ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ಗೆ ಸಿಗದ ಭೂಮಿ

Last Updated 26 ಜೂನ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಕಾಡುಗೋಡಿ ಮೀಸಲು ಅರಣ್ಯದ ಬಳಿ ಕಾಮಗಾರಿ ಆರಂಭಿಸಿದೆ. ಆದರೆ, ಮೆಟ್ರೊ ನಿಲ್ದಾಣ ಹಾಗೂ ಡಿಪೊ ನಿರ್ಮಾಣಕ್ಕೆ ಬೇಕಿರುವ ಅರಣ್ಯ ಭೂಮಿ ಇನ್ನೂ ಹಸ್ತಾಂತರ ಆಗಿಲ್ಲ.

ಕಾಡುಗೋಡಿ ಬಳಿ ಮೆಟ್ರೊ ನಿಲ್ದಾಣಕ್ಕೆ ಹಾಗೂ ಡಿಪೊ ನಿರ್ಮಾಣಕ್ಕೆ ಮೀಸಲು ಅರಣ್ಯದ 42 ಎಕರೆ ಜಾಗವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಬಳಸಿಕೊಳ್ಳಲಿದೆ. ಇದಕ್ಕೆ ಬದಲಿಯಾಗಿ ಕಾಡು ಬೆಳೆಸುವುದಕ್ಕೆ ಜೋಯಿಡಾ ತಾಲ್ಲೂಕಿನಲ್ಲಿ ಕಾಳಿ ಹುಲಿ ಯೋಜನೆ ಪ್ರದೇಶದ ಬಳಿ 26.5 ಎಕರೆ ಭೂಮಿಯನ್ನು ನೀಡಲು ನಿಗಮ ಒಪ್ಪಿದೆ. ಜತೆಗೆ, ಬಸವನತಾರಾ ಮೀಸಲು ಅರಣ್ಯದಲ್ಲಿ 16 ಎಕರೆ ನೀಡಲು ಮುಂದಾಗಿದೆ.

ನಗರದಿಂದ ಸುಮಾರು 480 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ಬದಲಿ ಜಾಗ ನೀಡುವ ಪ್ರಸ್ತಾವಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ.ಆದರೆ, ಬಸವನತಾರಾ ಜಾಗ ಬೇಡ ಎಂದು ಅರಣ್ಯ ಇಲಾಖೆ ಹೇಳಿದೆ. ಈ ಜಾಗ ಕಲ್ಲಿನ ಕ್ವಾರಿ ಪಕ್ಕದಲ್ಲಿದೆ. ಇಲ್ಲಿ ಪ್ಲಾಂಟೇಷನ್‌ ಮಾಡಲು ಸಾಧ್ಯವಿಲ್ಲ ಎಂಬುದು ಅರಣ್ಯ ಇಲಾಖೆಯ ವಾದ.

‘ಮೀಸಲು ಅರಣ್ಯದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಬೇಕಾದರೆ ಅದಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಬೇಕಾಗುತ್ತದೆ. ನಮ್ಮಿಂದ ಜಾಗ ಪಡೆಯುವವವರು ಅದಕ್ಕೆ ಪ್ರತಿಯಾಗಿ ಬೇರೆ ಕಡೆ ಜಾಗ ಬಿಟ್ಟುಕೊಡಬೇಕು. ಬದಲಿ ಜಾಗವು ನಮಗೆ ಸಮ್ಮತವಾದರೆ ಮೀಸಲು ಅರಣ್ಯದ ಜಾಗವನ್ನು ಬಿಟ್ಟುಕೊಡಬಹುದು’ ಎಂದು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ತಿಳಿಸಿದರು.

‘ಅರಣ್ಯ ಪಕ್ಕದ ಖಾಸಗಿ ಜಾಗದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬಸವನತಾರಾ ಜಾಗವನ್ನು ಮೆಟ್ರೊ ನಿಗಮಕ್ಕೆ ಮರಳಿಸಿದ್ದೇವೆ. ಅದರ ಬದಲು ತಿಪ್ಪಗೊಂಡನಹಳ್ಳಿ ಬಳಿ ಜಾಗ ಕೇಳಿದ್ದೇವೆ. ದಾಂಡೇಲಿಯ ಜಾಗವನ್ನು ಒಪ್ಪಿಕೊಂಡಿದ್ದೇವೆ. ಈ ಮೂಲಕ ಹುಲಿ ಮೀಸಲು ಪ್ರದೇಶ ಹೆಚ್ಚಾಗಲಿದೆ’ ಎಂದು ಅವರು ಹೇಳಿದರು.

ಕಾಡುಗೋಡಿಯಲ್ಲಿ ಮೆಟ್ರೊ ಮಾರ್ಗಕ್ಕೆ (ರೀಚ್‌ 1ಎ) ಹೆಚ್ಚೇನೂ ಜಾಗ ಬೇಕಾಗುವುದಿಲ್ಲ. ಆದರೆ, ಡಿಪೊ ನಿರ್ಮಾಣಕ್ಕೆ ಹೆಚ್ಚಿನ ಜಾಗದ ಅಗತ್ಯವಿದೆ. ಇಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಹೆಚ್ಚು ಮರಗಳೂ ಇಲ್ಲ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌
ವರೆಗಿನ ಮೆಟ್ರೊ ಮಾರ್ಗದ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಈ ಮಾರ್ಗದಲ್ಲಿ ಕಾಡುಗೋಡಿ, ಉಜ್ವಲ ವಿದ್ಯಾಲಯ ಹಾಗೂ ವೈಟ್‌ಫೀಲ್ಡ್‌ ನಿಲ್ದಾಣಗಳಿಗೆ ಅರಣ್ಯ ಇಲಾಖೆಗೆ ಸೇರಿದ ಸ್ಥಳ ಬಳಕೆ ಆಗಲಿದೆ.

ಕಾಡುಗೋಡಿ ಹಾಗೂ ಉಜ್ವಲ ವಿದ್ಯಾಲಯ ನಿಲ್ದಾಣಗಳಿಗೆ ಅರಣ್ಯ ಇಲಾಖೆಯ ಸ್ವಲ್ಪ ಜಾಗ ಮಾತ್ರ ಬಳಕೆ ಆಗುತ್ತದೆ. ವೈಟ್‌ಫೀಲ್ಡ್‌ ನಿಲ್ದಾಣ ಮೀಸಲು ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT