ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಖ್ಯಾತ ರೌಡಿಶೀಟರ್‌ ‘ಸ್ಲಂ’ ಭರತ ಎನ್‌ಕೌಂಟರ್‌

Last Updated 27 ಫೆಬ್ರುವರಿ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ‌, ಕೊಲೆ ಯತ್ನ ಸೇರಿ 43 ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ರೌಡಿ ಸ್ಲಂ ಭರತನನ್ನು (32) ಉತ್ತರ ವಿಭಾಗದ ಪೊಲೀಸರು ಗುರುವಾರ ನಸುಕಿನಲ್ಲಿ ಎನ್‌ಕೌಂಟರ್‌ ಮಾಡಿದ್ದಾರೆ.

ತಲೆಮರೆಸಿಕೊಂಡು ಓಡಾಡುತ್ತಿದ್ದ ಭರತನನ್ನು ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಮೊರದಾಬಾದ್‌
ನಲ್ಲಿ ಬಂಧಿಸಿದ್ದ ಪೊಲೀಸರು, ಎರಡು ಕಾರುಗಳಲ್ಲಿ ಆತನನ್ನು ನಗರಕ್ಕೆ ಕರೆತರುತ್ತಿದ್ದರು. ಪೀಣ್ಯ ಬಳಿಬುಧವಾರ ತಡರಾತ್ರಿ ಕಾರು ಅಡ್ಡಗಟ್ಟಿದ್ದ ಆತನ ಸಹಚರರು, ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರು. ಪೊಲೀಸರ ಕೈ‌ ಕಚ್ಚಿ ಕಾರಿನಿಂದ ಹೊರಗೆ ಬಂದಿದ್ದ ಭರತ, ಸಹಚರರ ಜೊತೆ ಝೆನ್‌ ಕಾರಿನಲ್ಲಿ ಪರಾರಿಯಾಗಿದ್ದ.

ರಾತ್ರಿಯೀಡಿ ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಗುರುವಾರ ನಸುಕಿನಲ್ಲಿ ಹೆಸರಘಟ್ಟ ಬಳಿ ಆರೋಪಿ ಕಾಣಿಸಿಕೊಂಡಿದ್ದ. ಸ್ಥಳಕ್ಕೆ ಹೋಗಿದ್ದ ಇನ್‌ಸ್ಪೆಕ್ಟರ್‌ಗಳಾದ ದಿನೇಶ್‌ ಪಾಟೀಲ ಹಾಗೂ ಲೋಹಿತ್, ಆತನನ್ನು ಬಂಧಿಸಲು ಮುಂದಾಗಿದ್ದರು. ಅದೇ ವೇಳೆಯ ಭರತ, ಇನ್‌ಸ್ಪೆಕ್ಟರ್ ದಿನೇಶ್ ಮೇಲೆಯೇ ಮೂರು ಸುತ್ತು ಗುಂಡು ಹಾರಿಸಿದ್ದ.

ಈ ಪೈಕಿ, ಒಂದು ಗುಂಡು ದಿನೇಶ್ ಅವರ ಹೊಟ್ಟೆಗೆ ತಗುಲಿತ್ತು. ಅವರು ಗುಂಡು ನಿರೋಧಕ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಆಗಿಲ್ಲ. ಎರಡು ಗುಂಡುಗಳು ಕಾರುಗಳ ಮೇಲೆ ಬಿದ್ದಿವೆ.

ಸ್ಥಳದಲ್ಲಿದ್ದ ನಂದಿನಿ ಲೇಔಟ್‌ ಇನ್‌ಸ್ಪೆಕ್ಟರ್ ಲೋಹಿತ್, ಆತ್ಮರಕ್ಷಣೆಗಾಗಿ ಭರತನ ಮೇಲೆ ಎರಡು ಗುಂಡು ಹಾರಿಸಿದರು. ಸ್ಥಳದಲ್ಲೇ ಕುಸಿದುಬಿದ್ದ ಭರತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾನೆ.

‘ಎನ್‌ಕೌಂಟರ್‌’ ಬಗ್ಗೆ ಮಾಹಿತಿ ನೀಡಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್‌, ‘ಸ್ಲಂನಲ್ಲಿ ವಾಸವಿದ್ದ ಭರತ, ತನ್ನದೇ ಗ್ಯಾಂಗ್‌ ಕಟ್ಟಿಕೊಂಡು 2006ರಿಂದಲೇ ಅಪರಾಧ ಎಸಗಲಾರಂಭಿಸಿದ್ದ. ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ, ಸುಲಿಗೆ, ಪೊಲೀಸರ ಮೇಲೆ ಹಲ್ಲೆ ಸೇರಿ ಆತನ ವಿರುದ್ಧ 43 ಪ್ರಕರಣಗಳು ದಾಖಲಾಗಿದ್ದವು’ ಎಂದರು.

‘2018ರಲ್ಲಿ ಸಿಸಿಬಿ ಪೊಲೀಸರ ಮೇಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆತನ ಕಾಲಿಗೆ ಪೊಲೀಸರು ಗುಂಡು ಹೊಡೆದು ಸೆರೆ ಹಿಡಿದಿದ್ದರು. ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು
ಗುಣಮುಖನಾಗಿದ್ದ ಆತ, ಪುನಃ
ಕೃತ್ಯ ಎಸಗಲಾರಂಭಿಸಿದ್ದ. ಗನ್‌ ಇಟ್ಟುಕೊಂಡು ಓಡಾಡುತ್ತಿದ್ದ’ ಎಂದೂ ವಿವರಿಸಿದರು.

ಸಹಚರರು ವಶಕ್ಕೆ: ‌ಭರತ ಸಾವಿನ ಸುದ್ದಿ ತಿಳಿದು ಆತನ ಮೃತದೇಹ ಇಟ್ಟಿದ್ದ ಸಪ್ತಗಿರಿ ಆಸ್ಪತ್ರೆ ಬಳಿ ಬಂದಿದ್ದ 10ಕ್ಕೂ ಹೆಚ್ಚು ಸಹಚರರನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದರು.

ರೌಡಿ ಮುಲಾಮ ಶಿಷ್ಯ ‘ಸ್ಲಂ’ ಭರತ

ರೌಡಿ ಮುಲಾಮ ಅಲಿಯಾಸ್‌ ಲೋಕೇಶನ ಗರಡಿಯಲ್ಲಿ ಭರತ ಪಳಗಿದ್ದ. ರಾಮನಗರದ ಈತ ರಾಜಗೋಪಾಲನಗರದಲ್ಲಿ ನೆಲೆಸಿದ್ದ. ರೌಡಿ ಲಕ್ಷ್ಮಣನಿಗೂ ಆಪ್ತನಾಗಿದ್ದ. ಲಕ್ಷ್ಮಣ ಸತ್ತ ನಂತರ ಸೈಕಲ್ ರವಿ ಜೊತೆ ಒಡನಾಟ ಹೊಂದಿದ್ದ. ಲಕ್ಷ್ಮಣನ ಹಿಡಿತವಿದ್ದ ಪ್ರದೇಶದಲ್ಲಿ ‘ಡಾನ್‌’ ಎಂದು ಗುರುತಿಸಿಕೊಳ್ಳಲು ಯೋಜನೆ ರೂಪಿಸಿದ್ದ. ಈ ಉದ್ದೇಶದಿಂದ ಲಕ್ಷ್ಮಣನ ಸಹಚರರನ್ನು ಸಂಪರ್ಕಿಸಿ ಮಾತುಕತೆ ಕೂಡಾ ನಡೆಸಿದ್ದ. ತನ್ನ ಗುರು ಮುಲಾಮನ ಜೊತೆ ಸಂಪರ್ಕದಲ್ಲಿದ್ದುಕೊಂಡು ರೌಡಿಸಂನಲ್ಲಿ ಸಕ್ರಿಯವಾಗಿದ್ದ.

ದೊಡ್ಡ ಹೆಸರು ಮಾಡಬೇಕು ಎಂಬ ಕಾರಣಕ್ಕೆ ಸಿನಿಮಾ ನಟರ ಹತ್ಯೆಗೆ ಸಂಚು ರೂಪಿಸಿದ್ದ. ಜೈಲು ಸೇರಿದ್ದ ಭರತ, ಜೈಲಿನಿಂದ ಹೊರಬಂದ ಕೆಲವೇ ದಿನಗಳಲ್ಲಿ ಹಳೇ ದ್ವೇಷದಿಂದ ಕಾಮಾಕ್ಷಿಪಾಳ್ಯದಲ್ಲಿ ಮಹೇಶನನ್ನು ಕೊಲೆ ಮಾಡಿಸಿದ್ದ.

ಸ್ಲಂ ಭರತ, ಕತ್ರಿಗುಪ್ಪೆ ಲಿಂಗನ ವಿರೋಧಿಯಾಗಿದ್ದ. ಇದೇ ಕಾರಣಕ್ಕೆ ಸೈಕಲ್‌ ರವಿ ಜೊತೆ ಸೇರಿ ಲಿಂಗನ ಸಹಚರರ ಮೇಲೆ ಕಣ್ಣು ಹಾಕಿದ್ದ. ಕತ್ರಿಗುಪ್ಪೆ ಪವನ ಹತ್ಯೆಗೂ ಸಂಚು ರೂಪಿಸಿದ್ದ. ಎರಡು ತಿಂಗಳ ಹಿಂದೆ‌ ಲಕ್ಷ್ಮಣ ಕೊಲೆ ಆರೋಪಿ‌ ಹೇಮಿಯ ತಮ್ಮ ಚೇತನ್‌ ಮೇಲೆ ದಾಳಿ ನಡೆಸಿದ್ದ. ಆದರೆ, ಅವನ ಸಂಚು ವಿಫಲವಾಗಿತ್ತು.

ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಎಂದು ಪ್ರತ್ಯೇಕಿಸಿಕೊಂಡು ರೌಡಿಸಂ ನಡೆಯುತ್ತಿತ್ತು. ದಕ್ಷಿಣ ಭಾಗವನ್ನು ಸೈಕಲ್ ರವಿ ಹಿಡಿತದಲ್ಲಿ ಇಟ್ಟುಕೊಂಡಿದ್ದರೆ ಉತ್ತರ ಭಾಗವನ್ನು ಸ್ಲಂ ಭರತ ತನ್ನ ಹಿಡಿತಕ್ಕೆ ತೆಗದುಕೊಂಡಿದ್ದ.

ಭರತ ಮೇಲಿನ ಪ್ರಕರಣಗಳು

- ಜ. 19ರಂದು ರಾಜಗೋಪಾಲನಗರದಲ್ಲಿ ಶ್ರೀನಿವಾಸ್ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಭರತ್ ಮತ್ತು ಆತನ ಸಹಚರರು ಜಖಂಗೊಳಿಸಿದ್ದರು.

-ಜ. 19ರಂದು ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ಕಾರಿನಲ್ಲಿ ಮಲಗಿದ್ದಾಗ ಭರತ ಮತ್ತು ಸಹಚರರು, ಕಾರು ಜಖಂಗೊಳಿಸಿ ಚೇತನ್ ಅವರನ್ನು ಬೆದರಿಸಿ ಸುಲಿಗೆ ಮಾಡಿದ್ದರು.

-ಜ. 1ರಂದು ಪೀಣ್ಯ ತಿಪ್ಪೇನಹಳ್ಳಿಯ ದಿಲ್ಲಿ ಪಬ್ಲಿಕ್ ಶಾಲೆ ಸಮೀಪ ಗಿರೀಶ್ ಎಂಬವವರಿಗೆ ಪಿಸ್ತೂಲ್ ತೋರಿಸಿ ಮೊಬೈಲ್ ಮತ್ತು ಕಾರು ಕಿತ್ತುಕೊಂಡು ಹೋಗಿದ್ದರು.

-ಜ.21ರಂದು ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಪೊಲೀಸರಾದ ಶ್ರೀನಿವಾಸ್ ಮತ್ತು ಸಿದ್ದಲಿಂಗಮೂರ್ತಿ ಗಸ್ತಿನಲ್ಲಿದ್ದಾಗ, ಸ್ಲಂ ಭರತ ಮತ್ತು ಸಹಚರರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.

-ಜ. 24ರಂದು ಸುಬ್ರಹ್ಮಣ್ಯಪುರ ವ್ಯಾಪ್ತಿಯಲ್ಲಿ ಭರತ ಹಾಗೂ ಈತನ ಸಹಚರರು ಇರುವ ಬಗ್ಗೆ ಮಾಹಿತಿ ಪಡೆದು ಬಂಧಿಸಲು ಹೋಗುತ್ತಿದ್ದಂತೆ ಪೊಲೀಸರ ಮೇಲೆ ಕಾರು ಹತ್ತಿಸಿಕೊಂಡು ಹೋಗಲು ಯತ್ನಿಸಿ ಪರಾರಿಯಾಗಿದ್ದರು.

-ಜ. 28ರಂದು ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಸ್ನೇಹಿತನ ಜನ್ಮದಿನ ಆಚರಣೆಯಲ್ಲಿ ಭರತ ಭಾಗಿಯಾಗಿರುವ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಹೋಗುತ್ತಿದ್ದಂತೆ, ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ.

-ಉತ್ತರ ಪ್ರದೇಶ ರಾಜ್ಯದ ಮೊರದಾಬಾದ್‍ನಲ್ಲಿ ಸ್ನೇಹಿತೆ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದು ಬಂಧಿಸಲು ತೆರಳಿದಾಗ, ಭರತ ಹಾಗೂ ಸ್ನೇಹಿತೆ ಕುಟುಂಬದವರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಉತ್ತರ ಪ್ರದೇಶದ ಗಲತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಟು ವರ್ಷಗಳ ಬಳಿಕ ಮತ್ತೊಂದು ಎನ್‌ಕೌಂಟರ್

ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ ಹಲವು ಕೃತ್ಯ ಎಸಗುತ್ತ ತಮ್ಮದೇ ಗ್ಯಾಂಗ್‌ ಕಟ್ಟಿಕೊಂಡು ಮೆರೆಯುವ ರೌಡಿಗಳನ್ನು ಆಯಾ ಕಾಲಕ್ಕೆ ಪೊಲೀಸರು ‘ಎನ್‌ಕೌಂಟರ್’ ಮೂಲಕ ಮಟ್ಟ ಹಾಕುತ್ತಲೇ ಬಂದಿದ್ದಾರೆ.

1989ರ ಅವಧಿಯಲ್ಲಿ ಕುಖ್ಯಾತ ರೌಡಿ ಜಯರಾಜ್‌ನ ಸಹಚರನಾಗಿಮೆಜೆಸ್ಟಿಕ್‌ ಸಾರಿಗೆ ಮಾಫಿಯಾ ಆಳುತ್ತಿದ್ದ ಸ್ಟೇಷನ್ ಶೇಖರ್‌ನನ್ನು ಕಮ್ಮನಹಳ್ಳಿ ಬಳಿ ಎನ್‌ಕೌಂಟರ್ ಮಾಡಲಾಗಿತ್ತು. ಅದು ನಗರದಲ್ಲಿ ನಡೆದ ಮೊದಲ ಎನ್‌ಕೌಂಟರ್ ಎನಿಸಿಕೊಂಡಿತ್ತು. ಅದಾದ ನಂತರ, ಸಾಲು ಸಾಲು ಎನ್‌ಕೌಂಟರ್ ನಡೆದವು. 2013ರಲ್ಲಿ ಬೆಮೆಲ್ ಕೃಷ್ಣಪ್ಪ ಎಂಬುವರನ್ನು ಹತ್ಯೆ ಮಾಡಿದ್ದ ರೌಡಿ ಬೆತ್ತನೆಗೆರೆ ಸೀನ ನನ್ನುಮಾಗಡಿ ರಸ್ತೆ ಹೇರೋಹಳ್ಳಿ ಬಳಿಯ ಸಿಂಡಿಕೇಟ್ ಲೇಔಟ್‌ನಲ್ಲಿ ಎನ್‌ಕೌಂಟರ್ ಮಾಡಲಾಗಿತ್ತು.

ಇದಾದ 7 ವರ್ಷಗಳ ಬಳಿಕ ರಾಜಗೋಪಾಲನಗರ ಠಾಣೆ ರೌಡಿ ಸ್ಲಂ ಭರತ್‌ನನ್ನು ಎನ್‌ಕೌಂಟರ್‌ ಮಾಡುವ ಮೂಲಕ ಪೊಲೀಸರ ಪಿಸ್ತೂಲ್ ಮತ್ತೆ ಘರ್ಜಿಸಿದೆ.

ಬೆಂಗಳೂರಿನಲ್ಲಿ ನಡೆದ ಎನ್‌ಕೌಂಟರ್‌ಗಳು:

1989 - ಜಯರಾಜ್‌ನ ಬಲಗೈ ಬಂಟನಾಗಿದ್ದ ಶೇಖರ್ ಅಲಿಯಾಸ್ ಸ್ಟೇಷನ್ ಶೇಖರ್, ನಾಡ ಪಿಸ್ತೂಲ್ ಹಾಗೂ ಕಚ್ಛಾ ಬಾಂಬ್ ಪೂರೈಕೆಯಲ್ಲಿ ಹೆಸರು ಮಾಡಿದ್ದ. ಮಚ್ಚು, ಲಾಂಗ್‌ ಹಿಡಿದು ಓಡಾಡುತ್ತಿದ್ದ ರೌಡಿಗಳಿಗೆ ಪಿಸ್ತೂಲ್ ಹಾಗೂ ಕಚ್ಛಾ ಬಾಂಬ್ ಪೂರೈಕೆ ಮಾಡಿದ್ದು ಈತನೇ.

ಶೇಖರ್‌ನ ತಂದೆ ಮೆಜೆಸ್ಟಿಕ್‌ನ ರೈಲು ನಿಲ್ದಾಣ ಬಳಿ ‘ಈಗಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ನಡೆಸುತ್ತಿದ್ದ. ಸಾರಿಗೆ ಹಫ್ತಾ ವಸೂಲಿ ಮಾಡುತ್ತಿದ್ದ ಶ್ರೀರಾಮಪುರದ ರೌಡಿ ರಾಜೇಂದ್ರ ಎಂಬಾತನನ್ನು ಶೇಖರ್ ಕೊಂದು ಹಾಕಿದ್ದ. ನಂತರವೇ ಆತ ಜಯರಾಜ್‌ನ ಗ್ಯಾಂಗ್ ಸೇರಿದ್ದ.

ವೈಯಾಲಿಕಾವಲ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಬಿ.ಬಿ.ಅಶೋಕ್‌ಕುಮಾರ್ (ಟೈಗರ್ ಅಶೋಕ್) ಹಾಗೂ ತಂಡ, ಕಮ್ಮನಹಳ್ಳಿಯಲ್ಲಿ ಶೇಖರ್‌ನನ್ನು ಎನ್‌ಕೌಂಟರ್ ಮಾಡಲಾಗಿತ್ತು.

–––

1995 - ಮೂರು ಕೊಲೆ, ಹಲವು ಕೊಲೆ ಯತ್ನ, ಅಪಹರಣ, ಸುಲಿಗೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಡೆಡ್ಲಿ ಸೋಮ ಹಾಗೂ ಆತನ ಸಹಚರ ಬಸವನನ್ನುಇಂದಿರಾನಗರದ ಸ್ಮಶಾನದ ಬಳಿ ಎನ್‌ಕೌಂಟರ್ ಮಾಡಲಾಗಿತ್ತು.

ಅನಿಲ್‌ ಸಿಂಗ್ ಎಂಬುವರ ಸ್ನೇಹಿತನನ್ನು ಅಪಹರಿಸಿದ್ದ ಸೋಮ, ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ತನಿಖೆ ಶುರು ಮಾಡಿದ್ದ ಅಂದಿನ ಇನ್‌ಸ್ಪೆಕ್ಟರ್ ಅಬ್ದುಲ್ ಅಜೀಂ ನೇತೃತ್ವದ ತಂಡ, ಸೋಮನನ್ನು ಎನ್‌ಕೌಂಟರ್ ಮಾಡಿತ್ತು. ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ. ನರಳಾಡುತ್ತಿದ್ದ ಬಸವ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.

–––

1999 -ಹೈಗ್ರೌಂಡ್ಸ್‌ ವ್ಯಾಪ್ತಿಯಲ್ಲಿ ಮುಂಬೈನ ಶಾರ್ಪ್ ಶೂಟರ್ ಎರಿಕ್ ಡಿಸೋಜ

––

2001 -ಎಚ್‌ಎಎಲ್‌ ನಿಲ್ದಾಣ ಬಳಿ ಛೋಟಾ ರಾಜನ್ ಸಹಚರರಾದ ಜಗ್ಗು ಅಲಿಯಾಸ್ ಜಗದೀಶ್ ಫಕೀರ್, ಸುಶೀಲ್ ಗಾಂವ್ಕರ್ ಹಾಗೂ ಚಿಕ್ಕ

ಯಶವಂತಪುರದ ಪಂಪಾ ನಗರದಲ್ಲಿ ಅತ್ಯಾಚಾರ ಎಸಗುತ್ತಿದ್ದ ಮುನಿಯಾ ಅಲಿಯಾಸ್ ಮುನಿರಾಜ್‌

2002- ಸೇಂಟ್‌ ಮಾರ್ಕ್ಸ್ ರಸ್ತೆಯಲ್ಲಿ ರೌಡಿ ರಾಜೇಶ್

2003- ರಾಮಮೂರ್ತಿನಗರದ ಅಣ್ಣಯ್ಯ ರೆಡ್ಡಿ ಬಡಾವಣೆಯಲ್ಲಿ ನಟೋರಿಯಸ್ ರೌಡಿ ಕೆಜಿಎಫ್‌ನ ಸಗಾಯ್‌

2005- ಹೊಸೂರು ರಸ್ತೆಯ ಸೇಂಟ್ ಪ್ಯಾಟ್ರಿಕ್ ಕ್ರಿಶ್ಚಿಯನ್ ಸ್ಮಶಾನ ಬಳಿಪಾತಕಿ ಛೋಟಾ ರಾಜನ್‌ ಸಹಚರ ಶಾರ್ಪ್‌ ಶೂಟರ್ ಅಬ್ದುಲ್ ರಜಾಕ್‌

2005 -ಆನೇಕಲ್‌ ಬಳಿವಿಕೃತಕಾಮಿ ರೌಡಿ ನಸ್ರು

2006 -ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಶಿವಮೊಗ್ಗ ನಾಗ

2009- ಪರಪ್ಪನ ಅಗ್ರಹಾರ ಜೈಲು ಸಮೀಪ ಪರಂಧಾಮ

2010 -ಹೆಗಡೆ ನಗರ ಮುಖ್ಯ ರಸ್ತೆಯಲ್ಲಿ ಕಾಮುಕ ಶಂಕರ್‌

2012 -ರೌಡಿ ಶ್ರೀನಿವಾಸ್ ಅಲಿಯಾಸ್ ಬೆತ್ತನಗೆರೆ ಸೀನ

ಯಶ್, ದುನಿಯಾ ವಿಜಯ್‌ ಹತ್ಯೆಗೂ ಸಂಚು

‘ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ನಗರದಲ್ಲಿ ಓಡಾಡುತ್ತಿದ್ದ ಆರೋಪಿ, ಮಾಧ್ಯಮಗಳಲ್ಲಿ ಹೆಸರು ಬರಬೇಕೆಂದು ಸಹಚರರ ಬಳಿ ಹೇಳಿಕೊಳ್ಳುತ್ತಿದ್ದ. ಯಾರಾದರೂ ನಟರನ್ನು ಕೊಂದರೆ ಹೆಸರು ಮಾಡಬಹುದೆಂಬ ಆಸೆ ಅವನಿಗಿತ್ತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಜಿಎಫ್‌ ಸಿನಿಮಾ ಮೂಲಕ ಹೆಸರು ಮಾಡಿದ್ದ ನಟ ಯಶ್ ಹಾಗೂ ಮತ್ತೊಬ್ಬ ನಟ ದುನಿಯಾ ವಿಜಯ್‌ ಅವರನ್ನೇ ಮುಗಿಸಲು ಆರೋಪಿ ಸಂಚು ರೂಪಿಸಿದ್ದ. ಕೆಲ ಬಾರಿ ಅವರಿಗೆ ಬೆದರಿಕೆ ಸಹ ಹಾಕಿದ್ದ. ಆ ಬಗ್ಗೆ ನಟರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಅದರ ನಡುವೆಯೇ ಸಿಸಿಬಿ ಪೊಲೀಸರು ಆತನನ್ನು ಸೆರೆ ಹಿಡಿದು ಜೈಲಿಗಟ್ಟಿದ್ದರು. ಈ ಸಂಗತಿಯನ್ನು ಭರತನ ಸಹಚರರೇ ಬಾಯ್ಬಿಟ್ಟಿದ್ದಾರೆ’ ಎಂದರು.

ಎಸಿಪಿ ತನಿಖೆಗೆ ಸೂಚನೆ:

‘ಇದೊಂದು ಎನ್‌ಕೌಂಟರ್‌ ಪ್ರಕರಣ. ಹೀಗಾಗಿ, ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಎಸಿಪಿ ದರ್ಜೆ ಅಧಿಕಾರಿ ತನಿಖೆ ಕೈಗೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT