ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್ ಧರಿಸದವರಿಗೆ ಐದೇ ದಿನದಲ್ಲಿ ₹9.26 ಲಕ್ಷ ದಂಡ

ಕೋವಿಡ್ ನಿಯಮ ಕಟ್ಟುನಿಟ್ಟಿಗೆ ಮಾರ್ಷಲ್ ಕಾರ್ಯಾಚರಣೆ
Last Updated 5 ಡಿಸೆಂಬರ್ 2021, 22:39 IST
ಅಕ್ಷರ ಗಾತ್ರ

ಬೆಂಗಳೂರು: ಶಾಪಿಂಗ್‌ ಮಾಲ್‌ಗಳ ಪ್ರವೇಶಕ್ಕೆ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಿರುವ ಬಿಬಿಎಂಪಿ, ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡದವರಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಂಡಿದೆ. ಡಿಸೆಂಬರ್‌ನಲ್ಲಿ ಐದೇ ದಿನಗಳಲ್ಲಿ ₹9.26 ಲಕ್ಷ ದಂಡ ವಸೂಲಿ ಮಾಡಿದೆ.

ವಾರ್ಡ್‌ ಮಟ್ಟದ ಮಾರ್ಷಲ್‌ಗಳು 320 ಪ್ರಕರಣಗಳನ್ನು ದಾಖಲಿಸಿ ₹80 ಸಾವಿರ ದಂಡ ವಸೂಲಿ ಮಾಡಿದ್ದರೆ, ವಿಶೇಷ ತಂಡದಲ್ಲಿನ ಮಾರ್ಷಲ್‌ಗಳು 430 ಪ್ರಕರಣ ದಾಖಲಿಸಿಕೊಂಡು ₹1.07 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದ 3,537 ಪ್ರಕರಣ ಮತ್ತು ಅಂತರ ಕಾಪಾಡದ 170 ಪ್ರಕರಣಗಳನ್ನುಡಿಸೆಂಬರ್ ತಿಂಗಳಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.‌

2020ರ ಮೇ ತಿಂಗಳಿಂದ ಈವರೆಗೆ ಒಟ್ಟು 6.61 ಲಕ್ಷ ಪ್ರಕರಣ ದಾಖಲಿಸಿಕೊಂಡಿರುವ ಮಾರ್ಷಲ್‌ಗಳು, ₹14.84 ಕೋಟಿ ದಂಡ ರೂಪದಲ್ಲಿ ವಸೂಲಿ ಮಾಡಿದ್ದಾರೆ. ಪೊಲೀಸರು ಮತ್ತು ಆರೋಗ್ಯ ನಿರೀಕ್ಷಕರು ಸಂಗ್ರಹಿಸಿರುವ ದಂಡದ ಮೊತ್ತ ಇದರಲ್ಲಿ ಸೇರ್ಪಡೆಯಾಗಿಲ್ಲ.

‘ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನೂ ಪಡೆದರಿಗೆ ಮಾತ್ರ ಶಾಪಿಂಗ್ ಕಾಂಪ್ಲೆಕ್ಸ್, ಚಿತ್ರಮಂದಿರ, ಮಾಲ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ತಪಾಸಣೆ ಕಾರ್ಯವನ್ನು ಮಾಲ್ ಸಿಬ್ಬಂದಿಯೇ ನಿರ್ವಹಿಸಬೇಕು. ಅಗತ್ಯ ಎನಿಸಿದಾಗ ಬಿಬಿಎಂಪಿ ತಂಡ ಪರಿಶೀಲನೆ ನಡೆಸಲಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೂನಾ ಮತ್ತು ಜೈಪುರದಲ್ಲೂ ಓಮೈಕ್ರಾನ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೋವಿಡ್‌ ಸೊಂಕಿತರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ತ್ವರಿತವಾಗಿ ಕಳುಹಿಸಿದ್ದರಿಂದ ಓಮೈಕ್ರಾನ್‌ನ ಮೊದಲ ಎರಡು ಪ್ರಕರಣಗಳು ನಗರದಲ್ಲಿ ಪತ್ತೆಯಾದವು. ಸೋಂಕಿತರ ಜೊತೆ ಸಂಪರ್ಕ ಹೊಂದಿದ ಎಲ್ಲರೂ ಪತ್ತೆಯಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ’ ಎಂದರು.

‘ಕೊರೊನಾ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್ ಸೋಂಕಿ
ತರ ಸಂಪರ್ಕಕ್ಕೆ ಬಂದು ಕೋವಿಡ್‌ ದೃಢಪಟ್ಟ 9 ಮಂದಿಯ ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಲಾಗಿದೆ. ಮೊದಲ ದಿನ ಕಳುಹಿಸಿದ್ದ ಮಾದರಿಗಳ ಫಲಿತಾಂಶ ಭಾನುವಾರ ಬರಬೇಕಿತ್ತು, ಕಾರಣಾಂತರಗಳಿಂದ ಇದು ವಿಳಂಬವಾಗಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ವರದಿ ಕೈಸೇರುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ತಿಳಿಸಿದರು.

ಅಂಕಿ–ಅಂಶ

* ಕೋವಿಡ್‌ ನಿಯಮ ಉಲ್ಲಂಘನೆಗಾಗಿ 2020ರ ಮೇ ತಿಂಗಳಿಂದ ಡಿಸೆಂಬರ್ ತನಕ ವಸೂಲಿ ಮಾಡಲಾದ ದಂಡ-₹ 7.24 ಕೋಟಿ

* 2021ರಲ್ಲಿ ಜನವರಿಯಿಂದ ಈವರೆಗೆ ವಸೂಲಿ ಮಾಡಲಾದ ದಂಡ-₹ 7.60 ಕೋಟಿ

* ಈವರೆಗೆ ವಸೂಲಿ ಮಾಡಲಾದ ಒಟ್ಟು ದಂಡ-₹ 14.84 ಕೋಟಿ

ಡಿಸೆಂಬರ್‌ನಿಂದ ಅಲ್ಪ ಏರಿಕೆ

ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ನವೆಂಬರ್‌ನಲ್ಲಿ ನಿತ್ಯ 150 ಪ್ರಕರಣಗಳ ಆಸುಪಾಸಿನಲ್ಲಿತ್ತು. ಆದರೆ, ಡಿಸೆಂಬರ್‌ 1ರ ಬಳಿಕ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಡಿ.1ರಂದು 206, ಡಿ.2ರಂದು 212, ಡಿ.3ರಂದು 207, ಡಿ.4ರಂದು 256 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ.

‘ಕೋವಿಡ್‌ ಪ್ರಕರಣಗಳು ನಿಧಾನಗತಿಯಲ್ಲಿ ಏರಿಕೆಯಾಗುತ್ತಿರುವುದು ನಿಜ. ಹಾಗಾಗಿ, ಸೋಂಕು ನಿಯಂತ್ರಣ ಕ್ರಮಗಳನ್ನೂ ಕಟ್ಟುನಿಟ್ಟುಗೊಳಿಸಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT