ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃಪತುಂಗ ವಿಶ್ವವಿದ್ಯಾಲಯದಲ್ಲಿ ಪ್ರತಿ ಬುಧವಾರ ‘ಖಾದಿ ದಿನ‌’

Last Updated 30 ಆಗಸ್ಟ್ 2021, 21:56 IST
ಅಕ್ಷರ ಗಾತ್ರ

ಬೆಂಗಳೂರು: ಸ್ವದೇಶಿ ಪರಿಕಲ್ಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ ಬುಧವಾರ ಖಾದಿ ಬಟ್ಟೆ ಧರಿಸುವಂತೆ ರಾಜ್ಯದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ನೃಪತುಂಗ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಸೂಚಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಕುಲಪತಿ ಪ್ರೊ. ಶ್ರೀನಿವಾಸ ಎಸ್.‌ ಬಳ್ಳಿ, ‘ಪ್ರತಿ ಬುಧವಾರ ಖಾದಿ ದಿನ ಆಚರಿಸಲು ನಿರ್ಧರಿಸಿದ್ದೇವೆ. ಸ್ವಯಂಪ್ರೇರಣೆಯಿಂದ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಖಾದಿ ಉಡುಪು ಧರಿಸುವಂತೆ ಸೂಚಿಸಲಾಗಿದೆ. ಬೋಧಕ, ಬೋಧಕೇತರ ವರ್ಗದವರು ಈಗಾಗಲೇ ಪ್ರತಿ ಬುಧವಾರ ಖಾದಿ ಬಟ್ಟೆ ಧರಿಸಿ ಬರುತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳು ಕಾಲೇಜಿಗೆ ಬಂದ ಬಳಿಕ ಈ ವಿಷಯವನ್ನು ಅವರ ಗಮನಕ್ಕೆ ತರಲಾಗುತ್ತದೆ. ವಿದ್ಯಾರ್ಥಿಗಳಿಗೆ, ಬೋಧಕ, ಬೋಧಕೇತರರಿಗೆ ಅನುಕೂಲ ಅಗುವಂತೆ ಖಾದಿ ಮೇಳವನ್ನು ಕೂಡಾ ಆಯೋಜಿಸುತ್ತಿದ್ದೇವೆ’ ಎಂದರು.

ಉಚಿತ ಊಟ: ‘ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಉಚಿತವಾಗಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಕುಶಲ ಯೋಜನೆ ಜಾರಿ ಮಾಡಿದ್ದೇವೆ. ವಿದ್ಯಾರ್ಥಿಗಳನ್ನು ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಪಡಿಸಲು ಕೆಲವು ತರಬೇತಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ‘ ಎಂದರು.

’2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 50ರಷ್ಟು ರಿಯಾಯತಿ ನೀಡುತ್ತಿದ್ದೇವೆ. ಕ್ರೀಡಾಪಟುಗಳಿಗೆ, ಎನ್‌ಸಿಸಿ, ಎನ್ಸೆಸ್ಸೆಸ್‌, ರೆಡ್‌ಕ್ರಾಸ್ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ನೀಡಲಾಗುವುದು’ ಎಂದರು.

‘ಪ್ರಸಕ್ತ ಸಾಲಿನಿಂದಲೇ ಎನ್‌ಇಪಿ’: ‘ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2021-22) ರಾಷ್ಟ್ರೀಯ ಶಿಕ್ಷಣ ನೀತಿ
ಯನ್ನು (ಎನ್‌ಇಪಿ) ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲಾಗುವುದು. ಅದಕ್ಕೆ ಪೂರಕವಾಗಿ ಬಿ.ಎಸ್ಸಿ ಹಾಗೂ ಬಿಸಿಎ ಕೋರ್ಸ್‌ನಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದೇವೆ. ದಾಖಲಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.ಹೊಸ ದಾಖಲಾತಿ ಹೊರತುಪಡಿಸಿ ಸದ್ಯ 2,200 ವಿದ್ಯಾರ್ಥಿಗಳು ಹಾಗೂ 101 ಕಾಯಂ ಬೋಧಕರು, 71 ಅತಿಥಿ ಉಪನ್ಯಾಸಕರು ಇದ್ದಾರೆ. ಎನ್‌ಇಪಿ ಅನುಷ್ಠಾನದ ಭಾಗವಾಗಿ ಬಿ.ಎಸ್ಸಿಯಲ್ಲಿ 24 ವಿಜ್ಞಾನ ವಿಷಯಗಳ ಸಂಯೋಜನೆ ನೀಡಿದ್ದೇವೆ. ಪ್ರತಿ ಸಂಯೋಜನೆಗೂ 30 ಅಥವಾ 60 ಮಕ್ಕಳ ದಾಖಲಾತಿ ಇರಲಿದೆ. ಬಿಸಿಎನಲ್ಲಿ ಪ್ರತ್ಯೇಕ ಸಂಯೋಜನೆ ಇರುವುದಿಲ್ಲ’ ಎಂದು ಕುಲಪತಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT