ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆ: ಮದ್ಯ ಕುಡಿದು ವಾಹನ ಚಲಾಯಿಸಿದರೆ ಕೇಸ್

175 ಸ್ಥಳದಲ್ಲಿ ತಪಾಸಣೆ * 32 ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧ
Last Updated 28 ಡಿಸೆಂಬರ್ 2019, 22:21 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸ ವರ್ಷಾಚರಣೆ ನಿಮಿತ್ತ ಡಿ.31ರ ರಾತ್ರಿ ಮದ್ಯ ಕುಡಿದು ವಾಹನ ಚಲಾಯಿಸುವರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಸಿಕ್ಕಿಬಿದ್ದವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಶನಿವಾರ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸ್ಥಳ ಹಾಗೂ ರಸ್ತೆಯಲ್ಲಿ ಜನರ ಓಡಾಟ ಹೆಚ್ಚಿರುತ್ತದೆ. ಯಾರಾದರೂ ಮದ್ಯ ಕುಡಿದು ವಾಹನ ಓಡಿಸಿದರೆ ಅಪಾಯ ಹೆಚ್ಚು. ಹೀಗಾಗಿ, ಸಾರ್ವಜನಿಕ ಸ್ಥಳದಲ್ಲಿ ಅತೀ ವೇಗವಾಗಿ ನಿರ್ಲಕ್ಷ್ಯದಿಂದ ವಾಹನ ಓಡಿಸಿದ (ಐಪಿಸಿ-279) ಆರೋಪದಡಿ ತಪ್ಪಿತಸ್ಥ ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಅವರು ಹೇಳಿದರು.

‘ಸಾಮಾನ್ಯ ದಿನಗಳಲ್ಲಿ ಮದ್ಯ ಕುಡಿದು ವಾಹನ ಓಡಿಸಿದವರು ಸಿಕ್ಕಿಬಿದ್ದರೆ, ವಾಹನ ಜಪ್ತಿ ಮಾಡಲಾಗುತ್ತದೆ. ದಂಡದ ನೋಟಿಸ್‌ ನೀಡಲಾಗುತ್ತದೆ. ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು. ಇದೀಗ ಕ್ರಿಮಿನಲ್ ಕೇಸ್‌ ದಾಖಲಿಸಲಾಗುವುದು. ಚಾಲನಾ ಪರವಾನಗಿಯನ್ನೂ ಅಮಾನತು ಮಾಡಲು ಸಾರಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

175 ಸ್ಥಳದಲ್ಲಿ ತಪಾಸಣೆ: ‘ಮದ್ಯ ಕುಡಿದು ವಾಹನ ಚಲಾಯಿಸುವರ ಪತ್ತೆಗಾಗಿ ಈ ಬಾರಿ ನಗರದ 175 ಸ್ಥಳದಲ್ಲೇ ವಿಶೇಷ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ತಂಡಗಳನ್ನು ರಚಿಸಲಾಗಿದೆ’ ಎಂದು ರವಿಕಾಂತೇಗೌಡ ಹೇಳಿದರು.

‘ಅತೀ ವೇಗವಾಗಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ಹಾಗೂ ಬೈಕ್ ವ್ಹೀಲಿಂಗ್ ಅಥವಾ ಡ್ರ್ಯಾಗ್‌ ರೇಸ್‌ನಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಥ ಘಟನೆಗಳ ನಡೆದರೆ ಸಾರ್ವಜನಿಕರು ನಮ್ಮ–100ಕ್ಕೆ ಕರೆ ಮಾಡಿ ತಿಳಿಸಬಹುದು’ ಎಂದು ತಿಳಿಸಿದರು.

‘ಬಿ–ಸೇಫ್‌’ ಅಭಿಯಾನಕ್ಕೆ ಯಶ್‌ ಸಾಥ್
ಮದ್ಯ ಕುಡಿದು ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸಲು ಬೆಂಗಳೂರು ಸಂಚಾರ ಪೊಲೀಸರು, ‘ಬಿ–ಸೇಫ್’ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕೆ ನಟ ಯಶ್ ಸಾಥ್‌ ನೀಡಿದ್ದಾರೆ.

ಈ ಬಗ್ಗೆ ವಿಡಿಯೊ ಬಿಡುಗಡೆ ಮಾಡಿರುವ ಯಶ್, ‘ಒಂದು ದಿನ ಪಾರ್ಟಿ ಮಾಡಿ ಸ್ನೇಹಿತರ ಜೊತೆ ಖುಷಿಯಾಗಿರುವ ಉತ್ಸಾಹದಲ್ಲಿ ಕುಡಿದ ಅಮಲಿನಲ್ಲೇ ಮೈ ಮರೆತು ಗಾಡಿ ಓಡಿಸಿದರೆ ಅನಾಹುತ ಆಗುತ್ತದೆ. ನಿಮಗೇನಾದರೂ ಹೆಚ್ಚು ಕಮ್ಮಿ ಆದರೆ, ನಿಮ್ಮನ್ನು ನಂಬಿಕೊಂಡಿರುವ ಜೀವಗಳು ಬದುಕಿನುದ್ದಕ್ಕೂ ನೋವು ಅನುಭವಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಹೊಸ ವರ್ಷ ಪ್ರತಿ ವರ್ಷವೂ ಬರುತ್ತದೆ. ಹೊಸ ಆಸೆ, ಕನಸು, ಗುರಿ, ಹೀಗೆ.. ಪ್ರತಿಯೊಬ್ಬರು ತಮ್ಮ ಜೀವನವನ್ನು ಹೊಸದಾಗಿ ಆರಂಭಿಸಲು ಇಚ್ಛಿಸುವ ಸಮಯವಿದು. ಹೊಸ ಸಮಯ ಬರಮಾಡಿಕೊಳ್ಳುವ ಉತ್ಸಾಹದಲ್ಲಿ ಮದ್ಯದ ಅಮಲಿನಲ್ಲಿ ಎಚ್ಚರ ತಪ್ಪಿ ಗಾಡಿ ಓಡಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು’ ಎಂದೂ ತಿಳಿಸಿದ್ದಾರೆ.

32 ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧ
‘ಅಪಘಾತಗಳನ್ನು ತಪ್ಪಿಸುವ ಸಲುವಾಗಿ ನಗರದ 32 ಮೇಲ್ಸೇತುವೆಗಳಲ್ಲಿ ಇದೇ 31ರ ರಾತ್ರಿ 10 ಗಂಟೆಯಿಂದ ಜ. 1ರ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ’ ಎಂದು ರವಿಕಾಂತೇಗೌಡ ಹೇಳಿದರು.

‘ಹೊಸೂರು ರಸ್ತೆಯ ಎಲಿವೇಟೆಡ್ ಮೇಲ್ಸೇತುವೆ, ಜಯದೇವ, ಬೆಂಗಳೂರು ಡೈರಿ ವೃತ್ತ, ದೇವರಬೀಸನಹಳ್ಳಿ, ಕಾಡುಗೋಡಿ, ಹೋಪ್‌ ಫಾರಂ–ಬೆಳ್ಳಂದೂರು, ಸರ್ಜಾಪುರ ಮುಖ್ಯರಸ್ತೆ, ಎಚ್‌ಎಸ್‌ಆರ್‌ ಲೇಔಟ್ 14ನೇ ಮುಖ್ಯರಸ್ತೆ, ಅಗರ, ಇಬ್ಬಲೂರು, ಇಂದಿರಾನಗರ 100 ಅಡಿ ರಸ್ತೆ, ದೊಮ್ಮಲೂರು, ಲಿಂಗರಾಜಪುರ, ರಿಚ್ಮಂಡ್ ವೃತ್ತ, ಶೇಷಾದ್ರಿ ರಸ್ತೆ, ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಹಾಗೂ ಹೊರ ವರ್ತುಲ ರಸ್ತೆಯ ಮೇಲ್ಸೇತುವೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT