ಶುಕ್ರವಾರ, ಮೇ 27, 2022
23 °C

ಅಂಗವಿಕಲರ ಹೆಸರಲ್ಲಿ ಎನ್‌ಜಿಒಗಳಿಂದ ಲೂಟಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಂಗವಿಕಲ ಮಕ್ಕಳ ಶಿಶು ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ವಿಶೇಷ ಶಾಲೆಗಳನ್ನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸುಳ್ಳು ವಿವರ ಸಲ್ಲಿಸಿ, ಹಣ ಲೂಟಿ ಮಾಡುತ್ತಿವೆ’ ಎಂದು ‘ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ’ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಆರೋಪಿಸಿದ್ದಾರೆ. 

‘ವಿಶೇಷ ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ, ಇಲಾಖೆಗೆ ಹೆಚ್ಚಿನ ಸಂಖ್ಯೆಯನ್ನು ತೋರಿಸಲಾಗುತ್ತಿದೆ. ಇಲಾಖೆಯ ಉಪನಿರ್ದೇಶಕರು ಹಾಗೂ ಅಂಗವಿಕಲ ಕಲ್ಯಾಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡದೆ, ಮಕ್ಕಳ ಮತ್ತು ಸಿಬ್ಬಂದಿ ಸಂಖ್ಯೆ, ಕಲಿಕಾ ಪ್ರಗತಿಗಳನ್ನು ಪರಿಶೀಲಿಸದೆ ವರದಿಗೆ ಸಹಿ ಹಾಕಿ, ಹಣ ಬಿಡುಗಡೆಗೆ ಶಿಫಾರಸು ಮಾಡುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ತ್ರೈಮಾಸಿಕ ಕಂತುಗಳನ್ನು ಬಿಡುಗಡೆಯಾಗುವ ಹಣದಲ್ಲಿ ಶೇ 20ರಷ್ಟು ಪಾಲನ್ನು ಇಲಾಖೆ ಅಧಿಕಾರಿಗಳು ಹಾಗೂ ಬಿಲ್ ಮಾಡುವ ಕಂಪ್ಯೂಟರ್ ಆಪರೇಟರ್‌ಗಳಿಗೆ ಎನ್‌ಜಿಒಗಳು ನೀಡುತ್ತಿವೆ. ಕೋವಿಡ್ ಕಾರಣದಿಂದ ಈ ಶಾಲೆಗಳನ್ನು ಸದ್ಯ ಮುಚ್ಚಲಾಗಿದೆ. ಮಾರ್ಚ್‌ ತಿಂಗಳ ಕೊನೆಯಲ್ಲಿ ಬಿಡುಗಡೆಯಾಬೇಕಿದ್ದ ಅನುದಾನಕ್ಕೆ ಈಗಲೇ ಶಿಫಾರಸು ಮಾಡಿ ಹಣ ಪಡೆದುಕೊಂಡಿವೆ. ಯೋಜನೆಗೆ ಅರ್ಜಿ ಸಲ್ಲಿಸಿರುವ ಎನ್‌ಜಿಒಗಳ ಪೈಕಿ ಕೆಲವೇ ಸಂಸ್ಥೆಗಳಿಗೆ ಮುಂಚಿತವಾಗಿ ಹಣ ಬಿಡುಗಡೆಯಾಗಿದೆ. ಈ ಅಕ್ರಮದಲ್ಲಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ವಿಶೇಷ ಶಾಲೆಗಳಿಗೆ ದಾನಿಗಳು ನೀಡಿದ ಹಣ ಮತ್ತು ವಸ್ತುಗಳಿಗೆ ಸಂಬಂಧಿಸಿದ ಲೆಕ್ಕ ಇರುವುದಿಲ್ಲ. ಇಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನಿಗದಿಗಿಂತ ಕಡಿಮೆ ಸಂಬಳ ನೀಡಲಾಗುತ್ತಿದೆ. ಅಂಗವಿಕಲರ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು