ಭಾನುವಾರ, ಆಗಸ್ಟ್ 1, 2021
21 °C
ಕೆರೆಯಂಗಳದಲ್ಲಿ ನಿರ್ಮಾಣ ಚಟುವಟಿಕೆಗೆ ನಿರ್ಬಂಧ– ಪಾಲಿಕೆ ಸುತ್ತೋಲೆ

ಇನ್ನು ನೀರು ಸಂಗ್ರಹಕ್ಕೆ ಮಾತ್ರ ಕೆರೆ ಬಳಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತನ್ನ ವ್ಯಾಪ್ತಿಯ ಕೆರೆಗಳನ್ನು ಇನ್ನು ನೀರು ಸಂಗ್ರಹಿಸುವುದಕ್ಕೆ ಹೊರತಾಗಿ ಇತರ ಯಾವುದೇ ಉದ್ದೇಶಕ್ಕಾಗಿ ಬಳಸುವಂತಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಕೆರೆಗಳ ವ್ಯಾಪ್ತಿಯಲ್ಲಿ ಮತ್ತು ಕೆರೆಯ ಹೊರ ಅಂಚಿನಿಂದ 30 ಮೀ ಮೀಸಲು ಪ್ರದೇಶದಲ್ಲಿ ಹಲವಾರು ಚಟುವಟಿಕೆಗಳನ್ನು ಬಿಬಿಎಂಪಿ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. 

2014ರ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಕಲಂ 12ರಂತೆ ಕೆರೆಗಳ ಆವರಣ, ಕೆರೆಯಂಗಳದಲ್ಲಿ ಯಾವುದೇ ನಿರ್ಮಾಣ ಮತ್ತಿತರ ಚಟುವಟಿಕೆಗಳನ್ನು ನಿಷೇಧಿಸಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.  ರಾಷ್ಟೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳನ್ವಯ ಈ ಕ್ರಮ ಕೈಗೊಂಡಿರುವುದಾಗಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ನಗರ ಮಹಾಯೋಜನೆ-2015ರ ನಿಯಮವಳಿಗಳ ಪ್ರಕಾರ ರಾಜಕಾಲುವೆಗಳ ಮೀಸಲು ಪ್ರದೇಶಗಳಲ್ಲೂ ಕಟ್ಟಡ ನಿರ್ಮಾಣ ಮತ್ತು ಇತರೆ ಚಟುವಟಿಕೆಗಳನ್ನು ನಿಷೇಧಿಸಲಾಗಿರುತ್ತದೆ. ಪಾಲಿಕೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಅಂಶಗಳು ಹಾಗೂ ನಗರ ಮಹಾ ಯೋಜನೆ2015ರ ನಿಯಮಗಳು ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು ಎಂದು ಆಯುಕ್ತರು ಖಡಕ್‌ ಸೂಚನೆ ನೀಡಿದ್ದಾರೆ.  

ಕೆರೆಯಿ೦ದ ನೀರಾವರಿಗೆ, ಮಾನವ ಬಳಕೆಗೆ ಅಥವಾ ಇತರೆ ಉದ್ದೇಶಕ್ಕಾಗಿ ನೀರನ್ನು ತೆಗೆಯುವುದನ್ನೂ ನಿಷೇಧಿಸಲಾಗಿದೆ. ಕೆರೆಗಳಲ್ಲಿ ಯಾವುದೇ ವಿಧವಾದ ವಾಣಿಜ್ಯ ಚಟುವಟಿಕೆ ಕೈಗೊಳ್ಳಬಾರದು, ಅವುಗಳನ್ನು ಯಾವುದೇ ಆರ್ಥಿಕ ಲಾಭಕ್ಕೆ ಬಳಸಿಕೊಳ್ಳಬಾರದು, ಅವುಗಳಿಗೆ ಹಾನಿಯಾಗುವ ಯಾವುದೇ ಕೃತ್ಯವನ್ನು ಮಾಡಬಾರದು ಎಂಬುದೂ ಸೇರಿ ಒಟ್ಟು 18 ಸೂಚನೆಗಳನ್ನು ಸುತ್ತೋಲೆಯಲ್ಲಿ ನೀಡಲಾಗಿದೆ.

ಎಲ್ಲಾ ಕೆರೆಗಳ ಮೂಲ ಒಡೆತನವು ಸರ್ಕಾರಕ್ಕೆಸೇರಿದ್ದಾಗಿದ್ದು, ಅವು ಕಂದಾಯ ಇಲಾಖೆಯಲ್ಲೇ ಇರಬೇಕು. ಅವುಗಳನ್ನು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲು ಮಾತ್ರ ಪಾಲಿಕೆಗೆ ಹಸ್ತಾ೦ತರಿಸಲಾಗಿದೆ. ಈ ಕೆರೆಗಳ ಭೂಮಿಯಲ್ಲಿ ಯಾವುದೇ ರಚನೆಯನ್ನೂ ನಿರ್ಮಿಸತಕ್ಕದ್ಲ್ಲ. ಅದರ ಭೂಮಿಯನ್ನು ಅಥವಾ ಯಾವುದೇ ಭಾಗವನ್ನು ಬಳಸಿಕೊಳ್ಳುವಂತಿಲ್ಲ. ನೀರಿನ ಸಹಜ ಹರಿವಿಗೆ ಯಾವುದೇ ಅಡ್ಡಿಯನ್ನು ಉ೦ಟು ಮಾಡುವಂತಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಕೆರೆಯ ಹೊರಗಿನ ಸರಹದ್ದಿನಿಂದ 30 ಮೀ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ, ಮನರಂಜನೆ ಅಥವಾ ಕೈಗಾರಿಕಾ ಸಂಕೀರ್ಣಗಳನ್ನು ನಿರ್ಮಿಸುವಂತಿಲ್ಲ. ಯಾವುದೇ ಕೈಗಾರಿಕಾ ಚಟುವಟಿಕೆ ನಡೆಸುವಂತಿಲ್ಲ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕೆರೆಗಳ ಬಗ್ಗೆ ಕಾಳಜಿ ವಹಿಸುವುದು ಪಾಲಿಕೆಯ ವಲಯ ಮಟ್ಟದ ಮುಖ್ಯ ಎಂಜಿನಿಯರ್‌, ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಕಾರ್ಯಪಾಲಕ ಎಂಜನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಅಥವಾ ಕಿರಿಯ ಎಂಜಿನಿಯರ್‌, ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರು, ಪರಿಸರ ಎಂಜಿನಿಯರ್‌ಗಳ ಹೊಣೆ ಎಂದು ಹೇಳಿದ್ದಾರೆ.

‘ಕೆರೆ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆಗಿಲ್ಲ ಅವಕಾಶ’

‘ಕೆರೆ ಪ್ರದೇಶದೊಳಗೆ ರಸ್ತೆಗಳನ್ನು, ಸೇತುವೆಗಳನ್ನು ಮತ್ತು ಅದೇ ರೀತಿಯಇತರ ರಚನೆಗಳನ್ನು ನಿರ್ಮಿಸುವಂತಿಲ್ಲ’ ಎಂದೂ ಪಾಲಿಕೆ ಆಯುಕ್ತರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಕರೆಗಳನ್ನು ಅಭಿವೃದ್ಧಿಪಡಿಸುವುದಿದ್ದರೆ ಪಾಲಿಕೆಯ ಕೆರೆ ವಿಭಾಗವು ವಿಸ್ತೃತ ಯೋಜನಾವರದಿ ಸಿದ್ಧಪಡಿಸಿ ಅದಕ್ಕೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದಅನುಮೋದನೆ ಪಡೆಯಬೇಕು. ಯಾವುದೇ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಟೆಂಡರ್‌ ಕರೆಯದೆ ಕೆಆರ್‌ಐಡಿಎಲ್‌ನಿಂದ ನಿರ್ವಹಿಸತಕ್ಕದ್ದಲ್ಲ. ಪ್ರತಿಯೊಂದು ಕಾಮಗಾರಿಯನ್ನೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಅನ್ವಯ ಟೆಂಡರ್‌ ಕರೆದೇ ನಿರ್ವಹಿಸಬೇಕು’ ಎಂದೂ ಸೂಚಿಸಿದ್ದಾರೆ.

ಪಾಲಿಕೆ ಅರಣ್ಯ ವಿಭಾಗ ಅಥವಾ ತೋಟಗಾರಿಕೆ ವಿಭಾಗದ ಅಧಿಕಾರಿಗಳು ಅನಿವಾರ್ಯ ಸಂದರ್ಭಗಳಲ್ಲಿ ಕೆರೆಗಳಲ್ಲಿ ಕಾಮಗಾರಿ ಕೈಗೊಳ್ಳುವುದಾದರೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

‘ಸುತ್ತೋಲೆಯಲ್ಲಿರುವ ಅನೇಕ ಅಂಶಗಳು ಈಗಾಗಲೇ ಪಾಲಿಸಲಾಗುತ್ತಿದೆ. ಕೆರೆಯಂಗಳದಲ್ಲಿ ಈಗಾಗಲೇ ಅನುಮತಿ ಪಡೆದು ಆರಂಭಿಸಿರುವ ಕಾಮಗಾರಿ ನಡೆಸುವುದಕ್ಕೆ ಇದರಿಂದ ಅಡ್ಡಿ ಇಲ್ಲ’ ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.  

ಸುತ್ತೋಲೆಯಲ್ಲಿರುವ ಇತರ ಸೂಚನೆಗಳು

* ವಾಹನವನ್ನು ಬಳಸಿ ಅಥವಾ ಇತರ ರೀತಿಯಲ್ಲಿ ಭಗ್ನಾವಶೇಷಗಳನ್ನು, ಕಸವನ್ನು, ಕೆಸರನ್ನು ಅಥವಾ ಮಣ್ಣನ್ನು ಅಥವಾ ದ್ರವ ತ್ಯಾಜ್ಯಗಳನ್ನು ಅಥವಾ ಯಾವುದೇ ಮಾಲಿನ್ಯಕಾರಕಗಳನ್ನು ಕೆರೆಯಲ್ಲಿ ಹಾಕುವಂತಿಲ್ಲ.

* ಸಂಸ್ಕರಿಸದ ಚರಂಡಿ ನೀರನ್ನು ಕೆರೆಗೆ ಹರಿಬಿಡುವಂತಿಲ್ಲ.

* ಒಡ್ಡನ್ನು, ನಿರುಪಯುಕ್ತ ತೂಬಿನ ಮೂಲ ಎತ್ತರವನ್ನು ಕಡಿಮೆ ಮಾಡುವಂತಿಲ್ಲ. ನಿರುಪಯುಕ್ತ ತೂಬನ್ನು ಒಡೆದುಹಾಕುವಂತಿಲ್ಲ. ಬೇಲಿಯನ್ನು, ಗಡಿ ಗುರುತು ಕಲ್ಲುಗಳನ್ನು ಕಿತ್ತುಹಾಕುವಂತಿಲ್ಲ. ಪಾಲಿಕೆ ಅಳವಡಿಸಿರುವ ಸೂಚನಾ ಫಲಕಗಳನ್ನು ತೆಗೆದು ಹಾಕುವಂತಿಲ್ಲ.

 * ಕೆರೆಗಳನ್ನು ಭೋಗ್ಯ ಅಥವಾ ಉಪ ಭೋಗ್ಯಕ್ಕೆ ನೀಡುವಂತಿಲ್ಲ.

* ಒಳಚರಂಡಿ ತ್ಯಾಜ್ಯ ಹಾಗೂ ಇತರ ಕಸ ಕೆರೆ ಪ್ರವೇಶಿಸಿದಂತೆ ಜಲಮಂಡಳಿ
ಹಾಗೂ ಕಸ ನಿರ್ವಹಣೆ ವಿಭಾಗಗಳು ಕ್ರಮ ಕೈಗೊಳ್ಳಬೇಕು.

* ಕರೆ ಪ್ರದೇಶಗಳನ್ನು ಯಾವುದೇ ವಿನಾಶಕಾರಿ ಅಥವಾ ಹಾನಿಕಾರಕ ರೀತಿಯಲ್ಲಿ ಬಳಸತಕ್ಕದ್ದಲ್ಲ.

* ತುರ್ತು ಸ೦ದರ್ಭದಲ್ಲಿ ಕೆರೆ ವಿಭಾಗಕ್ಕೆ ಅಗತ್ಯ ಸಹಾಯ ಮತ್ತು ಮೂಲಭೂತ ಸೌಕರ್ಯಗಳನ್ನು
ಒದಗಿಸಬೇಕು  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು