ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ಮಾಣ ಹಗರಣ ತನಿಖೆಗೆ ಆಗ್ರಹ: ‘ನೈಸ್‌’ ವಿರುದ್ಧ ರೈತರ ಆಕ್ರೋಶ

Published 28 ಜೂನ್ 2023, 14:53 IST
Last Updated 28 ಜೂನ್ 2023, 14:53 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಸ್ವಾಧೀನದ ಹೆಸರಿನಲ್ಲಿ ನೈಸ್‌ ಸಂಸ್ಥೆ ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ’ ಎಂದು ಆರೋಪಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್‌ ಭೂಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ನೈಸ್‌ ಕಂಪನಿಯ ಭೂಸ್ವಾಧೀನ ಹಾಗೂ ರಸ್ತೆ ನಿರ್ಮಾಣ ಹಗರಣಗಳನ್ನು ತನಿಖೆಗೆ ಒಳಪಡಿಸಬೇಕು. ರೈತರ ಒಪ್ಪಿಗೆಯಿಲ್ಲದೇ ರೈತರ ಗಮನಕ್ಕೆ ಬಾರದೇ ಭೂಸ್ವಾಧೀನ ಮಾಡಿಕೊಂಡಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

‘ಭೂಮಿ ಕಳೆದುಕೊಂಡಿರುವ ರೈತರಿಗೆ ಈ ಹಿಂದೆ ಆಗಿರುವ ಒಪ್ಪಂದದ ಪ್ರಕಾರ ನಿವೇಶನ ಹಾಗೂ ಹೆಚ್ಚಿನ ಪರಿಹಾರ ನೀಡಬೇಕು. ಸದನ ಸಮಿತಿ ಹಾಗೂ ಸಂಪುಟ ಉಪ ಸಮಿತಿಗಳು ನೀಡಿರುವ ವರದಿಗಳನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಬಿಎಂಐಸಿಪಿ (ಬೆಂಗಳೂರು–ಮೈಸೂರು ಇನ್ಪಾಸ್ಟ್ರಕ್ಚರ್ ಕಾರಿಡಾರ್‌ ಯೋಜನೆ) ಯೋಜನೆಗಾಗಿ ಬಲವಂತವಾಗಿ ಭೂಸ್ವಾಧೀನ ಮಾಡಿಕೊಂಡು 27 ವರ್ಷ ಕಳೆದರೂ ಯೋಜನೆ ಕಾರ್ಯಗತಗೊಂಡಿಲ್ಲ. ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್‌ ಕಂಪನಿ ನಡೆದುಕೊಂಡಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ದೂರಿದರು.

‘ನೈಸ್‌ ಸಂಸ್ಥೆಯು ಕಾನೂನು ಉಲ್ಲಂಘಿಸಿ, ರೈತರಿಂದ ಪಡೆದಿರುವ ಭೂಮಿಯನ್ನು ರಿಯಲ್‌ ಎಸ್ಟೇಟ್‌ ದಂಧೆಯಾಗಿಸಿ ಮಾರಾಟ ಮಾಡುತ್ತಿದೆ ಎಂಬ ಆರೋಪವಿದೆ. ಹಲವು ಪ್ರಕರಣಗಳಲ್ಲಿ ಪರಿಹಾರವನ್ನೇ ನೀಡದೇ ವಂಚಿಸಲಾಗಿದೆ’ ಎಂದು ನೈಸ್‌ ಭೂಸಂತ್ರಸ್ತ ರೈತ ಹೋರಾಟ ಸಮಿತಿ ಅಧ್ಯಕ್ಷ ಎನ್‌.ವೆಂಕಟಾಚಲಯ್ಯ ದೂರಿದರು.

‘ಸದನ ಸಮಿತಿ ಹಾಗೂ ವಿವಿಧ ಹಂತದ ನ್ಯಾಯಾಲಯಗಳಲ್ಲಿ ನೈಸ್‌ ಸಂಸ್ಥೆಯು ಮೂಲ ಒಪ್ಪಂದ ಚೌಕಟ್ಟು ಉಲ್ಲಂಘಿಸಿರುವುದು ಸಾಬೀತಾಗಿದೆ. ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವುದು, ಟೋಲ್‌ ರಸ್ತೆಯನ್ನು ಒಪ್ಪಂದದಂತೆ ಅಭಿವೃದ್ಧಿ ಪಡಿಸಿಲ್ಲ. ಟೋಲ್‌ ದರವನ್ನು ಕಾನೂನು ಬಾಹಿರವಾಗಿ ಹೆಚ್ಚಳ ಮಾಡಿರುವುದು ಸಾಬೀತಾಗಿದೆ’ ಎಂದು ಕಾರ್ಯದರ್ಶಿ ಸಾದಪ್ಪ ದೂರಿದರು.

ಪ್ರತಿಭಟನೆಯಲ್ಲಿ ಎಚ್‌.ಆರ್‌.ನವೀನ್‌ಕುಮಾರ್‌, ಹನುಮಯ್ಯ, ಜಯರಾಯಣ್ಣ, ಕೆಂಪೇಗೌಡ, ಪುಟ್ಟರಾಜು, ಗಾಯತ್ರಿ, ಸಣ್ಣರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT