ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿಯಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ: ಕುಲಸಚಿವರ ಸುತ್ತೋಲೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಅವಕಾಶ: ಸುತ್ತೋಲೆ ಹೊರಡಿಸಿದ ಕುಲಸಚಿವರು
Last Updated 31 ಮಾರ್ಚ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಲು ನಿರ್ಬಂಧ ವಿಧಿಸಿ ಕುಲಸಚಿವರು ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ.

ನೂತನ ಕುಲಪತಿ ನೇಮಿಸುವಂತೆ ಒತ್ತಾಯಿಸಿ ಹಲವು ದಿನಗಳಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲು ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಯಾವುದೇ ಗುಂಪು, ರಾಜಕೀಯ ಸಂಘಟನೆ ಅಥವಾ ಇತರ ಸಂಘಟನೆಗಳು ಬೆಂಗಳೂರು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ಮಾಡಬಾರದು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ
ಗಳನ್ನು ನಡೆಸುವಂತೆ ಹೈಕೋರ್ಟ್‌ ಆದೇಶ ಹೊರಡಿಸಿರುವುದನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

‘ಜ್ಞಾನಭಾರತಿ ಕ್ಯಾಂಪಸ್‌ನ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಬಳಿ ವಿದ್ಯಾರ್ಥಿ ಸಂಘಟನೆಗಳು ಯಾವುದಾದರೂ ಒಂದು ವಿಚಾರದ ಬಗ್ಗೆ ಗುಂಪು ಕಟ್ಟಿಕೊಂಡು ಪ್ರತಿಭಟನೆ, ಸಭೆ, ಮೆರವಣಿಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಕೆಲವೊಮ್ಮೆ ಅಹಿತಕರ ಘಟನೆಗಳು ನಡೆದು ಪ್ರತಿಭಟನಕಾರರಿಗೆ ಹಾಗೂ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಿಂದ, ಸಾರ್ವಜನಿಕರ ನೆಮ್ಮದಿಗೂ ಮತ್ತು ಕಾನೂನು ಸುವ್ಯವಸ್ಥೆಗೂ ತೊಂದರೆಯಾಗಿದೆ. ಆದ್ದರಿಂದ, ಹೈಕೋರ್ಟ್‌ ಆದೇಶವನ್ನು ಪಾಲಿಸುವಂತೆ ಪೊಲೀಸ್‌ ಇಲಾಖೆಯು ಪತ್ರ ಬರೆದಿದೆ’ ಎಂದು ಕುಲಸಚಿವರು ತಿಳಿಸಿದ್ದಾರೆ.

‘ಪ್ರತಿಭಟನೆಗಳಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣದ ಮೇಲೆಯೂ ಪರಿಣಾಮ ಬೀರಿದೆ. ಹೀಗಾಗಿ, ಬೆಂಗಳೂರು ವಿಶ್ವವಿದ್ಯಾ ಲಯದ ಯಾವುದೇ ವಿದ್ಯಾರ್ಥಿ ಹಾಗೂ ಇತರೆ ಸಂಘಟನೆಗಳು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ’ ಎಂದು ತಿಳಿಸಿದ್ದಾರೆ.

‘ಆದ್ದರಿಂದ, ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಅಧ್ಯಕ್ಷರು, ನಿರ್ದೇಶಕರು, ಸಂಯೋಜಕರು ಮತ್ತು ವಿದ್ಯಾರ್ಥಿ ನಿಲಯಗಳ ಕ್ಷೇಮ ಪಾಲಕರು ಹೈಕೋರ್ಟ್‌ ನಿರ್ದೇಶನ ಹಾಗೂ ಪೊಲೀಸರ ಸೂಚನೆಯನ್ನು ತಮ್ಮ ವಿಭಾಗದ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಗಮನಕ್ಕೆ ತರಬೇಕು’ ಎಂದು ಅವರು ಸೂಚಿಸಿದ್ದಾರೆ.

ವಿದ್ಯಾರ್ಥಿಗಳ ಧರಣಿ: ಬೆಂಗಳೂರು ವಿಶ್ವವಿದ್ಯಾಲಯ ಉಳಿಸಿ ಎಂದು ವಿದ್ಯಾರ್ಥಿಗಳು ಗುರುವಾರ ವಿಶ್ವವಿದ್ಯಾಲಯದ ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಯನ್ನು ಶೀಘ್ರ ನೇಮಿಸಬೇಕು. ಹತ್ತು ದಿನಗಳಿಂದಲೂ ವಿಶ್ವವಿದ್ಯಾಲಯದಲ್ಲಿ ಕುಲಪತಿ ಇಲ್ಲ. ಇದರಿಂದ, ಶೈಕ್ಷಣಿಕ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರಿದೆ ಎಂದು ವಿದ್ಯಾರ್ಥಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT