ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್: ಸವಾಲಾದ ತುರ್ತು ಸೇವೆ

ಐಎಸ್‌ಇಸಿ ಜನಸಂಖ್ಯಾ ಸಂಶೋಧನಾ ಕೇಂದ್ರದಿಂದ ಸಮೀಕ್ಷೆ
Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ತುರ್ತು ವೈದ್ಯಕೀಯ ಸೇವೆ ಹಾಗೂ ಖಾಸಗಿ ವ್ಯವಸ್ಥೆಯಡಿ ಚಿಕಿತ್ಸೆ ಪಡೆಯುವುದು ಸವಾಲಾಗಿದೆ ಎನ್ನುವುದು ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. 

ಯೋಜನೆಯ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಎಸ್‌ಇಸಿ) ಜನಸಂಖ್ಯಾ ಸಂಶೋಧನಾ ಕೇಂದ್ರ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ.

ಈ ಸಮೀಕ್ಷೆಗೆ ಕೇಂದ್ರವು ಬೆಂಗಳೂರು, ತುಮಕೂರು ಹಾಗೂ ಯಾದಗಿರಿಯನ್ನು ಆಯ್ಕೆ ಮಾಡಿಕೊಂಡಿತ್ತು. ಕೇಂದ್ರದ ಪ್ರಾಧ್ಯಾಪಕ ಡಾ.ಸಿ.ಎಂ. ಲಕ್ಷ್ಮಣ ಅವರ ನೇತೃತ್ವದ ತಂಡ ಸಮೀಕ್ಷೆ ನಡೆಸಿದ್ದು, ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಈ ವರದಿ ಸಲ್ಲಿಕೆಯಾಗಲಿದೆ.

ಯೋಜನೆಯ ಫಲಾನುಭವಿಗಳಲ್ಲಿ ಶೇ 71.33ರಷ್ಟು ಮಂದಿ ಸರ್ಕಾರಿ ವ್ಯವಸ್ಥೆಯಡಿ ಚಿಕಿತ್ಸೆ ಪಡೆದರೆ, ಶೇ 28.66ರಷ್ಟು ಮಂದಿಗೆ ಮಾತ್ರ ಖಾಸಗಿ ವ್ಯವಸ್ಥೆಯಡಿ ವೈದ್ಯಕೀಯ ಸೇವೆ ದೊರೆತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೊದಲ ಹಂತದಲ್ಲಿ ಮೂರು ಜಿಲ್ಲೆಗಳಿಂದ 400 ಮನೆಗಳಿಗೆ ಭೇಟಿ ನೀಡಿ, ಯೋಜನೆಯ ಬಗ್ಗೆ ವಿಚಾರಿಸಲಾಗಿತ್ತು. ಎರಡನೇ ಹಂತದಲ್ಲಿ ಯೋಜನೆಯಡಿ ಚಿಕಿತ್ಸೆ ಪಡೆದವರ 150 ಜನರ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಪಡೆದು, ಸಂದರ್ಶಿಸಲಾಗಿದೆ. ಇದರಲ್ಲಿ ಪ್ರತಿ ಜಿಲ್ಲೆಯಿಂದ ತಲಾ 50 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. 2023ರ ಜನವರಿಯಲ್ಲಿ ಈ ಸಮೀಕ್ಷೆ ನಡೆದಿದೆ. 

‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ‌ 2018ರಲ್ಲಿ ಆರಂಭವಾಗಿದ್ದು, ಯೋಜನೆಯಡಿ‌ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್‌ ಭಾರತ್’ ಯೋಜನೆ ಅಡಿ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್‌ ಕುಟುಂಬದ ಸದಸ್ಯರಿಗೆ ಗರಿಷ್ಠ ₹ 1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ.

ಸಿಗದ ಸೇವೆ

‘ನಗದುರಹಿತ ಚಿಕಿತ್ಸೆಯಾಗಿರುವುದರಿಂದ ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಹೀಗಾಗಿ, ಖಾಸಗಿ ವ್ಯವಸ್ಥೆಯಡಿ ಚಿಕಿತ್ಸೆ ಸಮಸ್ಯೆಯಾಗಿದೆ. ಸಮೀಕ್ಷೆ ಒಳಪಟ್ಟವರಲ್ಲಿ ಹೆಚ್ಚಿನವರು ಹೃದಯ ಸಂಬಂಧಿ ಸಮಸ್ಯೆಗಳಿಗೆ (ಶೇ 24) ಚಿಕಿತ್ಸೆ ಪಡೆದವರಾಗಿದ್ದಾರೆ. ಶೇ 19.33 ರಷ್ಟು ಮಂದಿ ಕ್ಯಾನ್ಸರ್, ಶೇ 15.33 ರಷ್ಟು ಮಂದಿ ಮೂತ್ರಪಿಂಡ ಸಮಸ್ಯೆ, ಶೇ 12.66 ರಷ್ಟು ಮಂದಿ ಅಪಘಾತ ಹಾಗೂ ಶೇ 6 ರಷ್ಟು ಮಂದಿ ಹೆರಿಗೆ ಮತ್ತು ಮಕ್ಕಳ ಆರೋಗ್ಯಕ್ಕೆ ಚಿಕಿತ್ಸೆ ಪಡೆದಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ. 

‘ಯೋಜನೆಯಡಿ ಸೇವೆ ಪಡೆದವರಲ್ಲಿ ನಾಲ್ಕನೇ ಒಂದರಷ್ಟು ಮಂದಿಗೆ ಮಾತ್ರ ತುರ್ತು ಸೇವೆ ದೊರೆತಿದೆ. ಅಪಘಾತ, ಉಸಿರಾಟ ಸಂಬಂಧಿ ಸಮಸ್ಯೆಗಳು, ಹೆರಿಗೆ ಸೇವೆ ವಿವಿಧ ತುರ್ತು ಸೇವೆಗಳ ಸಂದರ್ಭದಲ್ಲಿ ವೈದ್ಯಕೀಯ ಸೇವೆ ತೃಪ್ತಿದಾಯಕವಾಗಿಲ್ಲ. 10 ಹಾಗೂ ಅದಕ್ಕಿಂತ ಹೆಚ್ಚಿನ ಅವಧಿ ಯೋಜನೆಯಡಿ ಚಿಕಿತ್ಸೆ ಪಡೆದವರ ಪ್ರಮಾಣ ಶೇ 14.66 ರಷ್ಟು ಮಾತ್ರ. ಶೇ 42.66 ರಷ್ಟು ಮಂದಿ ಒಂದರಿಂದ ಐದು ದಿನಗಳು ಚಿಕಿತ್ಸೆ ಪಡೆದಿದ್ದಾರೆ’ ಎಂದು ತಿಳಿಸಲಾಗಿದೆ. 

ಅಂಕಿ–ಅಂಶಗಳು

  • 1,650  ಯೋಜನೆಯಡಿ ಬರುವ ಚಿಕಿತ್ಸಾ ವಿಧಾನಗಳು

  • 3,482  ಯೋಜನೆಯಡಿ ಸೇವೆ ನೀಡುವ ಆಸ್ಪತ್ರೆಗಳು

ಯೋಜನೆ ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದನ್ನು ತಿಳಿಯಲು ಈ ಅಧ್ಯಯನ ಸಹಕಾರಿ. ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ 60ರಷ್ಟು ಮಂದಿಗೆ ಯೋಜನೆ ಬಗ್ಗೆ ತಿಳಿದಿತ್ತು.
।ಡಾ.ಸಿ.ಎಂ. ಲಕ್ಷ್ಮಣ ಐಎಸ್‌ಇಸಿ ಜನಸಂಖ್ಯಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ

‘ಒಂದು ಗಂಟೆಯೊಳಗೆ ಚಿಕಿತ್ಸೆ’

‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ‌ ಬಗ್ಗೆ ಶೇ 98ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಅನುಷ್ಠಾನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಯೋಜನೆಯ ಫಲಾನುಭವಿಗಳಲ್ಲಿ ಶೇ 85.5ರಷ್ಟು ಮಂದಿಗೆ ಆಸ್ಪತ್ರೆಗೆ ತೆರಳಿದ ಒಂದು ಗಂಟೆಯೊಳಗೆ ಚಿಕಿತ್ಸೆ ಆರಂಭಿಸಲಾಗಿದೆ. ಶೇ 12.66ರಷ್ಟು ಮಂದಿಗೆ ಎರಡರಿಂದ ಮೂರು ಗಂಟೆಯ ಅವಧಿಯಲ್ಲಿ ಚಿಕಿತ್ಸೆ ದೊರೆತರೆ ಶೇ 1.33ರಷ್ಟು ಮಂದಿಗೆ ಮರುದಿನ ಬರಲು ಸೂಚಿಸಲಾಗಿದೆ. ಯೋಜನೆಯಡಿ ಚಿಕಿತ್ಸೆ ಪಡೆದವರಲ್ಲಿ ಶೇ 62.66ರಷ್ಟು ಮಂದಿ ಪೂರ್ಣ ಪ್ರಮಾಣದಲ್ಲಿ ಗುಣಮುಖರಾದರೆ ಶೇ 36.66ರಷ್ಟು ಮಂದಿ ಭಾಗಶಃ ಚೇತರಿಸಿಕೊಂಡಿದ್ದಾರೆ.  ‘ಪ್ರತಿ ವರ್ಷ ಸರ್ಕಾರಿ ಯೋಜನೆಯ ಬಗ್ಗೆ ಅಧ್ಯಯನ ನಡೆಸುತ್ತೇವೆ. ಸಮೀಕ್ಷೆಗೆ ಆಯ್ದುಕೊಂಡ ಮೂರು ಜಿಲ್ಲೆಗಳಲ್ಲಿ ಹಿಂದುಳಿದ ಮುಂದುವರಿದ ಹಾಗೂ ಕೊಳೆಗೇರಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೆಲವೊಂದು ಸಮಸ್ಯೆಗಳನ್ನು ಹೊರತುಪಡಿಸಿದರೆ ಜನರಿಗೆ ಯೋಜನೆ ಬಗ್ಗೆ ಉತ್ತಮ ಅಭಿಪ್ರಾಯವಿದೆ’ ಎಂದು ಡಾ.ಸಿ.ಎಂ. ಲಕ್ಷ್ಮಣ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT