ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಸ್ಫೋಟಕ್ಕೆ ಸಂಚು | ಚಿಕ್ಕಬಾಣಾವರದ ಮನೆಯಲ್ಲಿ 10 ಬಾಂಬ್‌ ಪತ್ತೆ

ಮನೆ ಮೇಲೆ ಎನ್‌ಐಎ ದಾಳಿ
Last Updated 8 ಜುಲೈ 2019, 1:20 IST
ಅಕ್ಷರ ಗಾತ್ರ

ಹೆಸರುಘಟ್ಟ/ ಬೆಂಗಳೂರು: ಚಿಕ್ಕಬಾಣಾವರದ ಹಳೇ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮನೆಯೊಂದರಲ್ಲಿ 10 ಜೀವಂತ ಬಾಂಬ್‌ಗಳು ಹಾಗೂ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದು, ರಾಜಧಾನಿಯಲ್ಲಿ ದೊಡ್ಡ ಸ್ಫೋಟಕ್ಕೆ ಸಂಚು ರೂಪಿಸಿದ್ದ ಸಂಗತಿ ಹೊರಬಿದ್ದಿದೆ.

ಸ್ಥಳೀಯ ನಿವಾಸಿ ಮುಸ್ತಾನ್ ಎಂಬುವರ ಮಾಲೀಕತ್ವದ ಮನೆ ಮೇಲೆ ಭಾನುವಾರ ಸಂಜೆ 6ರ ಸುಮಾರಿಗೆ ದಿಢೀರ್ ದಾಳಿ ಮಾಡಿದ್ದ ಎನ್‌ಐಎ ಅಧಿಕಾರಿಗಳು, ರಾತ್ರಿಯಿಡಿ ಶೋಧ ನಡೆಸಿ ಬಾಂಬ್‌, ಏರ್‌ಗನ್‌ ಹಾಗೂ ಸ್ಫೋಟಕಗಳನ್ನು ಜಪ್ತಿ ಮಾಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಜೂನ್‌ 25ರಂದು ಎನ್‌ಐಎ ಅಧಿಕಾರಿಗಳು, ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ಎಂಬಾತನನ್ನು ಬಂಧಿಸಿದ್ದರು. ಆತ ತನ್ನ ಇಬ್ಬರು ಸ್ನೇತರೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಆತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಅಧಿಕಾರಿಗಳು ಈ ದಾಳಿ ಮಾಡಿದರು’ ಎಂದು ಮೂಲಗಳು ತಿಳಿಸಿವೆ.

‘ಎರಡು ವರ್ಷಗಳ ಹಿಂದೆ ಚಿಕ್ಕ ಬಾಣಾವರಕ್ಕೆ ಬಂದಿದ್ದ ಹಬೀಬುರ್‌ ಸೇರಿ ಮೂವರು ಶಂಕಿತರು,ಮುಸ್ತಾನ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಅಲ್ಲಿಯೇ ಬಾಂಬ್‌ಗಳನ್ನು ತಯಾರಿಸಿಡುತ್ತಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಮೂವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದರು’ ಎಂದು ಮೂಲಗಳು ಹೇಳಿವೆ.

‘ಆ ಮೂವರು ಶಂಕಿತರೇ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಅವರಿಗೂ ಶಂಕಿತ ಹಬೀಬ್‌ಗೂ ಸಂಬಂಧವಿದೆ. ಅವರ ವಿಚಾರಣೆಯಿಂದಲೇ ಬಾಂಬ್‌ ತಯಾರಿಕಾ ವಿಷಯ ಬಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಬಳೆ ಮಾರಾಟಗಾರರು ಎಂದು ಹೇಳಿಕೊಂಡು ಬಂದಿದ್ದ ಹಬೀಬುರ್‌ ರೆಹಮಾನ್‌ ಹಾಗೂ ಆತನ ಇಬ್ಬರು ಸಹಚರರು ಮನೆ ಬಾಡಿಗೆ ಪಡೆದಿದ್ದರು. ಅಕ್ಕಪಕ್ಕದ ನಿವಾಸಿಗಳ ಬಳಿಯೂ ತಾವು ವ್ಯಾಪಾರಿಗಳೆಂದು ಹೇಳಿಕೊಂಡು ಓಡಾಡುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಹೊರಗೆ ಹೋಗಿ ಬರುತ್ತಿದ್ದರು. ಹೀಗಾಗಿ ಸ್ಥಳೀಯರಿಗೆ ಇವರ ಬಗ್ಗೆ ಅನುಮಾನ ಬಂದಿರಲಿಲ್ಲ. ದಾಳಿ ಸಂಬಂಧ ಮನೆ ಮಾಲೀಕರು ಹಾಗೂ ಅಕ್ಕಪಕ್ಕದ ನಿವಾಸಿಗಳನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದುಕೊಂಡಿದ್ದಾರೆ.

ಟಿಫಿನ್‌ ಬಾಕ್ಸ್‌ನಲ್ಲಿ ಬಾಂಬ್‌

‘ಇಡೀ ಮನೆಯೇ ಬಾಂಬ್‌ ತಯಾರಿಕಾ ಘಟಕವಾಗಿ ಮಾರ್ಪಟ್ಟಿದೆ. ಕೆಲ ಬಾಂಬ್‌ಗಳನ್ನು ಟಿಫಿನ್‌ ಬಾಕ್ಸ್‌ನಲ್ಲಿ ತುಂಬಿಡಲಾಗಿತ್ತು. ನಾನಾ ಬಗೆಯ ಸ್ಫೋಟಕ ಸಾಮಗ್ರಿಗಳು ಸಹ ಮನೆಯಲ್ಲಿದ್ದವು. ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಸಹಾಯದಿಂದ ಎನ್‌ಐಎ ಅಧಿಕಾರಿಗಳು, ಬಾಂಬ್ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಬಾಕ್ಸ್‌ಗಳಲ್ಲಿ ತುಂಬಿ ತೆಗೆದುಕೊಂಡು ಹೋಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT