ಶನಿವಾರ, ಮಾರ್ಚ್ 6, 2021
32 °C
ಬೊಮ್ಮಾಯಿ

ಹೊಸ ವರ್ಷಾಚರಣೆಗೆ ನಿರ್ಬಂಧ: ಬೆಂಗಳೂರಿಗೆ ಹೊಸ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಹೊಸ ವರ್ಷಾಚರಣೆಯನ್ನು ನಿರ್ಬಂಧಿಸಲು ಬೆಂಗಳೂರಿಗೆ ಸೀಮಿತವಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಡಿಸೆಂಬರ್‌ 30 ಮತ್ತು 31ರಂದು ನಗರದ ವ್ಯಾಪ್ತಿಯಲ್ಲಿ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು. ಈ ಸಂಬಂಧ ಮಾರ್ಗಸೂಚಿ ಹೊರಡಿಸುವಂತೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ನಿರ್ದೇಶನ ನೀಡಿದ್ದೇನೆ. ಎರಡು ದಿನಗಳೊಳಗೆ ಮಾರ್ಗಸೂಚಿ ಪ್ರಕಟವಾಗಲಿದೆ’ ಎಂದರು.

ಹಿಂದಿನ ವರ್ಷಗಳಂತೆ ಹೊಸ ವರ್ಷಾಚರಣೆಗೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜನಜಂಗುಳಿ ಸೇರದಂತೆ ತಡೆಯಲಾಗುವುದು. ಹೋಟೆಲ್‌, ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಯಲ್ಲಿ ಸ್ಪಷ್ಟವಾದ ಸೂಚನೆಗಳನ್ನು ನೀಡಲಾಗುವುದು. ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸುವ ಯೋಚನೆಯೂ ಇದೆ ಎಂದು ಹೇಳಿದರು.

ರಾತ್ರಿ ಕರ್ಫ್ಯೂ ಆದೇಶ ವಾಪಸ್‌ ಪಡೆದ ಕಾರಣಕ್ಕೆ ಹೊಸ ವರ್ಷಾಚರಣೆಗೆ ಮುಕ್ತ ಅನುಮತಿ ದೊರಕಿದೆ ಎಂದು ಸಾರ್ವಜನಿಕರು ಭಾವಿಸಬಾರದು. ಕೋವಿಡ್‌ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು