ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಲ್ಲದ ಅಕ್ರಮ; ಮೊಬೈಲ್, ಸಿಮ್ ಪತ್ತೆ

ಭದ್ರತೆ ಹೆಚ್ಚಿಸಿದರೂ ಸಿಬ್ಬಂದಿ ಕಣ್ತಪ್ಪಿಸಿ ಸಾಗಣೆ
Last Updated 4 ಏಪ್ರಿಲ್ 2023, 7:38 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತೆ ಹೆಚ್ಚಿಸಿದ್ದರೂ ಅಕ್ರಮ ಚಟುವಟಿಕೆಗಳು ನಿರಂತರವಾಗಿವೆ. ಪ್ರತಿ ಕೊಠಡಿಗಳಲ್ಲಿ ಸಿಬ್ಬಂದಿ ಮೇಲಿಂದ ಮೇಲೆ ತಪಾಸಣೆ ನಡೆಸುತ್ತಿದ್ದು ಮೊಬೈಲ್, ಸಿಮ್‌ಕಾರ್ಡ್‌ಗಳನ್ನು ಜಪ್ತಿ ಮಾಡುತ್ತಿದ್ದಾರೆ.

ಜೈಲಿನ ಪ್ರವೇಶ ದ್ವಾರ ಹಾಗೂ ಕೈದಿಗಳ ಭೇಟಿ ಸ್ಥಳದಲ್ಲಿ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಸಿಬ್ಬಂದಿ ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೈಲು ಸಿಬ್ಬಂದಿಯೂ ಭದ್ರತೆಗೆ ಕೈ ಜೋಡಿಸಿದ್ದಾರೆ.

ಜೈಲಿಗೆ ಬರುವ ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆದಾಗ್ಯೂ, ಡ್ರಗ್ಸ್ ಹಾಗೂ ಮೊಬೈಲ್‌ಗಳು ಸರಬರಾಜಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಭೇಟಿಗಾಗಿ ಅನುಮತಿ ಪಡೆಯುವ ಕೆಲವರು, ಕೈದಿಗಳಿಗೆ ಮೊಬೈಲ್ ಹಾಗೂ ಡ್ರಗ್ಸ್ ಕೊಟ್ಟು ಹೋಗುತ್ತಿದ್ದಾರೆ. ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು, ಮೊಬೈಲ್ ಬಳಸಿ ಹೊರಗಿನವರ ಜೊತೆ ಸಂಪರ್ಕ ಸಾಧಿಸುತ್ತಿದ್ದಾರೆ. ಕೆಲವರು, ಜನರಿಗೆ ಜೀವ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು, ಸಂಬಂಧಿಕರು ಹಾಗೂ ಎದುರಾಳಿಗಳಿಗೆ ಕರೆ ಮಾಡುತ್ತಿರುವ ಬಗ್ಗೆ ಕೆಲ ಠಾಣೆಗಳ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಅಂಥ ಕೈದಿಗಳ ಕೊಠಡಿಯಲ್ಲಿ ತಪಾಸಣೆ ನಡೆಸಿ ಅಕ್ರಮ ಪತ್ತೆ ಮಾಡಲಾಗುತ್ತಿದೆ’ ಎಂದು ಕಾರಾಗೃಹದ ಮೂಲಗಳು ಹೇಳಿವೆ.

‘ಮೊಬೈಲ್, ಸಿಮ್‌ ಕಾರ್ಡ್ ಹಾಗೂ ಇತರೆ ಯಾವುದಾದರೂ ನಿಷೇಧಿತ ವಸ್ತುಗಳು ಸಿಕ್ಕರೆ ಠಾಣೆಗೆ ದೂರು ನೀಡಲಾಗುತ್ತಿದೆ. ಕೈದಿ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಾಗುತ್ತಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಪಾಸಣೆ: ಕೈದಿಗಳ ಕೊಠಡಿಗಳಲ್ಲಿ ಜೈಲಿನ ಅಧಿಕಾರಿಗಳು ಮಾರ್ಚ್ 29ರಂದು ತಪಾಸಣೆ ನಡೆಸಿದ್ದು, ಮೊಬೈಲ್ ಹಾಗೂ ಸಿಮ್‌ಕಾರ್ಡ್‌ಗಳನ್ನು ಪತ್ತೆ ಹಚ್ಚಿದ್ದಾರೆ.

‘ಕೈದಿಗಳು ಮೊಬೈಲ್ ಬಳಸುತ್ತಿರುವ ಮಾಹಿತಿ ಇದ್ದು, ದಿಢೀರ್ ತಪಾಸಣೆ ನಡೆಸಲಾಯಿತು. ಟವರ್‌– 1 ವಿಭಾಗದ 7ನೇ ಬ್ಯಾರಕ್‌ನ ಕೊಠಡಿ ಸಂಖ್ಯೆ 1ರಲ್ಲಿ ಮೊಬೈಲ್ ಫೋನ್, 3 ಸಿಮ್‌ ಕಾರ್ಡ್‌ ಪತ್ತೆಯಾಗಿವೆ’ ಎಂದು ಮೂಲಗಳು ಹೇಳಿವೆ.

‘ವಿಚಾರಣಾಧೀನ ಕೈದಿ ಸೈಯದ್ ಅಸ್ಗರ್ ಅಲಿಯಾಸ್ ಅಜ್ಜು ಎಂಬಾತ ಮೊಬೈಲ್ ಹಾಗೂ ಸಿಮ್‌ಕಾರ್ಡ್‌ ಇಟ್ಟುಕೊಂಡಿದ್ದು ಗೊತ್ತಾಗಿದೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ತಿಳಿಸಿವೆ.

ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ‘ಜೈಲಿನೊಳಗೆ ಮೊಬೈಲ್, ಸಿಮ್‌ಕಾರ್ಡ್ ಹೇಗೆ ಸಾಗಿಸಲಾಗಿದೆ ಎಂದು ತಿಳಿಯಲು ತನಿಖೆ ಮುಂದುವರಿಸಲಾಗಿದೆ. ವಿಚಾರಣಾಧೀನ ಕೈದಿಗೆ ಜೈಲಿನ ಕೆಲ ಸಿಬ್ಬಂದಿಯೂ ಸಹಕಾರ ನೀಡಿರುವ ಅನುಮಾನವೂ ಇದೆ’ ಎಂದರು.

500 ಪುಟಗಳ ವರದಿ ಸಲ್ಲಿಸಿದ್ದ ಎಡಿಜಿಪಿ
ಜೈಲಿನಲ್ಲಿನ ಅಕ್ರಮ ಚಟುವಟಿಕೆ ಹಾಗೂ ಕೈದಿಗಳಿಗೆ ವಿಲಾಸಿ ಸೌಲಭ್ಯ ಒದಗಿಸುತ್ತಿರುವ ಬಗ್ಗೆ ವಿಡಿಯೊಗಳು ಹರಿದಾಡಿದ್ದವು. ಈ ಬಗ್ಗೆ ತನಿಖೆ ನಡೆಸಿದ್ದ ಎಸಿಜಿಪಿ ಮುರುಗನ್ ನೇತೃತ್ವದ ತಂಡ, ಸರ್ಕಾರಕ್ಕೆ 500 ಪುಟಗಳ ವರದಿ ಸಲ್ಲಿಸಿತ್ತು.

ಬಳಿಕ ಹಲವು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆಯಾಗಿತ್ತು. ಅಕ್ರಮ ತಡೆಗೆ ಕೆಲ ಸುಧಾರಣಾ ಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

‘ಜಾಮರ್ ಬದಲಾವಣೆಗೆ ಪ್ರಸ್ತಾವ’
‘ಜೈಲಿನಲ್ಲಿ ಅಳವಡಿಸಿರುವ ಜಾಮರ್‌ಗಳು, 3ಜಿ ಮೊಬೈಲ್‌, ಸಿಮ್‌ಕಾರ್ಡ್‌ಗಳಿಗಷ್ಟೇ ಸೀಮಿತವಾಗಿವೆ. 4ಜಿ ಹಾಗೂ 5ಜಿ ಕರೆಗಳನ್ನು ತಡೆಯುವ ಸಾಮರ್ಥ್ಯವಿಲ್ಲ. ಹೀಗಾಗಿ, ಜಾಮರ್ ಬದಲಾವಣೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕಾರಾಗೃಹದ ಮೂಲಗಳು ಹೇಳಿವೆ.

‘ಕೇಂದ್ರ ಕಾರಾಗೃಹದ ಆಸುಪಾಸಿನಲ್ಲಿ ವಸತಿ ಪ್ರದೇಶವಿದೆ. ಜಾಮರ್‌ನಿಂದ ಸಾರ್ವಜನಿಕರ ಮೊಬೈಲ್‌ಗಳೂ ಬಂದ್ ಆಗುತ್ತಿರುವ ದೂರುಗಳಿವೆ. ಕಾರಾಗೃಹಕ್ಕಷ್ಟೇ ಜಾಮರ್ ಸೀಮಿತಗೊಳಿಸುವ ಹೊಸ ತಂತ್ರಜ್ಞಾನ ಬಳಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ತಿಳಿಸಿವೆ.

ಮೊಬೈಲ್ ಸಿಕ್ಕಿದ್ದ ಪ್ರಕರಣಗಳು
* 2023 ಫೆ. 20: ವಿಚಾರಣಾಧೀನ ಕೈದಿ ಮಹಮ್ಮದ್ ನೌಶಾದ್ ಅಲಿಯಾಸ್ ಅನ್ಸಾರಿ ಒಳ ಉಡುಪಿನಲ್ಲಿ ಮೊಬೈಲ್ ಪತ್ತೆಯಾಗಿತ್ತು
* 2023 ಜ. 23: ವಿಚಾರಣಾಧೀನ ಕೈದಿ ಜಯಮ್ಮ ಭೇಟಿಗೆ ಬಂದಿದ್ದ ರಾಮನಗರದ ಗುರುಲಕ್ಷ್ಮಮ್ಮ ಬ್ಯಾಗ್‌ನಲ್ಲಿ ಮೊಬೈಲ್ ಪತ್ತೆ
* 2022 ಡಿ. 22: ಕೈದಿ ಮಹಮ್ಮದ್ ನದೇಮ್ ಅಲಿಯಾಸ್ ಬಡ್ಡೆ ನೋಡಲು ಬಂದಿದ್ದ ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ನಿವಾಸಿ ಉಮ್ಮೆಶಾಮ ಗುಪ್ತಾಂಗದಲ್ಲಿ ಬಚ್ಚಿಟ್ಟಿದ್ದ ಎರಡು ಬೇಸಿಕ್ ಮೊಬೈಲ್‌ ಪತ್ತೆ
* 2022 ಡಿ. 14: ಕಾರಾಗೃಹದ 2ನೇ ಟವರ್‌ ಕಟ್ಟಡದ ಡಿ.ಬ್ಯಾರಕ್‌ನ ಕೊಠಡಿ ಸಂಖ್ಯೆ 6ರಲ್ಲಿ ಕೈದಿ ಸಾಗರ್ ಅಲಿಯಾಸ್ ರಕಿಬುಲ್ ಇಸ್ಲಾಮ್ ಬಳಿ ಎರಡು ಮೊಬೈಲ್ ಹಾಗೂ ಮೂರು ಸಿಮ್‌ಕಾರ್ಡ್‌ ಪತ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT