ಬೆಂಗಳೂರು: ಮತದಾರರ ಪಟ್ಟಿಗೆ ಹೊಸಬರ ಸೇರ್ಪಡೆ ಪ್ರಕ್ರಿಯೆ ಸುಲಭಗೊಳಿಸುವ ಸಲುವಾಗಿ ಬಿಬಿಎಂಪಿ ವತಿಯಿಂದ ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಮಂಗಳವಾರದವರೆಗೆ 2,218 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ 6ರಿಂದ 8ರವರೆಗೆ ನಿತ್ಯವೂ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ, ವರ್ಗಾವಣೆಗೆ ಹಾಗೂ ತಿದ್ದುಪಡಿಗೆ ವಾರ್ಡ್ ಕಚೇರಿ, ಬೆಂಗಳೂರು ವನ್, ಕರ್ನಾಟಕ ವನ್ ಕೇಂದ್ರ, ಮತಗಟ್ಟೆ, ಮತದಾರರ ಸಹಾಯಕ ನೋಂದಣಾಧಿಕಾರಿ ಕಚೇರಿ ಹಾಗೂ ಮತದಾರರ ನೋಂದಣಾಧಿಕಾರಿ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ‘2020ರ ಜನವರಿ 1ಕ್ಕೆ 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವಯಸ್ಸಿನ ದೃಢೀಕರಣದ ದಾಖಲೆ (ಜನನ ಪ್ರಮಾಣಪತ್ರ ಅಥವಾ ಶಾಲೆಯ ದಾಖಲೆ), ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ವಿಳಾಸದ ದೃಢೀಕರಿಸುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಬುಧವಾರದ ನಂತರ ಇದೇ 15ರವರೆಗೂ ಹೆಸರು ಸೇರ್ಪಡೆಗೆ, ತಿದ್ದುಪಡಿಗೆ, ತೆಗೆದುಹಾಕುವುದಕ್ಕೆ ಅವಕಾಶ ಇರಲಿದೆ. ಆದರೆ, ಅದಕ್ಕಾಗಿ ಅರ್ಜಿದಾರರುಮತದಾರರ ನೋಂದಣಾಧಿಕಾರಿ ಕಚೇರಿಗೇ ಹೋಗಬೇಕಾಗುತ್ತದೆ. ಆನ್‌ಲೈನ್ (www.nvsp.in) ಮೂಲಕ ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು’ ಎಂದರು.
‘ಬಾಂಗ್ಲಾದಿಂದ ನಗರಕ್ಕೆ 1 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರು ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಪಟ್ಟಿಯಲ್ಲಿ ಹೆಸರಿದೆಯೇ ಪರಿಶೀಲಿಸಿಕೊಳ್ಳಿ’
‘ಮತಗಟ್ಟೆ ಅಧಿಕಾರಿಗಳು 2020ರ ಕರಡು ಮತದಾರರ ಪಟ್ಟಿ ಹಾಗೂ ಕೈಬಿಟ್ಟಿರುವ ಮತದಾರರ ವಿವರಗಳೊಂದಿಗೆ ಮತಗಟ್ಟೆ ಕೇಂದ್ರಗಳಲ್ಲಿ ಹಾಜರಿರುತ್ತಾರೆ. ಸಾರ್ವಜನಿಕರು ಈ ಕೇಂದ್ರಗಳಿಗೆ ಭೇಟಿ ಮಾಡಿ ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಂಡು ತಪ್ಪಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈತಪ್ಪಿದ್ದರೆ ಇದೇ 15ರ ಒಳಗೆ ಅರ್ಜಿ ಸಲ್ಲಿಸಬಹುದು. ಮತದಾರರ ಗುರುತಿನ ಚೀಟಿಯ ಮಾಹಿತಿಯನ್ನು ಚುನಾವಣಾ ಆಯೋಗದವೆಬ್‌ಸೈಟ್‌ನಲ್ಲೂ (www.ceokarnataka.kar.nic.in) ಖಚಿತಪಡಿಸಿಕೊಳ್ಳಬಹುದು’ ಎಂದು ಆಯುಕ್ತರು ತಿಳಿಸಿದರು.
‘ಮತದಾರರ ಪಟ್ಟಿಯಿಂದ ಹೆಸರು ಕೈತಪ್ಪಿದ ಬಗ್ಗೆಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ದೂರುಗಳು ಬಂದಿದ್ದವು. ಅವುಗಳನ್ನು ಇತ್ಯರ್ಥಪಡಿಸಿದ್ದೇವೆ. ಉಪಚುನಾವಣೆ ಸಂದರ್ಭದಲ್ಲಿ ಈ ಕುರಿತು ಯಾವುದೇ ದೂರು ಬಂದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಹೊಸ ಮತದಾರರಿಗೆ ಸ್ಮಾರ್ಟ್‌ಕಾರ್ಡ್’
‘ಹೊಸತಾಗಿ ಸೇರ್ಪಡೆಯಾಗುವ ಎಲ್ಲ ಮತದಾರರಿಗೆ ಹಳೆ ಮಾದರಿಯ ಮತದಾರರ ಗುರುತುಚೀಟಿಯ ಬದಲು ಸ್ಮಾರ್ಟ್‌ಕಾರ್ಡ್ ನೀಡಲಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.
‘ಹಳೆಯ ಗುರುತುಚೀಟಿ ಹೊಂದಿರುವವರು ಅದರ ಬದಲು ಹೊಸ ಸ್ಮಾರ್ಟ್‌ಕಾರ್ಡ್ ಪಡೆಯುವುದಕ್ಕೂ ಶೀಘ್ರವೇ ಅವಕಾಶ ಕಲ್ಪಿಸಲಿದ್ದೇವೆ. ಇದಕ್ಕೆ ₹ 30 ಶುಲ್ಕ ವಿಧಿಸಲಾಗುತ್ತದೆ. ಸ್ಮಾರ್ಟ್‌ಕಾರ್ಡ್ ಪೂರೈಕೆಗೆ ಟೆಂಡರ್ ಆಹ್ವಾನಿಸಿದ್ದೇವೆ’ ಎಂದರು.
***
ಕರಡು ಮತದಾರರ ಪಟ್ಟಿ (2020 ಜ.1ರವರೆಗೆ)
ವರ್ಷ; ಮತದಾರರು
18–19; 41,573
20–29; 14,56,870
30–39; 28,36,107
40–49; 21,77,562
50–59; 12,73,768
60–69; 7,80,906
70–79; 4,12,638
80 ಮೇಲ್ಪಟ್ಟು; 1,59,223
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.