ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ, ದಸರಾ ವೇಳೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ: ಈಶ್ವರ ಖಂಡ್ರೆ

Published 16 ಅಕ್ಟೋಬರ್ 2023, 16:21 IST
Last Updated 16 ಅಕ್ಟೋಬರ್ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ, ಸಾಗಣೆ, ಸಂಗ್ರಹ ಹಾಗೂ ಉತ್ಪಾದನೆಯ ಮೇಲೆ ಕಣ್ಗಾವಲಿಗಾಗಿ ವಿಚಕ್ಷಣಾ ದಳ ರಚಿಸಲು ಚಿಂತಿಸಲಾಗಿದೆ’ ಎಂದು ಅರಣ್ಯ, ಜೀವಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

‘ಮುಂದಿನ ಸಚಿವ ಸಂಪುಟದಲ್ಲೇ ಜಾಗೃತ ದಳದ ರೂಪುರೇಷೆ ಕುರಿತು ಚರ್ಚಿಸಲಾಗುವುದು. ದಳದಲ್ಲಿ ಯಾರೆಲ್ಲಾ ಇರಬೇಕು ಎಂಬುದರ ಕುರಿತೂ ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ತೆರಿಗೆ ಇಲಾಖೆ ಅಧಿಕಾರಿಗಳನ್ನೂ ಈ ದಳಕ್ಕೆ ಸೇರಿಸಿಕೊಂಡು, ಸುಪ್ರೀಂ ಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಪಟಾಕಿ ತಯಾರಿಕೆ ಘಟಕಗಳಿಂದ ಮಾದರಿ ಸಂಗ್ರಹಿಸಿ ಪ್ರಯೋಗಾಲದಲ್ಲಿ ಪರಿಶೀಲಿಸಿ ಪಟಾಕಿ ರಾಸಾಯನಿಕಯುಕ್ತವೇ ಅಥವಾ ಹಸಿರು ಪಟಾಕಿಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುವುದು. ಬಳಿಕ ಕ್ರಮ ಕೈಗೊಳ್ಳಲಾಗುವುದು. ಜಾಗೃತ ದಳ ಉತ್ತಮವಾಗಿ ಕೆಲಸ ಮಾಡಿದರೆ, ಶೇ 80ರಷ್ಟು ನಿಷೇಧಿತ ಪಟಾಕಿ ಉತ್ಪಾದನೆ, ಮಾರಾಟ ನಿಯಂತ್ರಣಕ್ಕೆ ತರಲು ಸಾಧ್ಯವಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ದಸರಾ, ದೀಪಾವಳಿ ವೇಳೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ರಾಸಾಯನಿಕಯುಕ್ತ ಪಟಾಕಿ ಬಳಕೆಯಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯವಾಗುತ್ತಿದೆ. ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ’ ಎಂದು ಹೇಳಿದರು.

‘ಹಸಿರು ಪಟಾಕಿ ದಾಸ್ತಾನು ಮಾಡಿಕೊಂಡಿದ್ದರೆ ತೊಂದರೆ ಇಲ್ಲ. ಹಸಿರು ಪಟಾಕಿಗೆ ಲಾಂಛನವಿದೆ. ಬೇರೆ ಪಟಾಕಿ ದಾಸ್ತಾನಿಗೆ ಅವಕಾಶವೇ ಇಲ್ಲ’ ಎಂದು ಹೇಳಿದರು.

‘ಹೊರ ರಾಜ್ಯಗಳಿಂದ ನಿಷೇಧಿತ ಪಟಾಕಿಯನ್ನು ರಾಜ್ಯದ ಒಳಗೆ ತರುತ್ತಿದ್ದರೆ ರಾಜ್ಯದ ಗಡಿಗಳಲ್ಲೇ ಜಪ್ತಿ ಮಾಡಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT