‘ದಾನ’ಶೂರ ಕಳ್ಳನಿವ!

7
ಹಣ ಕದ್ದು ಧಾರ್ಮಿಕ ಕಾರ್ಯಕ್ಕೆ ಕೊಡುತ್ತಿದ್ದ * ಪೊಲೀಸ್ ಬಲೆಗೆ ಬಿದ್ದ 62 ವರ್ಷದ ವಿನ್ಸೆಂಟ್

‘ದಾನ’ಶೂರ ಕಳ್ಳನಿವ!

Published:
Updated:

ಬೆಂಗಳೂರು: ಮೂವತ್ತು ವರ್ಷಗಳಲ್ಲಿ 60ಕ್ಕೂ ಹೆಚ್ಚು ಮನೆಗಳ ಬೀಗ ಮುರಿದು ನಗ–ನಾಣ್ಯ ದೋಚಿದ್ದ ಈ ಚಾಲಾಕಿ, ಕದ್ದ ಹಣವನ್ನು ತಮಿಳುನಾಡಿನ ವೇಲಾಂಗಣಿ ಚರ್ಚ್‌ಗೆ ದಾನವಾಗಿ ನೀಡುತ್ತಿದ್ದ. ಇದೀಗ ಜೈಲಿನಿಂದ ಬಿಡುಗಡೆಯಾದ ಎರಡೇ ದಿನಗಳಲ್ಲಿ ಮತ್ತೆ ಮನೆಯೊಂದರ ಬೀಗ ಒಡೆದು ಪುನಃ ಕಾರಾಗೃಹ ಸೇರಿದ್ದಾನೆ.

ತಮಿಳುನಾಡಿನ ವಿನ್ಸೆಂಟ್ ಅಲಿಯಾಸ್ ಡೇವಿಡ್ (62) ಬಂಧಿತ ಆರೋಪಿ. ಈತನಿಂದ ₹ 16.25 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 1985ರಲ್ಲಿ ನಗರಕ್ಕೆ ಬಂದ ವಿನ್ಸೆಂಟ್, ಆರಂಭದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆ ನಂತರ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳ್ಳತನ ಪ್ರಾರಂಭಿಸಿದ. ಅವಿವಾಹಿತನಾದ ಈತ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಅಥವಾ ಕಲಾಸಿಪಾಳ್ಯದ ಮಾರುಕಟ್ಟೆಯಲ್ಲೇ ಮಲಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಂಜೆ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ. ರಾತ್ರಿ ಅದೇ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮಲಗಿ, ಬೆಳಿಗ್ಗೆ 4 ಗಂಟೆಗೆ ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದ. ಹಾರೆಯಿಂದ ಬೀಗ ಒಡೆದು, ಹಣ–ಆಭರಣ ದೋಚುತ್ತಿದ್ದ. ಯಾವುದೇ ಮನೆಗೆ ಹೋದರೂ ಟಿ.ವಿಯನ್ನು ಬಿಡದೆ ಕದಿಯುವುದು ಈತನ ವಿಶೇಷ.

ನಸುಕಿನಲ್ಲೇ ಏಕೆ: ‘ರಾತ್ರಿಯಿಡೀ ಗಸ್ತು ತಿರುಗುವ ಪೊಲೀಸರು, ನಸುಕಿನ ವೇಳೆಗೆ ನಿದ್ರೆಗೆ ಜಾರಿಬಿಡುತ್ತಾರೆ. ಒಂದುವೇಳೆ ಮನೆಯಲ್ಲಿ ಯಾರಾದರೂ ಇದ್ದರೆ ಆ ಸಮಯಕ್ಕೆ ಗಾಢನಿದ್ರೆಯಲ್ಲಿರುತ್ತಾರೆ. ಹೀಗಾಗಿ, 4ರಿಂದ 5 ಗಂಟೆ ನಡುವೆಯೇ ಕಳ್ಳತನ ಮಾಡುತ್ತಿದ್ದೆ’ ಎಂದು ಆರೋಪಿ ಹೇಳಿದ್ದಾನೆ.

2017ರ ಡಿಸೆಂಬರ್‌ನಲ್ಲಿ ಜೀವನ್‌ ಬಿಮಾನಗರ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೇ ಮಾರ್ಚ್‌ 9ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವಿನ್ಸೆಂಟ್, ಮಾರ್ಚ್ 11ರಂದೇ ಪುನಃ ಕಳ್ಳತನ ಮಾಡಿದ್ದ.

ಬೆರಳಮುದ್ರೆ ನೀಡಿದ ಸುಳಿವು: ‘ವಿನ್ಸೆಂಟ್‌ನನ್ನು ಈ ಹಿಂದೆ ಬಂಧಿಸಿದ್ದಾಗ ಆತನ ಬೆರಳಚ್ಚು ಪಡೆಯಲಾಗಿತ್ತು. ಈಚೆಗೆ ಕಳ್ಳತನ ಮಾಡಿದ ಮನೆ ಚಿಲಕ ಹಾಗೂ ಅಲ್ಮೆರಾದ ಬಾಗಿಲಿನ ಮೇಲೆ ಮೂಡಿದ್ದ ಬೆರಳಚ್ಚುಗಳನ್ನು ಸಂಗ್ರಹಿಸಿದೆವು. ಅದನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುತ್ತಿದ್ದಂತೆಯೇ ವಿನ್ಸೆಂಟ್‌ನ ಫೋಟೊ ಬಂತು. ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದರಿಂದ ಆತನೇ ಆರೋಪಿ ಎಂಬುದು ಖಚಿತವಾಯಿತು. ಕಲಾಸಿ ಪಾಳ್ಯ ಮಾರುಕಟ್ಟೆಯಲ್ಲೇ ಆತನನ್ನು ಬಂಧೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ಮಾಡಿ ಪ್ರಯೋಜನ ಇಲ್ಲ

ವೇಶ್ಯೆಯರ ಸಹವಾಸ ಮಾಡಿದ್ದ ವಿನ್ಸೆಂಟ್, ಕದ್ದ ಹಣವನ್ನೆಲ್ಲ ಅವರಿಗೇ ಖರ್ಚು ಮಾಡುತ್ತಿದ್ದ. ಆಭರಣಗಳನ್ನು ಮಾರಿ, ಬಂದ ಹಣವನ್ನು ವೇಲಾಂಗಣಿ ಚರ್ಚ್‌ಗೆ ದಾನವಾಗಿ ಕೊಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ನನಗೆ ಹೆಂಡತಿ, ಮಕ್ಕಳು ಯಾರೂ ಇಲ್ಲ. ಹೀಗಾಗಿ, ಆಸ್ತಿ ಮಾಡಿ ಪ್ರಯೋಜನವಿಲ್ಲ. ಫುಟ್‌ಪಾತ್‌ನಲ್ಲಿ ಮಲಗಿದರೂ, ದೇವರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಹೀಗಾಗಿ, ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಕೊಡುತ್ತಿದ್ದೆ’ ಎಂದು ವಿನ್ಸೆಂಟ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

‘ಟಿ.ವಿ ಕಣ್ಣಿಗೆ ಕುಕ್ಕುತ್ತದೆ’

‘ಯಾವುದೇ ಮನೆಗೆ ಹೋದರೂ, ಮೊದಲು ಟಿ.ವಿಯೇ ಕಣ್ಣಿಗೆ ಕುಕ್ಕುತ್ತದೆ. ಅದನ್ನು ಮಾರಿದರೆ ಹೆಚ್ಚು ಹಣ ಬರುವುದಿಲ್ಲ ಎಂದು ಗೊತ್ತು. ಆದರೂ, ಮೊದಲು ನೋಡಿದ ವಸ್ತುವನ್ನು ಬಿಡಬಾರದೆಂದು ಟಿ.ವಿಯನ್ನೂ ಹೊತ್ತೊಯ್ಯುತ್ತಿದ್ದೆ. ಅದನ್ನು ಯಾರಿಗಾದರೂ ಮಾರಿ, ಆ ದುಡ್ಡಿನಲ್ಲಿ ಊಟ ಮಾಡುತ್ತಿದ್ದೆ’ ಎಂದೂ ಹೇಳಿದ್ದಾನೆ.

ಬೆರಳಚ್ಚು ಹಾಕಿದರೆ ಮುಖ ತೋರಿಸತ್ತೆ!

‘ಬೆರಳಚ್ಚು ಹೋಲಿಕೆಗೆಂದೇ ನಮ್ಮಲ್ಲಿ ಅತ್ಯಾಧುನಿಕ ಸಾಫ್ಟ್‌ವೇರ್ ಇದೆ. ಒಮ್ಮೆ ಆರೋಪಿಯ ಬೆರಳಚ್ಚು ಹಾಗೂ ಫೊಟೊವನ್ನು ಅದಕ್ಕೆ ಅಪ್‌ಲೋಡ್ ಮಾಡಿದ್ದರೆ, ಮುಂದೆ ಆತ ಎಲ್ಲೇ ಅಪರಾಧ ಎಸಗಿದ್ದರೂ ಸುಳಿವು ಸಿಗುತ್ತದೆ. ಕೃತ್ಯ ನಡೆದ ಸ್ಥಳದಲ್ಲಿ ಬೆರಳಮುದ್ರೆ ಸಂಗ್ರಹಿಸಿ, ಈ ಸಾಫ್ಟ್‌ವೇರ್‌ಗೆ ಹಾಕಿದರೆ ಆತನ ಫೋಟೊವೇ ಬಂದು ಬಿಡುತ್ತದೆ. ಇದರಿಂದ ಹಳೆ ಆರೋಪಿಗಳನ್ನು ಬಂಧಿಸುವುದು ಸುಲಭವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !