ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಪೇನಲ್ಲಿ ಹಣ ಪಾವತಿಸಿದಂತೆ ನಕಲಿ ಸಂದೇಶ: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

Last Updated 9 ಸೆಪ್ಟೆಂಬರ್ 2021, 16:53 IST
ಅಕ್ಷರ ಗಾತ್ರ

ಬೆಂಗಳೂರು: ‘ಫೋನ್‌ ಪೇ’ ಆ್ಯಪ್ ಮೂಲಕ ಹಣ ಪಾವತಿಸಿದ ರೀತಿಯಲ್ಲಿ ನಕಲಿ ಸಂದೇಶ ಕಳುಹಿಸಿ ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಆರೋಪದಡಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆರೋಪಿ, ನಿತ್ಯದ ಖರ್ಚಿಗಾಗಿ ಹಣ ಹೊಂದಿಸಲು ಕೃತ್ಯ ಎಸಗುತ್ತಿದ್ದ. ತನಿಖೆ ದೃಷ್ಟಿಯಿಂದ ಆತನ ಹೆಸರು ಗೌಪ್ಯವಾಗಿರಿಸಲಾಗಿದೆ. ಆತನಿಂದ ₹ 2 ಲಕ್ಷ ಮೌಲ್ಯದ 10 ಗ್ರಾಂ ಚಿನ್ನಾಭರಣ, 1.50 ಕೆ.ಜಿ ಬೆಳ್ಳಿ ಸಾಮಗ್ರಿ ಹಾಗೂ ಕ್ಯಾಮೆರಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಳ್ಳಿ ಸಾಮಗ್ರಿ ಮಾರಾಟ ಮಳಿಗೆಗೆ ಇತ್ತೀಚೆಗೆ ಹೋಗಿದ್ದ ಆರೋಪಿ, ₹ 1.06 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದ್ದ. ಮೊಬೈಲ್‌ನಿಂದ ಫೋನ್‌ ಪೇ ಆ್ಯಪ್ ಮೂಲಕ ಹಣ ಪಾವತಿಸಿದ್ದ. ಅದಕ್ಕೆ ಪುರಾವೆಯಾಗಿ ಸಂದೇಶವೂ ಬಂದಿತ್ತು. ಆರೋಪಿ ಮಳಿಗೆಯಿಂದ ಹೊರಟು ಹೋಗಿದ್ದ.’

‘ಕೆಲ ಹೊತ್ತಿನ ನಂತರ, ‘ಹಣ ಪಾವತಿ ಆಗಿಲ್ಲ’ ಎಂಬ ಸಂದೇಶ ಮಾಲೀಕರಿಗೆ ಬಂದಿತ್ತು. ಆ ಬಗ್ಗೆ ಪರಿಶೀಲಿಸಿದಾಗ, ಆರೋಪಿ ನಕಲಿ ಸಂದೇಶ ಕಳುಹಿಸಿದ್ದ ಮಾಹಿತಿ ಗೊತ್ತಾಗಿತ್ತು. ಆರೋಪಿ ಮೊಬೈಲ್ ನಂಬರ್ ಸಹ ಸ್ವಿಚ್ ಆಫ್ ಆಗಿತ್ತು. ವಂಚನೆಗೀಡಾಗಿದ್ದ ಮಳಿಗೆ ಮಾಲೀಕ, ಠಾಣೆಗೆ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಡ ಕುಟುಂಬದ ಪೋಷಕರು, ವಿದ್ಯಾಭ್ಯಾಸದಲ್ಲಿ ಮುಂದಿದ್ದ ಮಗನನ್ನು ಎಂಜಿನಿಯರಿಂಗ್ ಕಾಲೇಜ್‌ಗೆ ಸೇರಿಸಿದ್ದರು. ಆರೋಪಿ ತನ್ನ ನಿತ್ಯದ ಖರ್ಚಿಗೆ ಹಣ ಹೊಂದಿಸಲು ಕೃತ್ಯ ಎಸಗುತ್ತಿದ್ದ.ಈ ಬಗ್ಗೆ ಹೇಳಿಕೆ ನೀಡಿದ್ದಾನೆ’ ಎಂದೂ ಮೂಲಗಳು ಹೇಳಿವೆ.

‘ಕೆಲ ದಿನಗಳ ಹಿಂದಷ್ಟೇ ಆರೋಪಿ, ಅಂಗಡಿಯೊಂದರಲ್ಲಿ ನಕಲಿ ಸಂದೇಶ ಕಳುಹಿಸಿ ಹಣ ಉಳಿಸಿಕೊಂಡಿದ್ದ. ಆ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಹೀಗಾಗಿ, ಕೃತ್ಯ ಮುಂದುವರಿಸಿದ್ದ. ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿವೆ.

ಎಚ್ಚರಿಕೆ ವಹಿಸಿ: ‘ಅಂಗಡಿಗೆ ಹೋಗುತ್ತಿದ್ದ ಆರೋಪಿ, ಫೋನ್‌ ಪೇ ಮೂಲಕವೇ ಹಣ ಪಾವತಿ ಮಾಡುತ್ತೇನೆಂದು ಹೇಳಿ ವಂಚಿಸುತ್ತಿದ್ದ. ಆ್ಯಪ್‌ ಮೂಲಕ ಹಣ ವರ್ಗಾವಣೆ ಸಮಯದಲ್ಲಿ ವ್ಯಾಪಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT