ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್: ‘ನಿರ್ವಹಣೆ’ಯ ಮಂತ್ರ– ಅಭಿವೃದ್ಧಿಗಿಲ್ಲ ಹೊಸ ಕಾರ್ಯತಂತ್ರ

ವಾಸ್ತವ ಲೆಕ್ಕಾಚಾರ– ಆರ್ಥಿಕ ಶಿಸ್ತಿನ ಜಪ * ಅನುದಾನ ಹಂಚಿಕೆಯಲ್ಲೂ ವಿಕೇಂದ್ರೀಕರಣ * ಉದ್ಯಾನ, ಪಾದಚಾರಿ ಮಾರ್ಗ ಅಭಿವೃದ್ಧಿಯತ್ತ ಗಮನ
Last Updated 27 ಮಾರ್ಚ್ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿ ಇಲ್ಲದರ ನಡುವೆಯೇ ಬಿಬಿಎಂಪಿ 2021–22ನೇ ಸಾಲಿಗೆ ₹ 9,286.81 ಕೋಟಿ ಗಾತ್ರದ ಬಜೆಟ್‌ ಮಂಡಿಸಿದೆ. ಈ ಹಿಂದಿನ ವರ್ಷಗಳ ಬಜೆಟ್‌ಗಳಿಗೆ ಹೋಲಿಸಿದರೆ ವಾಸ್ತವಕ್ಕೆ ತುಸು ಹತ್ತಿರವಿರುವ ಈ ಬಜೆಟ್‌ನಲ್ಲಿ ಅನುದಾನ ಹಂಚಿಕೆ ವೇಳೆ ವಿಕೇಂದ್ರೀಕರಣ ನೀತಿಯ ಮೊರೆ ಹೋಗಿರುವುದು ವಿಶೇಷ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಬಜೆಟ್‌ ಅನ್ನು ಶನಿವಾರ ಮಂಡಿಸಿದರು. ‘ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಜಾರಿಗೆ ತರುವುದು ಬಜೆಟ್‌ನ ಮೂಲಮಂತ್ರ. ಪಾಲಿಕೆಯ ಹೊಣೆಗಾರಿಕೆಯು ಲಭ್ಯ ಹಣಕಾಸು ಮೊತ್ತಕ್ಕಿಂತ 2.5 ಪಟ್ಟು ಮೀರುವಂತಿಲ್ಲ. ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ನೀತಿಗೆ ಇದನ್ನು ಹೋಲಿಸಬಹುದು’ ಎಂದು ತಿಳಿಸಿದರು.

ವಿಕೇಂದ್ರೀಕರಣ– ಬಜೆಟ್‌ನ ಹೂರಣ

ವಾರ್ಡ್‌ ಮತ್ತು ವಲಯ ಮಟ್ಟದಲ್ಲಿ ಆರ್ಥಿಕ ನಿರ್ವಹಣೆ ಮತ್ತು ಹೊಣೆಗಾರಿಕೆ ವಿಕೇಂದ್ರೀಕರಣ, ಅನಗತ್ಯ ವೆಚ್ಚ ನಿಯಂತ್ರಣ, ಸಾರ್ವಜನಿಕ ಭಾಗವಹಿಸುವಿಕೆಗೆ ಉತ್ತೇಜನದ ಮೂಲಕ ಪಾರದರ್ಶಕತೆ ಸಾಧಿಸುವುದು ಈ ಬಜೆಟ್‌ನ ದೂರದೃಷ್ಟಿ ಮತ್ತು ಗುರಿ ಎಂದು ವಿಶೇಷ ಆಯುಕ್ತರು ಹೇಳಿದ್ದಾರೆ.

ಪಾಲಿಕೆಯ ಸ್ವಂತ ವರಮಾನದಲ್ಲಿ ಶೇ 50ರಷ್ಟರ ವಿನಿಯೋಗದ ಬಗ್ಗೆ ವಲಯ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂದರೆ ಸುಮಾರು ₹ 2ಸಾವಿರ ಕೋಟಿ ಅನುದಾನವನ್ನು ವಿವಿಧ ವಲಯಗಳಿಗೆ ಹಂಚಿಕೆ ಮಾಡಲಾಗಿದೆ. ಯಾವ ವಲಯಕ್ಕೆ ಎಷ್ಟು ಅನುದಾನ ಸಿಗುತ್ತದೆ ಎಂಬುದನ್ನು ಬಜೆಟ್‌ನಲ್ಲಿ ವಿವರಿಸಿಲ್ಲ.

‘ಆಯಾ ವಲಯದ ಬೇಡಿಕೆ ಹಾಗೂ ಅಗತ್ಯ ನೋಡಿಕೊಂಡು ಅನುದಾನ ಹಂಚಿಕೆ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಅಭಿವೃದ್ಧಿ ಕಾಮಗಾರಿಗಳಿಲ್ಲ

ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳುವ ಹೊಸ ಕಾಮಗಾರಿಗಳನ್ನು ಹೊರತಾಗಿ ಪಾಲಿಕೆ ಅನುದಾನದಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಗಮನಾರ್ಹ ಮೊತ್ತವನ್ನು ಕಾಯ್ದಿರಿಸಿಲ್ಲ. ಆದರೆ, ನಿರ್ವಹಣೆಗೆ ಭರಪೂರ ಅನುದಾನ ಹಂಚಿಕೆ ಮಾಡಲಾಗಿದೆ.

ಪಾಲಿಕೆ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ನಿರ್ವಹಣಾ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲು ಆದ್ಯತೆ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಕೆರೆ ಅಭಿವೃದ್ಧಿಗೆ ಹೊರತಾಗಿ ಬೇರೆ ಯಾವುದೇ ಇಲಾಖೆಯಲ್ಲೂ ಹೊಸ ಕಾಮಗಾರಿಗಳನ್ನು ಕೈಗೊಳ್ಳದಿರಲು ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಜೆಟ್‌ನಲ್ಲೇ ಸ್ಪಷ್ಟಪಡಿಸಲಾಗಿದೆ.

ಕಸ ನಿರ್ವಹಣೆಗೆ ₹ 1,622.23 ಕೋಟಿ ತೆಗೆದಿಡಲಾಗಿದೆ. ಹಿಂದಿನ ಸಾಲುಗಳಿಗೆ (2020–21ನೇ ಸಾಲಿನ ಪರಿಷ್ಕೃತ ಅಂದಾಜು ₹ 1,031 ಕೋಟಿ) ಹೋಲಿಸಿದರೆ ಇದು ತೀರಾ ಅಧಿಕ. ‘ಈ ಹಿಂದಿನ ಬಜೆಟ್‌ಗಳಲ್ಲಿ ಕಸ ನಿರ್ವಹಣೆಗೆ ಅವಶ್ಯಕವಿರುವಷ್ಟು ಅನುದಾನ ಹಂಚಿಕೆ ಮಾಡದ ಕಾರಣ ಬಿಲ್‌ಗಳು ಅನೇಕ ತಿಂಗಳುಗಳಿಂದ ಬಾಕಿ ಇವೆ. ಹಾಗಾಗಿ ಇದು ವಾಸ್ತವದ ವೆಚ್ಚ’ ಎಂದು ಬಜೆಟ್‌ನಲ್ಲಿ ವಿಶೇಷ ಆಯುಕ್ತರು (ಹಣಕಾಸು) ಸಮರ್ಥಿಸಿಕೊಂಡಿದ್ದಾರೆ.

‘ಏಳು ವರ್ಷಗಳಲ್ಲೇ ಮೊದಲ ಬಾರಿಗೆ ಕಸ ನಿರ್ವಹಣೆ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗಿದೆ. ಕಸ ಸಾಗಿಸುವ ವಾಹನಗಳಿಗೆ ಆರ್‌ಎಫ್‌ಐಡಿ ಹಾಜರಾತಿ, ಜಿಪಿಎಸ್‌ ನಿಗಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಎಲ್ಲೂ ಕಸದ ರಾಶಿ ಕಂಡುಬಾರದ ವಾರ್ಡ್‌ಗಳಿಗೆ ₹ 50 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ಸ್ವಚ್ಛ ಸರ್ವೇಕ್ಷಣ ಸರ್ವೆಯಲ್ಲಿ ಶ್ರೇಯಾಂಕವನ್ನು ಒಡಿಎಫ್‌ ಪ್ಲಸ್‌ ಪ್ಲಸ್‌ಗೆ ಉತ್ತಮ ಪಡಿಸಿಕೊಳ್ಳಲು 67 ಹೊಸ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಪೌರಕಾರ್ಮಿಕರಿಗೆ ಸಲಕರಣೆ ಖರೀದಿಗೆ ವರ್ಷಕ್ಕೆ ತಲಾ ₹ 2400 ಕಾಯ್ದಿರಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಉದ್ಯಾನಗಳ ನಿರ್ವಹಣೆಗೆ 2019–20ನೇ ಸಾಲಿನಲ್ಲಿ ₹ 84ಕೋಟಿ ಮೀಸಲಿಡಲಾಗಿತ್ತು. ಅದನ್ನು ₹ 214 ಕೋಟಿಗೆ ಹೆಚ್ಚಿಸಲಾಗಿದೆ. ಕೋವಿಡ್‌ ಪರೀಕ್ಷೆ, ಸೋಂಕಿತರ ಜೊತೆ ಸಂಪರ್ಕ ಹೊಂದಿದವರ ಪತ್ತೆ ಹಾಗೂ ಅವರನ್ನು ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಕಲ್ಪಿಸಲು ₹ 337 ಕೋಟಿ ಒದಗಿಸಲಾಗಿದೆ. ಕರ್ನಾಟಕ ಸರ್ಕಾರ ಒದಗಿಸುವ ಮೊತ್ತಕ್ಕೆ ಇದು ಹೆಚ್ಚುವರಿಯಾಗಿರುತ್ತದೆ.

ಒಂಟಿ ಮನೆಗಳಿಗೆ ಎಳ್ಳು ನೀರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಹಿಂದುಳಿದ ವರ್ಗಗಳಲ್ಲಿನ ಆರ್ಥಿಕ ದುರ್ಬಲರಿಗೆ ವಸತಿ ಕಲ್ಪಿಸಲುವ ‘ಒಂಟಿ ಮನೆ’ ಕಾರ್ಯಕ್ರಮಗಳಿಗೆ ಈ ಬಾರಿ ಯಾವುದೇ ಹೊಸ ಅನುದಾನ ಹಂಚಿಕೆ ಮಾಡಿಲ್ಲ. ಈಗಾಗಲೇ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳ ₹ 1ಸಾವಿರ ಕೋಟಿ ಬಿಲ್‌ ಪಾವತಿ ಬಾಕಿ ಇದೆ. ಇವುಗಳಲ್ಲಿ ಒಂಟಿ ಮನೆಗಳಿಗೆ ₹ 900 ಕೋಟಿ ಬಿಲ್‌ ಪಾವತಿ ಬಾಕಿ ಇದೆ. ಹಾಗಾಗಿ ಹೊಸ ಯೋಜನೆ ಕೈಗೆತ್ತಿಕೊಳ್ಳದಿರಲು ತೀರ್ಮಾನ ಕೈಗೊಂಡಿದ್ದಾಗಿ ಬಿಬಿಎಂಪಿ ಹೇಳಿದೆ.

ಪೌರಕಾರ್ಮಿಕರು ಮತ್ತು ಡಿ ಗುಂಪಿನ ಸಿಬ್ಬಂದಿಯ ಮಕ್ಕಳ ಬೋಧನಾ ಶುಲ್ಕ ಮರುಪಾವತಿ ಮುಂದುವರಿಯಲಿದೆ. ಆರ್ಥಿಕ ದುರ್ಬಲರ ವೈದ್ಯಕೀಯ ವೆಚ್ಚ ಮರುಪಾವತಿಗೆ ₹ 27 ಕೋಟಿ ಮೀಸಲಿಡಲಾಗಿದೆ.

ಪಾದಚಾರಿ ಮಾರ್ಗ: ವಾರ್ಡ್‌ಗೆ ₹ 20 ಲಕ್ಷ

ನಾಗರಿಕಸ್ನೇಹಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಪ್ರತಿ ವಾರ್ಡ್‌ ಸಮಿತಿಗೆ ₹ 20 ಲಕ್ಷ ಹಂಚಿಕೆ ಮಾಡಲಾಗಿದೆ. ವಾರ್ಡ್‌ ಮಟ್ಟದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 5 ಕಿ.ಮೀಗಳಂತೆ ಒಟ್ಟು 5 ಸಾವಿರ ಕಿ.ಮೀ ಪಾದಚಾರಿ ಮಾರ್ಗಗಳ ಅಭಿವೃದ್ಧಿಪಡಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.

‘ಮೋಟಾರುರಹಿತ ಸಾರಿಗೆ ಉತ್ತೇಜಿಸಲು ಸೈಕಲ್‌ ಪಥ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳನ್ನೂ ರಾಜ್ಯ ಸರ್ಕಾರದ ಅನುದಾನಗಳಲ್ಲೂ ಕೈಗೊಳ್ಳಲಾಗುವುದು’ ಎಂದು ಗೌರವ್ ಗುಪ್ತ ಮಾಹಿತಿ ನೀಡಿದರು.

ಆಸ್ತಿ ತೆರಿಗೆಯ ಶೇ 1ರಷ್ಟು ಪಾಲು ಆಯಾ ವಾರ್ಡ್‌ಗೆ

ಆಯಾ ವಾರ್ಡ್‌ನಲ್ಲಿ ಸಂಗ್ರಹವಾಗುವ ಆಸ್ತಿ ತೆರಿಗೆಯಲ್ಲಿ ಶೇ 1ರಷ್ಟನ್ನು ಆಯಾ ವಾರ್ಡ್‌ಗೆ ಒದಗಿಸುವ ಮಹತ್ವದ ತೀರ್ಮಾನವನ್ನು ಈ ಸಲದ ಬಜೆಟ್‌ನಲ್ಲಿ ಪ್ರಸ್ತ‌ಾಪಿಸಲಾಗಿದೆ.

ಈ ಅನುದಾನ ಬಳಕೆ ಬಗ್ಗೆ ವಾರ್ಡ್ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ವಿಧಾನ ಸಭಾ ಕ್ಷೇತ್ರದ ಸಮಾಲೋಚನಾ ಸಮಿತಿ ಮಟ್ಟದಲ್ಲಿ ಅನುಮೋದನೆ ಪಡೆದು ಎಲ್ಲ ವಾರ್ಡ್‌ಗಳ ಈ ಕಾಮಗಾರಿಗಳನ್ನು ಕ್ರೋಡೀಕರಿಸಿ ಜಾರಿಗೊಳಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ವಾರ್ಡ್‌ ಮಟ್ಟದ ಕಾಮಗಾರಿಗೆ ಮತ್ತೆ ಪುನಃ ವಿಧಾನ ಸಭಾ ಕ್ಷೇತ್ರದ ಸಮಾಲೋಚನಾ ಸಮಿತಿಯ ಅನುಮೋದನೆ ಪಡೆಯ ಬೇಕೆಂಬ ಷರತ್ತಿನ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

‘ಇದು ಶಾಸಕರ ನೇರ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಲಿದೆ. ಇದರಿಂದ ವಾರ್ಡ್‌ ಸಮಿತಿಯ ಸ್ವಾಯತ್ತತೆಗೆ ಧಕ್ಕೆ ಉಂಟಾಗಲಿದೆ’ ಎಂದು ಪಾಲಿಕೆಯ ಮಾಜಿ ಸದಸ್ಯರೊಬ್ಬರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT