ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ದರಕ್ಕೆ ಸಿಗದ ಟ್ಯಾಂಕರ್ ನೀರು

ಬಿಬಿಎಂಪಿ– ಜಲಮಂಡಳಿ ಪ್ರಕಟಣೆಗೆ ‘ಬೆಲೆ’ ಇಲ್ಲ; ಖಾಸಗಿ ಟ್ಯಾಂಕರ್‌ ಮಾಲೀಕರು ಹೇಳಿದ್ದೇ ‘ಬೆಲೆ’
Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ಏರಿಯಾಗೆ ನಮ್ಮ ಸೇವೆ ಇಲ್ಲ’, ‘ನಾವು ಅಲ್ಲೆಲ್ಲ ಬರೊಲ್ಲ’, ‘ಅವರೇನೋ ಪ್ರಕಟಿಸಿದ್ದಾರೆ ಅಂತ ನಾವು ಬರೋಕಾಗಲ್ಲ’, ‘ನಮ್ಮ ರೇಟ್‌ ಕೊಟ್ಟರೆ ಈಗಲೇ ಬರುತ್ತೇವೆ...’

ಸರ್ಕಾರ ನಿಗದಿಪಡಿಸಿರುವ ದರ ನೀಡಿ ನೀರು ಖರೀದಿಸಲು ನಾಗರಿಕರು ನೋಂದಾಯಿತ ಟ್ಯಾಂಕರ್‌ನವರಿಗೆ ಕರೆ ಮಾಡಿದಾಗ ಸಿಗುತ್ತಿರುವ ಉತ್ತರಗಳು ಇವು.

ಇಲ್ಲಿವರೆಗೂ ಜಲಮಂಡಳಿಯಲ್ಲಿ 1,732 ಖಾಸಗಿ ನೀರಿನ ಟ್ಯಾಂಕರ್‌ಗಳು ನೋಂದಣಿಯಾಗಿವೆ. ಜಿಲ್ಲಾಡಳಿತ ನಿಗದಿಪಡಿಸಿರುವ ದರದ ಪ್ರಕಾರವೇ ಇವರಿಂದ ನೀರು ಪಡೆಯಬಹುದು ಎಂದು ಟ್ಯಾಂಕರ್‌ ಮಾಲೀಕರ ಹೆಸರು, ಮೊಬೈಲ್‌ ಸಂಖ್ಯೆ, ನೀರು ಸರಬರಾಜು ಮಾಡುವ ಪ್ರದೇಶದ ವಿವರಗಳಿರುವ ‘ಮಾಹಿತಿ ಪಟ್ಟಿ’ಯನ್ನು ಬಿಬಿಎಂಪಿ– ಜಲಮಂಡಳಿ ಸಾರ್ವಜನಿಕ ಪ್ರಕಟಣೆ ಹೊರಡಿಸಿವೆ.‌ ಇವರ ಪ್ರಕಟಣೆಗೆ ಖಾಸಗಿ ಟ್ಯಾಂಕರ್‌ ಮಾಲೀಕರು ‘ಬೆಲೆ’ ನೀಡುತ್ತಿಲ್ಲ. ಆದರೆ, ಎಂದಿನಂತೆ ಒಂದೂವರೆ ಎರಡೂವರೆ ಸಾವಿರ ‘ಬೆಲೆ’ ನೀಡಿದರೆ ಒಂದು ಗಂಟೆಯಲ್ಲೇ ನೀರಿನ ಟ್ಯಾಂಕರ್ ನಾಗರಿಕರ ಮನೆ ಬಾಗಿಲಲ್ಲಿರುತ್ತದೆ..! 

‘ರಾಜರಾಜೇಶ್ವರಿ ನಗರ, ಮೈಲಸಂದ್ರ, ಕೆಂಚೇನಹಳ್ಳಿ, ಹಲಗೆವಡೇರಹಳ್ಳಿ (ಎಚ್.ವಿ. ಹಳ್ಳಿ) ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳ ಮಾಹಿತಿಯನ್ನು ಬಿಬಿಎಂಪಿ ನೀಡಿದೆ. ಅವರಿಗೆ ಕರೆ ಮಾಡಿದರೆ, ‘ನಾವು ನಿಮ್ಮ ಪ್ರದೇಶದವರಲ್ಲ, ಬನಶಂಕರಿ ಕಡೆಯವರು’ ಎಂದು ಹೇಳಿದರು. ಸಮಸ್ಯೆ ಇದ್ದರೆ ಜಲಮಂಡಳಿಯ ಕಾಲ್‌ಸೆಂಟರ್‌ 1916ಗೆ ಕರೆ ಮಾಡಿ ಎಂದಿದ್ದಾರೆ. ಕಾಲ್‌ಸೆಂಟರ್‌ಗೆ ಕರೆ ಮಾಡಿದರೆ, ಅಲ್ಲಿ, ಎಂಜಿನಿಯರ್‌ ಒಬ್ಬರ ಮೊಬೈಲ್‌ ಸಂಖ್ಯೆ ನೀಡಿದರು. ಅವರಿಗೆ ಕರೆ ಮಾಡಿದರೆ ಮೊಬೈಲ್‌ ಸ್ವಿಚ್ ಆಫ್ ಅಂತ ಬಂತು. ಮತ್ತೆ ಕಾಲ್‌ ಸೆಂಟರ್‌ಗೆ ಕರೆ ಮಾಡಿದರೆ, ‘ಎಂಜಿನಿಯರ್ ಅವರೇ ಕ್ರಮ ಕೈಗೊಳ್ಳಬೇಕು, ನಮಗೆ ಇಷ್ಟೇಗೊತ್ತು’ ಎಂದು ಸುಮ್ಮನಾದರು. ನಾವು ಇನ್ಯಾರನ್ನು ಕೇಳಬೇಕು, ಸಮಸ್ಯೆ ಬಗೆಹರಿಸದ ಕಾಲ್‌ಸೆಂಟರ್‌ ಸಂಖ್ಯೆಯನ್ನು ಏಕೆ ನೀಡಬೇಕು’ ಎಂದು ರಾಜರಾಜೇಶ್ವರಿನಗರದ ಎಂ. ಪ್ರಸಾದ್‌ ಪ್ರಶ್ನಿಸಿದರು.

ದಾಸಹರಳ್ಳಿ, ಬೊಮ್ಮನಹಳ್ಳಿ, ಮಹದೇವಪುರ, ವಿಜಯನಗರ, ರಾಜಾಜಿನಗರ, ಯಲಹಂಕ ಸೇರಿದಂತೆ ಬಹುತೇಕ ಪ್ರದೇಶಗಳಲ್ಲೂ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ನಿಗದಿತ ದರಕ್ಕೆ ನೀರು ಪೂರೈಸಲು ಆಸಕ್ತಿ ತೋರುತ್ತಿಲ್ಲ. ‘ನಮ್ಮ ದರ ಕೊಟ್ಟರೆ ಈಗಲೇ ಬರುತ್ತೇವೆ, ಆದರೆ ಯಾರಿಗೂ ಹೇಳಬಾರದು ನೋಡಿ.. ಇಲ್ಲದಿದ್ದರೆ ನಿಮ್ಮ ಇಷ್ಟ’ ಎಂದು ಬಿಬಿಎಂಪಿ– ಜಲಮಂಡಳಿಯ ‘ಮಾಹಿತಿ ಪಟ್ಟಿ’ಯಲ್ಲಿರುವ ಟ್ಯಾಂಕರ್‌ಗಳ ಮಾಲೀಕರೋ ಅಥವಾ ಚಾಲಕರೋ ಹೇಳುತ್ತಾರೆ. ಹೀಗಿದ್ದಾಗ ನಾವೇನು ಮಾಡೋದು’ ಎಂದು ಹಲವು ನಾಗರಿಕರು ಅಳಲು ತೋಡಿಕೊಂಡರು.

ರಾಜಕಾರಣಿಗಳ ಛಾಯೆ!

ನಗರದಲ್ಲಿರುವ ಬಹುತೇಕ ಖಾಸಗಿ ಟ್ಯಾಂಕರ್‌ಗಳ ಮಾಲೀಕತ್ವ ರಾಜಕಾರಣಿಗಳದ್ದು ಅಥವಾ ಅವರ ಹಿಂಬಾಲಕರದ್ದು. ಹೀಗಾಗಿಯೇ ಜಿಲ್ಲಾಡಳಿತ ಬಿಬಿಎಂಪಿ ಜಲಮಂಡಳಿ ಆದೇಶಗಳಿಗೆ ‘ಬೆಲೆ’ ಇಲ್ಲ. ಅವರು ನಿಗದಿ ಮಾಡಿದ್ದೇ ‘ಬೆಲೆ’. ಅದನ್ನು ಕೇಳುವಂತಿಲ್ಲ ಎಂಬ ಪರಿಸ್ಥಿತಿ ನಗರದಲ್ಲಿದೆ. ‘ಖಾಸಗಿ ಟ್ಯಾಂಕರ್‌ಗಳ ನೋಂದಣಿ ಕಡ್ಡಾಯ ಎಂದು ಹೇಳಲಾಗಿದ್ದರೂ ನೋಂದಣಿ ಮಾಡಿಕೊಳ್ಳದವರ ಮೇಲೆ ಏನು ಕ್ರಮವಾಗಿಲ್ಲ. ಶಾಸಕ ಸಚಿವ ಪ್ರಭಾವಿ ನಾಯಕರೇ ನಮ್ಮ ಮಾಲೀಕರು. ಅವರನ್ನೇನು ಮಾಡಲು ಸಾಧ್ಯ ಎಂಬುದು ಟ್ಯಾಂಕರ್‌ ಡ್ರೈವರ್‌ಗಳ ಮಾತು. ಅದು ನಿಜವೇ ಆಗಿದ್ದು ಅವರ ಹೇಳುವ ದರವನ್ನೇ ನೀಡಿ ನಾವು ನೀರು ಖರೀದಿಸಬೇಕಾಗಿದೆ. ಇಲ್ಲದಿದ್ದರೆ ನಮಗೆ ನೀರು ಇರುವುದಿಲ್ಲ’ ಎಂದು ಲಗ್ಗೆರೆಯ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು ತಮ್ಮ ಸಂಕಷ್ಟ ಹೇಳಿಕೊಂಡರು.

’ಟ್ಯಾಂಕರ್‌ ಜಪ್ತಿ ಮಾಡುತ್ತೇವೆ‘

‘ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಹಣ ಕೇಳುವಂತಿಲ್ಲ. ಕರೆ ಮಾಡಿದಾಗ ‘ಆ ಪ್ರದೇಶ ನಮ್ಮದಲ್ಲ’ ಎಂದೆಲ್ಲ ಹೇಳುವಂತಿಲ್ಲ. ಬಿಬಿಎಂಪಿ ಎಲ್ಲವನ್ನೂ ಪರಿಶೀಲಿಸಿಯೇ ಆಯಾ ಪ್ರದೇಶಕ್ಕೆ ಟ್ಯಾಂಕರ್‌ಗಳನ್ನು ನಿಗದಿಪಡಿಸಿ ‘ಮಾಹಿತಿ ಪಟ್ಟಿ’ಯನ್ನು ಪ್ರಕಟಿಸಿದೆ. ಅದರಂತೆಯೇ ನಾಗರಿಕರು ಅವರಿಗೆ ಕರೆ ಮಾಡಿ ನೀರು ಪಡೆಯಬಹುದು. ಟ್ಯಾಂಕರ್‌ ಮಾಲೀಕರು ನೀರು ಪೂರೈಕೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಟ್ಯಾಂಕರ್‌ಗಳನ್ನೇ ಜಪ್ತಿ ಮಾಡುತ್ತೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಹೇಳಿದರು. ‘ಟ್ಯಾಂಕರ್‌ ಮಾಲೀಕರು ಕರೆ ಮಾಡಿದಾಗ ನೀರು ಸರಬರಾಜಿಗೆ ಒಪ್ಪದಿದ್ದರೆ ಬಿಬಿಎಂಪಿಯ 1533 ಸಂಖ್ಯೆಗೆ ಕರೆ ಮಾಡಬಹುದು. ನಮ್ಮ ವಲಯ ಆಯುಕ್ತರು ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಇನ್ನು ಎರಡು ದಿನಗಳಲ್ಲಿ ‘ಮಾಹಿತಿ ಪಟ್ಟಿ’ಯನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುವುದು’ ಎಂದು ಹೇಳಿದರು.

ಹೇಳಿದ್ದೊಂದು ಇರುವುದೊಂದು!

‘ಬೆಂಗಳೂರು ನಗರದಲ್ಲಿ ಖಾಸಗಿಯ ಸುಮಾರು 3500 ಟ್ಯಾಂಕರ್‌ಗಳಿದ್ದು ಅವುಗಳೆಲ್ಲವೂ ನೋಂದಣಿಯಾಗಬೇಕು. ಇಲ್ಲದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಾಗೂ ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌ ಹೇಳಿದ್ದರು. ಗಡುವು ಮುಗಿದಿದ್ದರೂ 1732 ಟ್ಯಾಂಕರ್‌ಗಳು ಮಾತ್ರ ನೋಂದಣಿಯಾಗಿವೆ. ಆ ಪೈಕಿ ಎಲ್ಲರೂ ಜಿಲ್ಲಾಡಳಿತ ನಿಗದಿಪಡಿಸಿರುವ ದರಕ್ಕೆ ನೀರನ್ನು ನೀಡಲು ಒಪ್ಪಿಲ್ಲ. ಇಷ್ಟಾದರೂ ಅವರೆಲ್ಲರ ಮೊಬೈಲ್‌ ಸಂಖ್ಯೆ ಪ್ರದೇಶವನ್ನು ನಿಗದಿಪಡಿಸಿ ಅವರಿಂದ ನೀರು ಪಡೆಯಿರಿ ಎಂದು  ಬಿಬಿಎಂಪಿ– ಜಲಮಂಡಳಿ ಮಾಹಿತಿ ಪಟ್ಟಿ ಪ್ರಕಟಿಸಿವೆ. ಬಿಬಿಎಂಪಿಯೇ ನೀಡಿರುವ ‘ಮಾಹಿತಿ ಪಟ್ಟಿ’ಯಲ್ಲಿ 1250 ಟ್ಯಾಂಕರ್‌ಗಳಷ್ಟೇ ಇವೆ. 482 ಟ್ಯಾಂಕರ್‌ಗಳ ಮಾಹಿತಿಯೇ ಇಲ್ಲ. ಹೀಗಾಗಿ ಇವರು ಹೇಳುತ್ತಿರುವುದು ಒಂದು ವಾಸ್ತವದಲ್ಲಿ ಇರುವುದೇ ಒಂದು ಎಂಬಂತಾಗಿದೆ.

ಸರ್ಕಾರ ನಿಗದಿಪಡಿಸಿರುವ ಖಾಸಗಿ ಟ್ಯಾಂಕರ್‌ನ ನೀರಿನ ದರ ವಿವರ

6000 ಲೀಟರ್‌ ನೀರು (ಜಿಎಸ್‌ಟಿ ಸೇರಿ); 8000 ಲೀಟರ್‌ ನೀರು (ಜಿಎಸ್‌ಟಿ ಸೇರಿ); 12000 ಲೀಟರ್‌ ನೀರು (ಜಿಎಸ್‌ಟಿ ಸೇರಿ)

5 ಕಿ.ಮೀ ವರೆಗೆ; ₹600; ₹700; ₹1000

5ರಿಂದ 10 ಕಿ.ಮೀ ವರೆಗೆ; ₹750; ₹850; ₹ 1200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT