ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಜಿ ಕುಪ್ಪಂ ಗ್ಯಾಂಗ್ ಸದಸ್ಯ ಬಂಧನ

Last Updated 25 ಫೆಬ್ರುವರಿ 2021, 14:06 IST
ಅಕ್ಷರ ಗಾತ್ರ

ಬೆಂಗಳೂರು: ಕಾರಿನ ಗಾಜು ಒಡೆದು ₹ 2 ಲಕ್ಷ ನಗದು ಕದ್ದು ಪರಾರಿಯಾಗಿದ್ದ ಆರೋಪಿ ರತ್ನಕುಮಾರ್‌ನನ್ನು (40) ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

’ತಮಿಳುನಾಡಿನ ತಿರುವೆಟ್ಟೂರು ನಿವಾಸಿಯಾದ ಆರೋಪಿ, ಓಜಿ ಕುಪ್ಪಂ ಗ್ಯಾಂಗ್‌ ಸದಸ್ಯ. ಆತನಿಂದ ₹ 10.25 ಲಕ್ಷ ನಗದು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಗ್ಯಾಂಗ್ ಸದಸ್ಯರಾದ ರಿಷಿ, ಗೋಪಿ, ಹನುಮಂತು ಹಾಗೂ ಬಾಲಾಜಿ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಜಾಲಹಳ್ಳಿ ಕ್ರಾಸ್ ನಿವಾಸಿಯಾದ ದೂರುದಾರ ರಾಘವೇಂದ್ರ, ಬ್ಯಾಂಕ್‌ನಲ್ಲಿ ₹ 2 ಲಕ್ಷ ಡ್ರಾ ಮಾಡಿಕೊಂಡು ಕಾರಿನಲ್ಲಿ ಹೊರಟಿದ್ದರು. ಟಿ. ದಾಸರಹಳ್ಳಿ ಮೆಟ್ರೊ ನಿಲ್ದಾಣ ಬಳಿಯ ಹೋಟೆಲೊಂದರ ಎದುರು ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ವಾಪಸು ಬಂದು ನೋಡಿದಾಗ, ಕಾರಿನ ಕಿಟಕಿ ಗಾಜು ಒಡೆದಿತ್ತು. ಕಾರಿನಲ್ಲಿದ್ದ ₹ 2 ಲಕ್ಷ ನಗದು ಇರಲಿಲ್ಲ. ಹಣ ಕಳವಾದ ಬಗ್ಗೆ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.

‘ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್‌ ಎದುರು ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನೇ ಆರೋಪಿ ಎಂಬುದು ಗೊತ್ತಾಯಿತು’ ಎಂದೂ ಹೇಳಿದರು.

ಗಮನ ಬೇರೆಡೆ ಸೆಳೆದು ಕೃತ್ಯ: ‘ನಗರದ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಬಳಿ ನಿಲ್ಲುತ್ತಿದ್ದ ಆರೋಪಿಗಳು, ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗಳನ್ನು ಗುರುತಿಸುತ್ತಿದ್ದರು. ಅವರನ್ನು ಹಿಂಬಾಲಿಸಿ ಗಮನ ಬೇರೆಡೆ ಸೆಳೆದು ಹಣ ಕದ್ದು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬಾಗಲಗುಂಟೆ, ಆರ್‌.ಎಂ.ಸಿ ಯಾರ್ಡ್, ಮಡಿವಾಳ, ಜೀವನ್‌ಬಿಮಾ ನಗರ, ಕೆ.ಆರ್. ಪುರ, ರಾಜಾಜಿನಗರ, ಜ್ಞಾನಭಾರತಿ, ಕೊತ್ತನೂರು ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಿದರೆ, ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT