ಸೋಮವಾರ, ಫೆಬ್ರವರಿ 17, 2020
16 °C
ಒಎಲ್‌ಎಕ್ಸ್‌ ಆ್ಯಪ್‌ನಲ್ಲಿ ಬರುತ್ತಿದ್ದ ವಸ್ತುಗಳ ಖರೀದಿ ನೆಪ l 200ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಬಯಲಿಗೆ

ರಾಜಸ್ಥಾನದ ಐವರು ವಂಚಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್‌ ಹೆಸರಿನಲ್ಲೇ ಜನರಿಗೆ ವಂಚನೆ ಮಾಡುತ್ತಿದ್ದ ರಾಜಸ್ಥಾನದ ಐವರು ಸೈಬರ್‌ ವಂಚಕರನ್ನು ಸಿಸಿಬಿ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.

ಆರೋಪಿಗಳು ಒಎಲ್ಎ‌ಕ್ಸ್‌ ಜಾಹಿರಾತು ಆ್ಯಪ್‌ನಲ್ಲಿ ಬರುತ್ತಿದ್ದ ವಸ್ತುಗಳನ್ನು ಸ್ವತಃ ಖರೀದಿಸಿ, ಮಾರುವುದಾಗಿ ಜನರನ್ನು ನಂಬಿಸಿ ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್‌ ಮಾಡಿಸಿ, ಹಣ ಲಪಟಾಯಿಸಿ ವಂಚಿಸುತ್ತಿದ್ದರು. ಬಂಧಿತರಿಂದ ಆರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, 200ಕ್ಕೂ ಹೆಚ್ಚು ವಂಚನೆ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.

ಒಎಲ್‌ಎಕ್ಸ್‌ ಹಾಗೂ ಸಂಬಂಧಿತ ಆ್ಯಪ್‌ಗಳಲ್ಲಿ ಜಾಹಿರಾತು ನೀಡುವ ಜನರನ್ನು ಆರೋಪಿಗಳು ದೂರವಾಣಿಯಲ್ಲಿ ಸಂಪರ್ಕಿಸಿ, ತಾವೇ ಅವುಗಳನ್ನು ಖರೀದಿಸಿ, ಮಾರಾಟ ಮಾಡುವುದಾಗಿ ನಂಬಿಸುತ್ತಿದ್ದರು. ತಾವು ಕಳುಹಿಸುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ನಂಬಿಸುತ್ತಿದ್ದರು. ಅವರ ಮಾತು ನಂಬಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುತ್ತಿದ್ದ ಜನರ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದರು ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರನ್ನುರಾಜಸ್ಥಾನದ ಭರತ್‌‌ಪುರ ಜಿಲ್ಲೆಯ ಕರಣ್‌ಸಿಂಗ್ ಕಿರೊಡಿ ಲಾಲ್ (35), ಅಕ್ರಮ್ ಖಾನ್ (18), ಹ್ಯಾರಿಸ್ ಖಾನ್‌ (21), ಜಮೀಲ್ (42) ಹಾಗೂ ಮೆಹಜರ್ (20) ಎಂದು ಗುರುತಿಸಲಾಗಿದೆ. ಬೇರೆ ಬೇರೆ ಹೆಸರಿನಿಂದ ದೂರುದಾರರಿಗೆ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಗಳು ಬೆಂಗಳೂರಿನ ವಿವಿಧ ಬಡಾವಣೆಗಳ ವಿಳಾಸ ನೀಡುತ್ತಿದ್ದರು ಎಂದು ಕಮಿಷನರ್‌ ವಿವರಿಸಿದರು.

ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹಲವು ಜನರಿಗೆ ಮೋಸ ಮಾಡಿರುವುದು ಕಂಡುಬಂದಿದ್ದು ಇವರ ದಸ್ತಗಿರಿಯಿಂದ ಹಲವು ಫಿರ್ಯಾದಿಗಳು ನಿರಾಳವಾಗಿದ್ದಾರೆ. ಸಿಸಿಬಿ ಸೈಬರ್‌ ಕ್ರೈಂ ವಿಭಾಗದಲ್ಲಿ ಒಟ್ಟು 316 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ತಂಡ
ಭಾಗಿಯಾಗಿದೆ.

ಪ್ರಮುಖ ಆರೋಪಿ ಕರಣ್‌ಸಿಂಗ್‌ ಬೆಸಿಕಲ ಪಶುವೈದ್ಯ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ಹ್ಯಾರಿಸ್‌ ಖಾನ್‌ ಎಚ್‌ಡಿ
ಎಫ್‌ಸಿ, ಗೂಗಲ್‌ ಹಾಗೂ ಪೇಟಿಎಂ ಸಂಸ್ಥೆಗಳ ಮಾಜಿ ನೌಕರನಾಗಿದ್ದು ಕ್ಯೂಆರ್‌ ಕೋಡ್‌ನಲ್ಲಿ ಪಳಗಿದ್ದಾನೆ. ಮೆಹಜರ್‌ ಮತ್ತು ಅಕ್ರಮ್‌ಖಾನ್‌ ಗ್ರಾಹಕರ ಸೋಗಿನಲ್ಲಿ ಜಾಹಿರಾತುದಾರರಿಗೆ ಕರೆ ಮಾಡಿದ್ದಾರೆ. ಜಮೀಲ್‌ ಮೋಟಾರ್‌ ಕಳ್ಳನಾಗಿದ್ದು, ಎಂಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ಭಾಸ್ಕರ್‌ ರಾವ್‌ ಸ್ಪಷ್ಟಪಡಿಸಿದರು.

ಆರೋಪಿಗಳು ಎಷ್ಟು ಹಣ ಲ‍ಪಟಾಯಿಸಿದ್ದಾರೆ ಎಂಬುದು ತನಿಖೆಯಿಂದ ಬಯಲಿಗೆ ಬರಬೇಕಿದೆ. ಗ್ರಾಹಕರ ಖಾತೆಯಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡ ತಕ್ಷಣ ಆ ಖಾತೆಯನ್ನು ಸ್ಥಗಿತಗೊಳಿಸುತ್ತಿದ್ದರು. ಬಳಿಕ ಹೊಸ ಖಾತೆ ತೆರೆಯುತ್ತಿದ್ದರು. ಹೀಗೆ ನೂರಾರು ಖಾತೆಗಳಲ್ಲಿ ವಂಚನೆ ಕಾರ್ಯಾಚರಣೆ ನಡೆಸಿದ್ದಾರೆ. ಇವರು ಸೇನೆ ಹೆಸರಲ್ಲೂ ವಂಚಿಸಿದ್ದರು ಎಂದು ಕಮಿಷನರ್‌ ನುಡಿದರು.

ಕಮಿಷನರ್‌ ಭಾವಚಿತ್ರ ಬಳಕೆ!

ಬಂಧಿತ ಆರೋಪಿಗಳು ಜನರನ್ನು ವಂಚಿಸಲು ತಮ್ಮ ಭಾವಚಿತ್ರವನ್ನೇ ಬಳಸಿಕೊಂಡಿದ್ದಾರೆ ಎಂದು ಭಾಸ್ಕರ್‌ರಾವ್‌ ಅಚ್ಚರಿ ವ್ಯಕ್ತಪಡಿಸಿದರು. ಕಳೆದ ಡಿಸೆಂಬರ್‌ನಲ್ಲಿ ತಮ್ಮ ಭಾವಚಿತ್ರವನ್ನು ಗೂಗಲ್ ವೆಬ್‍ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ವಂಚನೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ವಿವರಿಸಿದರು.

ಹೋರಾಟಗಾರರಿಂದ ಪಾಠ ಕಲಿಯಬೇಕಿಲ್ಲ

‘ನಾನು ಹುಟ್ಟು ಕನ್ನಡಿಗ. ಇಲ್ಲೇ ಹುಟ್ಟಿದ್ದೇನೆ. ಇಲ್ಲೇ ಸಾಯುತ್ತೇನೆ’ ಎಂದು ಭಾಸ್ಕರ್ ರಾವ್ ತೀಕ್ಷ್ಣವಾಗಿ ಹೇಳಿದರು.

‘ಸಿಎಎ ಪ್ರತಿಭಟನೆ ಮತ್ತು ಗುರುವಾರದ ಕರ್ನಾಟಕ ಬಂದ್‍ಗೆ ಅನುಮತಿ ನಿರಾಕರಿಸುವ ಮೂಲಕ ಪೊಲೀಸ್ ಕಮಿಷನರ್ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ’ ಎಂದು ಕೆಲವು ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಆರೋಪಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 

ಕನ್ನಡ ಪರ ಸಂಘಟನೆಗಳ ಸದಸ್ಯರಿಂದ ನಾನು ಕಲಿಯುವ ಆಗತ್ಯವಿಲ್ಲ ಎಂದು ಅವರು ಕಿಡಿ ಕಾರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)