ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸಿ ಸಭೆ: ಎಚ್‌.ಕೆ. ಪಾಟೀಲರ ವಿರುದ್ಧ ತಿರುಗಿಬಿದ್ದ ಬಿಜೆಪಿ ಸದಸ್ಯರು

Last Updated 2 ಜೂನ್ 2020, 22:51 IST
ಅಕ್ಷರ ಗಾತ್ರ

ಬೆಂಗಳೂರು: ಔಷಧ ಮತ್ತು ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ತಡೆ ನೀಡಿದ ವಿಧಾನಸಭಾಧ್ಯಕ್ಷರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಚಿಂತಿಸುತ್ತಿರುವುದಾಗಿ ಹೇಳಿದ್ದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಅಧ್ಯಕ್ಷ ಎಚ್‌.ಕೆ. ಪಾಟೀಲರ ವಿರುದ್ಧ ಸಮಿತಿಯಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಹಕ್ಕುಚ್ಯುತಿ ಮಂಡಿಸುವ ನಿರ್ಣಯ ಕೈಗೊಳ್ಳುವ ಕುರಿತಂತೆ ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಪಾಟೀಲರು ಪ್ರಸ್ತಾಪಿಸುತ್ತಿದ್ದಂತೆ, ಸಮಿತಿಯಲ್ಲಿದ್ದ ಬಿಜೆಪಿ ಸದಸ್ಯರು ಕೆರಳಿದರು. ‘ಕಳೆದ ವಾರ ನಡೆದ ಸಮಿತಿಯ ಸಭೆಯಲ್ಲಿ ಈ ವಿಷಯದ ಕುರಿತು ಉಳಿದ ಸದಸ್ಯರ ಅಭಿಪ್ರಾಯ ಮತ್ತು ಒಪ್ಪಿಗೆ ‍ಏಕೆ ಪಡೆಯಲಿಲ್ಲ. ಈ ಬಗ್ಗೆ ಎಲ್ಲ ಸದಸ್ಯರ ಜತೆ ಚರ್ಚಿಸುವ ಮೊದಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಏಕೆ’ ಎಂದು ಪ್ರಶ್ನಿಸಿದರೆಂದು ಮೂಲಗಳು ಹೇಳಿವೆ.

‘ಸಭೆಯಲ್ಲಿ ಚರ್ಚಿಸಿ ವರದಿ ನೀಡಿದ ಬಳಿಕ, ಪರಿಶೀಲನೆಗೆ ಸಭಾಧ್ಯಕ್ಷರಿಂದ ಅನುಮತಿ ಪಡೆಯಬೇಕು. ಈ ವಿಷಯದಲ್ಲಿ ನೀವು ನಿಯಮ ಉಲ್ಲಂಘಿಸಿದ್ದೀರಿ’ ಎಂದೂ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಡಿಸಿದರೆನ್ನಲಾಗಿದೆ.

ಆಗ ಮಧ್ಯಪ್ರವೇಶಿಸಿದ, ಕಾಂಗ್ರೆಸ್‌ನ ಕೆ.ಆರ್‌. ರಮೇಶ್ ಕುಮಾರ್‌, ‘ಸಭಾಧ್ಯಕ್ಷರಿಗೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೆಲವು ವಿವೇಚನಾಧಿಕಾರವಿದೆ. ಈ ವಿಷಯದಲ್ಲಿ ನೀವೂ (ಪಾಟೀಲರು) ಕೂಡಾ ಎಡವಿದ್ದೀರಿ. ಸಭಾಧ್ಯಕ್ಷರ ಜೊತೆ ಈ ಕುರಿತು ಮಾತುಕತೆ ನಡೆಸಿ, ಸೌಹಾರ್ದಯುತವಾಗಿ ಬಗೆಹರಿಸೋಣ’ ಎಂಬುದಾಗಿ ಸಮಾಧಾನಪಡಿಸಿದರೆಂದೂ ಹೇಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಎಚ್‌.ಕೆ. ಪಾಟೀಲ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರ ಜೊತೆ ಮಾತುಕತೆ ನಡೆಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಅವರ ಜೊತೆ ಚರ್ಚಿಸಿದ ಬಳಿಕ ಖರೀದಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಅವಕಾಶ ಕೇಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT