾಸ್ಕೋ ಮಾರ್ಗದಲ್ಲಿ ಸಂಚರಿಸಲಿರುವ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.

16595/16596 ಸಂಖ್ಯೆಯ ರೈಲು ಪ್ರತಿ ದಿನ ಸಂಜೆ 6.45ಕ್ಕೆಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 8.25 ಕ್ಕೆ ಕಾರವಾರ ತಲುಪಲಿದೆ. ಅಲ್ಲಿಂದ ಮುಂದಕ್ಕೆ ಇದೇ ರೈಲು ವಾಸ್ಕೋಗೆ ಹೋಗಲಿದೆ.‌ ಆದರೆ, ಕಾಯ್ದಿರಿಸಲು ಅವಕಾಶ ಇಲ್ಲದ ಕಾರಣ ಗಾಡಿ ಸಂಖ್ಯೆ(06551/06552) ಬದಲಾಗಲಿದೆ.

ಚಿಕ್ಕಬಾಣವಾರ ಬಿಟ್ಟರೆ ಚನ್ನರಾಯಪಟ್ಟಣದ ವರೆಗೆ ಬೇರೆಲ್ಲೂ ನಿಲುಗಡೆ ಇಲ್ಲ. ಇದಕ್ಕೂ ಮುನ್ನ 6.15ಕ್ಕೆ ಯಶವಂತಪುರ–ಹಾಸನ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಹೊರಡುವುದರಿಂದ ಹೊಸ ರೈಲು ನಿಲುಗಡೆಗೆ ಹೆಚ್ಚು ಅವಕಾಶ ನೀಡಿಲ್ಲ.

ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಈ ರೈಲು ಸಂಚಾರದಿಂದ ಶಿರಾಡಿ‌ಘಾಟ್ ಮೇಲಿನ ಒತ್ತಡ ಕಡಿಮೆಯಾಗಲಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಸದಾ ಬೆಂಬಲ ನೀಡಲಿದೆ’ ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ, ‘ಹಳೆ ರೈಲು ಸ್ಥಗಿತಗೊಳಿಸದೆ ಹೊಸ ರೈಲು ಕಾರ್ಯಾಚರಿಸಬೇಕು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರಾತ್ರಿ ವೇಳೆ ಹೊಸ ರೈಲು ಸೇವೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಎಲ್‌ಎಚ್‌ಬಿ(ಲಿಂಕ್ ಹಾಫ್‍ಮನ್ ಬುಷ್) ಕೋಚ್‌ಗಳಾಗಿ ಪರಿವರ್ತನೆಯಾಗಿರುವ ಯಶವಂತಪುರ-ವಿಜಯಪುರ–ಯಶವಂತಪುರ ರೈಲಿಗೆ ಇದೇ ವೇಳೆ ಚಾಲನೆ ನೀಡಲಾಯಿತು. ‘ಈ ಬೋಗಿಗಳು ಹೆಚ್ಚು ಉದ್ದವಾಗಿದ್ದು, ತುಕ್ಕು ಹಿಡಿಯುವುದಿಲ್ಲ. ಒಳಗೆ ಹೆಚ್ಚು ಜಾಗ ಲಭ್ಯವಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಮಹಿಳೆಯರಿಂದ ಚಾಲನೆ: ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಹೊಸ ರೈಲನ್ನು ಅಭಿರಾಮಿ ಹಾಗೂ ಬಾಲಾ ಶಿವಪಾರ್ವತಿ ಅವರೇ ಚಾಲನೆ ಮಾಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT