ಬೆಂಗಳೂರಿನಲ್ಲಿ 3 ಹೊಸ ಮಾರುಕಟ್ಟೆ ನಿರ್ಮಾಣ

7

ಬೆಂಗಳೂರಿನಲ್ಲಿ 3 ಹೊಸ ಮಾರುಕಟ್ಟೆ ನಿರ್ಮಾಣ

Published:
Updated:
Deccan Herald

ಬೆಂಗಳೂರು: ಶತಮಾನದಷ್ಟು ಹಳೆಯ ಕೆ.ಆರ್‌.ಮಾರುಕಟ್ಟೆಯ ಅವ್ಯವಸ್ಥೆಗಳನ್ನು ಸರಿಪಡಿಸಲು ಬಹಳಷ್ಟು ಕಸರತ್ತುಗಳನ್ನು ನಡೆಸಿ ಸೋತಿರುವ ಬಿಬಿಎಂಪಿ, ನಗರದಲ್ಲಿ ಹೊಸತಾಗಿ ಮೂರು ಮಾರುಕಟ್ಟೆಗಳನ್ನು ನಿರ್ಮಿಸಲು ಮುಂದಾಗಿದೆ.

ಕೆ.ಆರ್‌.ಮಾರುಕಟ್ಟೆಗೆ ಗುರುವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ, ಇಲ್ಲಿನ ಅವ್ಯವಸ್ಥೆಗಳನ್ನು ಕಂಡು ದಂಗಾದರು. 

ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗೋಪಾಯಗಳ ಕುರಿತು ಮೇಯರ್‌ ಗಂಗಾಂಬಿಕೆ ಹಾಗೂ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರ ಜತೆ ಸಮಾಲೋಚನೆ ನಡೆಸಿದ ಅವರು, ನಗರದಲ್ಲಿ ಮೂರು ಕಡೆ ಹೊಸ ಮಾರುಕಟ್ಟೆ ನಿರ್ಮಿಸುವ ನಿರ್ಧಾರ ಪ್ರಕಟಿಸಿದರು.

‘ಈ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ಆದರೂ, ಜನ ಇದನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ. ಇಲ್ಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಮಾರುಕಟ್ಟೆಯ ಮಾದರಿಯಲ್ಲೇ ಮೂರು ಹೊಸ ಮಾರುಕಟ್ಟೆಗಳನ್ನು ನಿರ್ಮಿಸಲಿದ್ದೇವೆ. ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ಸಹಭಾಗಿತ್ವದಲ್ಲಿ ಬಿಬಿಎಂಪಿ ಹೊಸ ಮಾರುಕಟ್ಟೆಗಳನ್ನು ನಿರ್ಮಿಸಲಿದೆ’ ಎಂದು ಸಚಿವರು ತಿಳಿಸಿದರು.  ಹೊಸ ಮಾರುಕಟ್ಟೆ ನಿರ್ಮಿಸಲು ಸೂಕ್ತ ಸ್ಥಳ ಗುರುತಿಸುವಂತೆ ಹಾಗೂ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಸಚಿವರು ಆಯುಕ್ತರಿಗೆ ಸೂಚಿಸಿದರು. 

ಉಪಾಯುಕ್ತೆ ಅಮಾನತು: ಮಾರುಕಟ್ಟೆಯ ಹೊಸ ಕಟ್ಟಡದ ಸಾಲು ಅಂಗಡಿಗಳು ಯಾವ ಇಲಾಖೆ ವ್ಯಾಪ್ತಿಗೆ ಸೇರಲಿವೆ ಎಂದು ಸಚಿವರು ಬಿಬಿಎಂಪಿ ಮಾರುಕಟ್ಟೆ ವಿಭಾಗದ ಉಪಾಯುಕ್ತರಾದ ಮುನಿಲಕ್ಷ್ಮಿ ಅವರನ್ನು ಪ್ರಶ್ನಿಸಿದರು. ಅಧಿಕಾರಿ ಉತ್ತರಿಸದೇ ತಬ್ಬಿಬ್ಬಾದರು. ಇದರಿಂದ ಸಿಟ್ಟಾದ ಸಚಿವರು, ‘ಏನು‌ ಕೆಲಸ‌ ಮಾಡುತ್ತೀದ್ದೀರಿ. ನಿಮ್ಮ ಇಲಾಖೆಗೆ ಸೇರಿದ ಆಸ್ತಿಗಳ ಬಗ್ಗೆಯೇ ಗೊತ್ತಿಲ್ಲವೆಂದಾದರೆ ಈ ಹುದ್ದೆಯಲ್ಲಿ ಏಕಿರಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುನಿಲಕ್ಷ್ಮಿ ಅವರನ್ನು ಅಮಾನತು ಮಾಡುವಂತೆ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಅವರಿಗೆ ಸೂಚಿಸಿದರು.

ಹೊಸ ಕಟ್ಟಡದ ಮೇಲಿನ ಮಹಡಿಗಳು ಖಾಲಿ ಇರುವ ಬಗ್ಗೆ ಆಯುಕ್ತರನ್ನು ಪ್ರಶ್ನಿಸಿದರು. ‘ಮಹಡಿಗಳಲ್ಲಿರುವ ಮಳಿಗೆಗಳಲ್ಲಿ ವ್ಯಾಪಾರ ಮಾಡಲು ಯಾರೂ ಆಸಕ್ತಿ ತೋರಿಸುತ್ತಿಲ್ಲ’ ಎಂದು ಆಯುಕ್ತರು ತಿಳಿಸಿದರು. ಪಾದಚಾರಿ ಮಾರ್ಗ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವವರನ್ನು ಮಹಡಿಯ ಮಳಿಗೆಗಳಿಗೆ ಸ್ಥಳಾಂತರಿಸುವಂತೆ, ಮಾರುಕಟ್ಟೆಯ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ತಿಂಗಳಾನುಗಟ್ಟಲೆ ನಿಲ್ಲಿಸಿರುವ ವಾಹನಗಳನ್ನು ಹರಾಜು ಹಾಕುವಂತೆ ಸೂಚಿಸಿದರು. ದುರ್ನಾತ ಬೀರುತ್ತಿರುವ ಮೀನು ಮಾರುಕಟ್ಟೆಯ ಕಸವನ್ನು ಏಕೆ ತೆಗೆಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ, ‘ಕೆ.ಆರ್.ಮಾರುಕಟ್ಟೆಯಲ್ಲಿ ಅವ್ಯವಹಾರ ನಡೆಯುತ್ತಿದೆ. ಅನೇಕ ವ್ಯಾಪಾರಿಗಳು ಸರಿಯಾಗಿ ಬಾಡಿಗೆ ಕಟ್ಟುತ್ತಿಲ್ಲ ಎಂಬ ಮಾಹಿತಿ ಇತ್ತು. ಪ್ರತ್ಯಕ್ಷವಾಗಿ ಈ ಬಗ್ಗೆ ಪರಿಶೀಲಿಸಲು ಬಂದಿದ್ದೇನೆ’ ಎಂದರು.

 ಕೆಲವು ವ್ಯಾಪಾರಿಗಳು ವರ್ಷಾನುಗಟ್ಟಲೆ ಬಾಡಿಗೆ ಕಟ್ಟದಿರುವ ಬಗ್ಗೆ ಸಮಗ್ರ ತಪಾಸಣೆ ನಡೆಸುವಂತೆ ಹೇಳಿದ್ದೇನೆ. ಆಂದೋಲನದ ರೀತಿ ಕೆಲಸ ಮಾಡಿ, 15 ದಿನಗಳ ಒಳಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ’ ಎಂದರು.

ಸ್ವಚ್ಛತೆಗೆ ಸೂಚನೆ

ಮಾರುಕಟ್ಟೆಗೆ ಭೇಟಿ ನೀಡಿದ ಸಚಿವರನ್ನು ಕಸದ ರಾಶಿ ಹಾಗೂ ಕೊಳಚೆ ಸ್ವಾಗತಿಸಿತು. ಇದರಿಂದ ‌ಕೆಂಡಾಮಂಡಲವಾದ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರುಕಟ್ಟೆಯ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದರು.

‘ಬಡ್ಡಿ ದಂಧೆಗೆ ಕಡಿವಾಣ’

ಜಿ.ಪರಮೇಶ್ವರ ಅವರು ವ್ಯಾಪಾರಿಗಳ ಅಹವಾಲು ಆಲಿಸಿದರು. ‘ಇಲ್ಲಿ ಬಡ್ಡಿ ದಂಧೆ ನಡೆಯುತ್ತಿದೆ’ ಎಂದು ವ್ಯಾಪಾರಿಗಳು ಸಚಿವರ ಬಳಿ ಅಳಲು ತೋಡಿಕೊಂಡರು. ಮಾರುಕಟ್ಟೆಯಲ್ಲಿ ಇಂತಹ ಚಟುವಟಿಕೆ ಮೇಲೆ ನಿಗಾ ಇಡುವುದಕ್ಕೆ ಪ್ರತ್ಯೇಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸುವಂತೆ ನಗರ ಪೊಲೀಸ್‌ ಕಮೀಷನರ್‌ಗೆ ಸಚಿವರು ಸೂಚನೆ ನೀಡಿದರು. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !