ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ವರ್ಷ ಹಳೆಯದಾದ ‘ಬೆಂಗಳೂರು ಗೇಟ್’ಗೆ ಪುನರುಜ್ಜೀವನ

Last Updated 11 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟಿಷರ ಆಡಳಿತವಿದ್ದ ಕಾಲವದು. ರಾಜರ ಆಳ್ವಿಕೆ ಇದ್ದ ಮೈಸೂರು ಪ್ರಾಂತ್ಯದ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದವರ ಮೇಲೆ ನಿಗಾ ಇಡಲು ಚಾಮರಾಜಪೇಟೆಯ ಗಡಿಯಲ್ಲಿ ‘ಬೆಂಗಳೂರು ಗೇಟ್’ ಚೌಕಿ ನಿರ್ಮಿಸಲಾಗಿತ್ತು. 150 ವರ್ಷಗಳಿಗೂ ಹಳೆಯದಾದ ಈ ಗೇಟ್‌ ಅನ್ನು ಇತ್ತೀಚೆಗಷ್ಟೇ ಪುನರುಜ್ಜೀವನಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರು, ನಗರದ ಗಡಿ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದರು. ಸುತ್ತಮುತ್ತಲ ನಗರಗಳಿಂದ ಬರುವವರ ಮೇಲೆ ನಿಗಾ ವಹಿಸುತ್ತಿದ್ದರು. ಅದರಲ್ಲೂ ಮೈಸೂರು ಪ್ರದೇಶದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿತ್ತು.

ಆರಂಭದಲ್ಲಿ ಬ್ರಿಟಿಷ್ ಸೈನಿಕರು ಕಾವಲು ಕಾಯಲು ಆರಂಭದಲ್ಲಿ ಬಂಡೆ, ಮರಗಳನ್ನು ಆಶ್ರಯಿಸುತ್ತಿದ್ದರು. ನಂತರ ತಾತ್ಕಾಲಿಕ ಚಪ್ಪರ ನಿರ್ಮಿಸಲಾಯಿತು. 18ನೇ ಶತಮಾನದಲ್ಲಿ ಮೊದಲ ಬಾರಿಗೆ ಸುಸಜ್ಜಿತ ಚೌಕಿ ‘ಬೆಂಗಳೂರು ಗೇಟ್’ ಅನ್ನು ಚಾಮರಾಜಪೇಟೆ ಗಡಿಯಲ್ಲಿ ನಿರ್ಮಿಸಲಾಗಿತ್ತು.

ಸದ್ಯ, ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಆವರಣದಲ್ಲಿರುವ ಈ ಚೌಕಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಯಾರ ಗಮನಕ್ಕೂ ಬಾರದೇ ಪಾಳು ಬಿದ್ದಿತ್ತು. ಬೆಂಗಳೂರು ಕಮಿಷನರ್ ಆಗಿದ್ದ ಭಾಸ್ಕರ್ ರಾವ್, ಸಿಎಆರ್‌ ಮೈದಾನಕ್ಕೆ 2020ರಲ್ಲಿ ಭೇಟಿ ನೀಡಿದ್ದಾಗ ಪಾಳು ಬಿದ್ದಿದ್ದ ಚೌಕಿಯನ್ನು ಗಮನಿಸಿದ್ದರು.

ಪಾರಂಪರಿಕ ಚೌಕಿಯ ಸಂರಕ್ಷಣೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಿಸಿದ್ದ ಭಾಸ್ಕರ್ ರಾವ್, ‘ಚಾಮರಾಜಪೇಟೆಯ ಸಿರ್ಸಿ ವೃತ್ತಕ್ಕೆ ಹೊಂದಿಕೊಂಡಿರುವ ಸಿಎಆರ್ ಮೈದಾನದಲ್ಲಿ ‘ಬೆಂಗಳೂರು ಗೇಟ್‌’ ಪಾರಂಪರಿಕ ಚೌಕಿ ಇದೆ. ವಾಸ್ತುಶಿಲ್ಪದ ಮಹತ್ವವನ್ನು ಪರಿಗಣಿಸಿ, ಇದನ್ನು ಸಂರಕ್ಷಿಸಲು ಜನರೆಲ್ಲರೂ ಶಿಫಾರಸು ಮಾಡಬೇಕು’ ಎಂದು ಕೋರಿದ್ದರು. ಆಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ರತ್ನಪ್ರಭಾ ಹಾಗೂ ಹಲವರು ಕೈ ಜೋಡಿಸಿದ್ದರು.

ಚೌಕಿಗೆ ಹೊಸ ರೂಪ: ಸಾಮಾಜಿಕ ತಾಣಗಳಲ್ಲಿ ನಡೆದ ಅಭಿಯಾನ ಯಶಸ್ವಿಯಾಗಿತ್ತು. ಬೆಂಗಳೂರು ಗೇಟ್ ಚೌಕಿ ಸಂರಕ್ಷಣೆಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಎಆರ್ ಪೊಲೀಸ್ ಅಧಿಕಾರಿಗಳು, ಒಂದು ವರ್ಷದಲ್ಲಿ ಚೌಕಿಯನ್ನು ಪುನರುಜ್ಜೀವನಗೊಳಿಸಿದರು.

ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಚೌಕಿಗೆ ಸುಣ್ಣ–ಬಣ್ಣ ಬಳಿಯಲಾಗಿದೆ. ಚೌಕಿಯ ಇತಿಹಾಸ ಅರಿತಿರುವ ಹಲವರು, ಅದರ ಬಳಿಗೆ ಹೋಗಿ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಗ್ರಂಥಾಲಯಕ್ಕೆ ವ್ಯವಸ್ಥೆ: ‘ಪಾರಂಪರಿಕ ಚೌಕಿಯನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಲಾಗಿದೆ. ಚೌಕಿಯ ಕೊಠಡಿಗಳನ್ನು ಗ್ರಂಥಾಲಯವಾಗಿ ಮಾರ್ಪಡಿಸಲು
ತೀರ್ಮಾನಿಸಲಾಗಿದೆ. ಅದಕ್ಕಾಗಿ ಸಿದ್ಧತೆ ನಡೆದಿದೆ’ ಎಂದು ಸಿಎಆರ್ ಡಿಸಿಪಿ ಮೊಹಮ್ಮದ್ ಸುಚೇತಾ ಎಂ.ಎಸ್ ತಿಳಿಸಿದರು.

‘ವೀಕ್ಷಣೆಗೆ ಅವಕಾಶ ನೀಡಲು ಒತ್ತಾಯ’

‘‍ಪೊಲೀಸ್ ಮೈದಾನಕ್ಕೆ ಹೊಂದಿಕೊಂಡು ‘ಬೆಂಗಳೂರು ಗೇಟ್’ ಚೌಕಿ ಇದೆ. ಇದರ ವೀಕ್ಷಣೆಗಾಗಿ ಸಿಎಆರ್ ಪೊಲೀಸರ ಅನುಮತಿ ಪಡೆಯಬೇಕು. ಎಲ್ಲ ಸಮಯದಲ್ಲಿ ಮುಕ್ತವಾಗಿ ಹೋಗಿ ಬರಲು ಆಗುವುದಿಲ್ಲ’ ಎಂದು ಸಾರ್ವಜನಿಕರು ಬೇಸರ ತೋಡಿಕೊಂಡಿದ್ದಾರೆ.

‘150 ವರ್ಷಗಳ ಇತಿಹಾಸವಿರುವ ಚೌಕಿ ವೀಕ್ಷಣೆಗೆ ಮುಕ್ತ ಅವಕಾಶ ನೀಡಬೇಕು. ಚೌಕಿ ಇತಿಹಾಸ ತಿಳಿಸುವ ಫಲಕಗಳನ್ನು ಪ್ರದರ್ಶಿಸಬೇಕು’ ಎಂದೂ ಕೋರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಮೊಹಮ್ಮದ್ ಸುಚೇತಾ ಎಂ.ಎಸ್., ‘ಸದ್ಯಕ್ಕೆ ಸಾರ್ವಜನಿಕರ ವೀಕ್ಷಣೆಗೆ ಸಂಪೂರ್ಣವಾಗಿ ಅವಕಾಶ ನೀಡಿಲ್ಲ. ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT