ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳನೆಂದು ಮಾನಸಿಕ ಅಸ್ವಸ್ಥನಿಗೆ ಥಳಿತ

Last Updated 6 ಸೆಪ್ಟೆಂಬರ್ 2018, 14:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಗೋಡಿ ಸಮೀಪದ ಪಟಾಲಮ್ಮ ಲೇಔಟ್‌ನಲ್ಲಿ ಮಾನಸಿಕ ಅಸ್ವಸ್ಥನನ್ನು ‘ಮಕ್ಕಳ ಕಳ್ಳ’ ಎಂದು ಭಾವಿಸಿದ ಸ್ಥಳೀಯರು ಆತನನ್ನುಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಒಡಿಶಾ ರಾಜ್ಯದ ಸುಮಾರು 25 ವರ್ಷದ ಯುವಕ, ಬುಧವಾರ ಸಂಜೆ ಸಂಜೆ 4.30ರ ಸುಮಾರಿಗೆ ಲೇಔಟ್‌ನ ಮನೆಯೊಂದಕ್ಕೆ ನುಗ್ಗಿದ್ದ. ಆ ಮನೆಯವರ ಚೀರಾಟ ಕೇಳಿ ನೆರವಿಗೆ ಬಂದ ಸ್ಥಳೀಯರು, ಆತನನ್ನು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿದ್ದರು.

ಇದೇ ವೇಳೆ ಒಬ್ಬಾತ, ‘ನಾಲ್ವರು ಮಕ್ಕಳ ಕಳ್ಳರು ನಮ್ಮ ಏರಿಯಾಗೆ ಬಂದಿರುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಹರಿದಾಡುತ್ತಿದೆ. ಅವರಲ್ಲಿ ಇವನೂ ಒಬ್ಬ ಇರಬಹುದು’ ಎಂದಿದ್ದಾನೆ. ಅದನ್ನು ನಂಬಿದ ಜನ, ಮನಸೋ ಇಚ್ಛೆ ಥಳಿಸಿದ್ದಾರೆ. ಹೆಸರು, ವಿಳಾಸ ಹೇಳದಿದ್ದಾಗ ಕೋಲಿನಿಂದ ಬಾರಿಸಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸ್ಥಳೀಯರೊಬ್ಬರು ನೀಡಿದ ಮಾಹಿತಿ ಸ್ಥಳಕ್ಕೆ ದೌಡಾಯಿಸಿದ ಕಾಡುಗೋಡಿ ಪೊಲೀಸರು, ಆ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆತ ಮಾನಸಿಕ ಅಸ್ವಸ್ಥ ಎಂಬುದು ನಂತರ ಗೊತ್ತಾಗಿದೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಿಟ್ಟು ಕಳುಹಿಸಿದ್ದಾರೆ.

‘ನಗರಕ್ಕೆ ಯಾವುದೇ ಮಕ್ಕಳು ಕಳ್ಳರು ಬಂದಿಲ್ಲ. ಅಂತಹ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ವಿಡಿಯೊ ಪರಿಶೀಲಿಸಿ, ಈ ಯುವಕನ ಮೇಲೆ ಹಲ್ಲೆ ನಡೆಸಿದ ಎಲ್ಲರ ವಿರುದ್ಧವೂ ಎಫ್‌ಐಆರ್ ದಾಖಲಿಸಿ, ಕ್ರಮ ಜರುಗಿಸುವಂತೆ ಕಾಡುಗೋಡಿ ಇನ್‌ಸ್ಪೆಕ್ಟರ್‌ಗೆ ಸೂಚಿಸಿದ್ದೇನೆ’ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT