ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಂಡ್ರಳ್ಳಿ ಕೆರೆ ಬಫರ್‌ ನಿಯಮ ಉಲ್ಲಂಘನೆ ಪ್ರಕರಣ: ಪರಿಸರ ಪರವಾನಗಿ ರದ್ದು

ಎನ್‌ಜಿಟಿ ಆದೇಶ
Last Updated 3 ಫೆಬ್ರುವರಿ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕೈಕೊಂಡ್ರಳ್ಳಿ ಕೆರೆಯ ಬಫರ್‌ ವಲಯದ ನಿಯಮ ಉಲ್ಲಂಘಿಸಿ ಕೆರೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ನೀಡಿರುವ ಪರಿಸರ ಪರವಾನಗಿ ರದ್ದುಪಡಿಸಿ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಸೋಮವಾರ ಆದೇಶಿಸಿದೆ.

ಕೈಕೊಂಡ್ರಳ್ಳಿ ಕೆರೆಯ ದಕ್ಷಿಣ ಭಾಗದಲ್ಲಿ ಸರ್ಜಾಪುರ ರಸ್ತೆಗೆ ಅಂಟಿಕೊಂಡಂತೆ ನಿರ್ಮಾಣವಾಗಲಿರುವ ಗೋದ್ರೆಜ್‌ ರಿಫ್ಲೆಕ್ಷನ್ಸ್‌ (ಹಂತ 1) ಹಾಗೂ ಗೋದ್ರೇಜ್‌ ಲೇಕ್‌ ಗಾರ್ಡನ್‌ (ಹಂತ– 2) ಯೋಜನೆಗಳೂ ಸೇರಿದಂತೆ ಕೆರೆಯ ಬಫರ್‌ ವಲಯದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಯೋಜನೆಗಳಿಗೆ, ಸಂಬಂಧಿಸಿದ ಪ್ರಾಧಿಕಾರ ನೀಡಿರುವ ಪರಿಸರ ಪರವಾನಗಿ ರದ್ದುಪಡಿಸಿ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಹಸಿರುಪೀಠ ಆದೇಶಿಸಿದೆ.

ಅಲ್ಲದೆ, ಕಸವನಹಳ್ಳಿ ಕೆರೆಯಿಂದ ಕೈಕೊಂಡ್ರಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಒತ್ತುವರಿ ಕುರಿತೂ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಈ ಕುರಿತು ಅಂತಿಮ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೇತೃತ್ವದ ಜಂಟಿ ಪರಿಶೀಲನಾ ಸಮಿತಿಗೆ ಸೂಚಿಸಲಾಗಿದೆ.

ಜಂಟಿ ಪರಿಶೀಲನಾ ಸಮಿತಿ ಎದುರು ಹಾಜರಾಗಿ ಮನವಿ ಸಲ್ಲಿಸುವಂತೆ ಅರ್ಜಿದಾರರಾದ ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಗೂ ಪೀಠ ಹೇಳಿದೆ.

ಗೋದ್ರೇಜ್‌ ರಿಫ್ಲೆಕ್ಷನ್ಸ್‌ (ಹಂತ 1) ಯೋಜನೆ ವಿರೋಧಿಸಿ ಸ್ಥಳೀಯ ನಿವಾಸಿ ಎಚ್‌.ಪಿ. ರಾಜಣ್ಣ 2018ರಲ್ಲಿ ಸಲ್ಲಿಸಿದ್ದ ಮೂಲ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ನಿಯಮ ಉಲ್ಲಂಘಿಸಿ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ನಡೆದಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು.

ಬಫರ್‌ ವಲಯದ ನಿಯಮ ಕುರಿತು ಈ ಹಿಂದೆಯೇ ಸ್ಪಷ್ಟಪಡಿಸಲಾಗಿದ್ದರೂ ಕೈಕೊಂಡ್ರಳ್ಳಿ ಕೆರೆ ಮತ್ತು ರಾಜಕಾಲುವೆಗಳ ಬಫರ್‌ ವಲಯದಲ್ಲೇ ವಸತಿ ಸಮುಚ್ಚಯ ನಿರ್ಮಿಸಲು ಅನುಮತಿ ನೀಡಿದ್ದರ ಕುರಿತೂ ವಿವಿಧ ಪ್ರಾಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಸಿರು ಪೀಠ, ಭಾರಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿತ್ತು.

ಕೆರೆ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಅಕ್ರಮ ಜನವಸತಿ ತೆರವುಗೊಳಿಸುವಂತೆ ಮೇ ತಿಂಗಳಲ್ಲಿ ನೀಡಲಾದ ಆದೇಶದಲ್ಲಿ ಸೂಚಿಸಿದ್ದ ಪೀಠವು, ಸ್ಥಳ ಪರಿಶೀಲಿಸಿ ಜಂಟಿ ಪರಿಶೀಲನಾ ಸಮಿತಿ ಸಲ್ಲಿಸಿರುವ ಅಂತಿಮ ವರದಿಯನ್ನು ಆಧರಿಸಿ, ಜುಲೈ 11ರೊಳಗೆ ಕೆರೆಯ ಸಂರಕ್ಷಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಕೈಕೊಂಡ್ರಳ್ಳಿ ಕೆರೆಯ ದಕ್ಷಿಣ ಭಾಗ ಮತ್ತು ಪೂರ್ವ ಭಾಗದಲ್ಲಿನ ಒತ್ತುವರಿ ಹಾಗೂ ಈ ಕೆರೆಯ ಮೇಲ್ಭಾಗದಲ್ಲಿರುವ ಕಸವನಹಳ್ಳಿ ಕೆರೆಯಿಂದ ನೈಸರ್ಗಿಕವಾಗಿ ನೀರು ಹರಿಯುವ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ಪರ ವಕೀಲ
ಪಿ.ರಾಮಪ್ರಸಾದ್‌ ನ್ಯಾಯಪೀಠದ ಎದುರು ವಾದ ಮಂಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT