ಗುರುವಾರ , ಡಿಸೆಂಬರ್ 5, 2019
19 °C
ಕಾರಾಗೃಹದಲ್ಲಿ ರೌಡಿಗಳಿಂದ ಕೃತ್ಯ: ಮೃದು ವ್ಯಕ್ತಿತ್ವದವರ ಮೇಲೆ ದೌರ್ಜನ್ಯ

ಪರಪ್ಪನ ಅಗ್ರಹಾರ: ಜೈಲಿನಲ್ಲೇ ಕೈದಿಗಳಿಂದ ಸುಲಿಗೆ!

ಉಮೇಶ್‌ ಯಾದವ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಮಿನಲ್‌ಗಳ ಸುಧಾರಣಾ ಕೇಂದ್ರವಾಗಬೇಕಾಗಿದ್ದ ಜೈಲಿನಲ್ಲೇ ಕುಖ್ಯಾತ ರೌಡಿಗಳು ಉಳಿದ ಆರೋಪಿಗಳು ಹಾಗೂ ಕೈದಿಗಳನ್ನು ಸುಲಿಗೆ ಮಾಡುತ್ತಿರುವ ಆತಂಕಕಾರಿ ಸಂಗತಿ ಬಯಲಿಗೆ ಬಂದಿದೆ.

ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿ ನಾಲ್ಕು ತಿಂಗಳಿಂದ ನಗರದ ಪರ‍‍ಪ್ಪನ ಅಗ್ರಹಾರ ಜೈಲಿನಲ್ಲಿರುವ 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ಗೆ ರೌಡಿಗಳು ಮತ್ತು ಅವರ ಸಹಚರರು ಸತತವಾಗಿ ಸುಲಿಗೆ ಮಾಡಿ, ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ಉತ್ತರದ ನಿವಾಸಿ ಸಂತೋಷ್‌ ಕುಮಾರ್‌ (ಹೆಸರು ಬದಲಾಯಿಸಲಾಗಿದೆ) ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗುತ್ತಿದ್ದಂತೆ ವಿಚಾರಣಾಧೀನ ಕೈದಿಗಳ ಗುಂಪು ಅವರಿಗೆ ಬೆದರಿಕೆ ಹಾಕಿತು. ಬಳಿಕ ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಿತು. ಮಸಾಜ್‌ ಮಾಡುವಂತೆ ಒತ್ತಾಯಿಸಿತು. ರಾತ್ರಿ ಮಲಗಲು ಜಾಗ ಕೊಡದೆ ನಿಂದಿಸಿತು.

ಕೆಲವು ದಿನಗಳ ಕಾಲ ಕಿರುಕುಳ ಮುಂದುವರಿಯಿತು. ಆನಂತರ ಗುಂಪು, ನಿಮ್ಮ ಕುಟುಂಬದ ಸದಸ್ಯರ ಮೂಲಕ ತಾವು ಕೊಡುವ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಿಸಿದರೆ ಕಿರುಕುಳ ನಿಲ್ಲಿಸುವುದಾಗಿ ಹೇಳಿತು. ಜಿಗುಪ್ಸೆಗೆ ಒಳಗಾಗಿದ್ದ ಎಂಜಿನಿಯರ್‌ ಈ ಬೇಡಿಕೆಗೆ ಒಪ್ಪಿದರು.

ಪ್ರತಿ ವಾರ ಗುಂಪು ಒಂದೊಂದು ಬ್ಯಾಂಕ್‌ ಖಾತೆ ನಂಬರ್‌ ನೀಡಿತು. ಅದನ್ನು ಸಂತೋಷ್‌ ತಮ್ಮ ಭೇಟಿಗೆ ಬರುವ ಕುಟುಂಬ ಸದಸ್ಯರಿಗೆ ನೀಡಿದ್ದರು. ಈ ಖಾತೆಗಳಿಗೆ ಸರಾಸರಿ ಐದಾರು ಸಾವಿರ ರೂಪಾಯಿ ಹಾಕಲಾಗಿದೆ. ಇದುವರೆಗೆ ಸುಮಾರು ₹ 50 ಸಾವಿರ ಹಣ ಜಮೆ ಮಾಡಲಾಗಿದೆ ಎಂದು ಟೆಕಿ ಕುಟುಂಬದ ಮೂಲಗಳು ತಿಳಿಸಿವೆ.

ಎಸ್‌ಬಿಐ ಖಾತೆ ಹೊಂದಿರುವ ಜಯಣ್ಣ, ಆರ್‌. ಕವಿತಾ ಹಾಗೂ ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಇರುವ ಜ್ಯೋತಿ ಎಸ್‌. ಎಂಬುವರ ಖಾತೆಗಳಿಗೆ ಹಣ ಸಂದಾಯ ಮಾಡಲಾಗಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದ ಬ್ಯಾಂಕ್‌ ವಿವರ, ಚಲನ್‌ಗಳ ಪ್ರತಿ, ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಜೈಲಿಗೆ ಬರುವ ಹೊಸಬರನ್ನು ಅದರಲ್ಲೂ ಮೃದು ವ್ಯಕ್ತಿತ್ವದವರ ಮೇಲೆ ಗುಂಪು ದೌರ್ಜನ್ಯ ನಡೆಸುತ್ತಿದೆ. ಎಲ್ಲ ಬ್ಯಾರಕ್‌ಗಳಲ್ಲೂ ಅವರ ಕಡೆಯವರು ಇರುವುದರಿಂದ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಪ್ರತಿ 15 ಅಥವಾ ತಿಂಗಳಿಗೊಮ್ಮೆ ಕೈದಿಗಳ ಬ್ಯಾರಕ್‌ಗಳನ್ನು ಬದಲಾಯಿಸಲಾಗುತ್ತಿದ್ದರೂ, ಕುಖ್ಯಾತ ರೌಡಿಗಳ ಉಪಟಳ ನಿಂತಿಲ್ಲ’ ಎಂಬುದು ವಕೀಲ ಕೆ.ಬಿ.ಕೆ ಸ್ವಾಮಿ ಅವರ ಅಭಿಪ್ರಾಯ.

ಕ್ರಮ ಕೈಗೊಳ್ಳುವ ಭರವಸೆ: ಟೆಕಿ ಪ್ರಕರಣ ತಮ್ಮ ಗಮನಕ್ಕೆ ಬಂದಿಲ್ಲ. ಅವರು ದೂರು ನೀಡಿದರೆ ವಿಚಾರಣಾಧೀನ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪರಪ್ಪನ ಅಗ್ರಹಾರ ಕಾರಾಗೃಹ ಅಧೀಕ್ಷಕ ವಿ. ಶೇಷಮೂರ್ತಿ ತಿಳಿಸಿದ್ದಾರೆ. ಸದ್ಯ 2ಜಿ ಹಾಗೂ 3ಜಿ ಮೊಬೈಲ್‌ ಕರೆಗಳನ್ನು ಮಾತ್ರ ತಡೆಯಲು ಅವಕಾಶವಿದೆ. 4ಜಿ ಕರೆಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಅವರು ಹೇಳಿದ್ದಾರೆ.

₹ 5 ಲಕ್ಷ ನೀಡದಿದ್ದರೆ ಕೊಲೆ ಬೆದರಿಕೆ
ಇಂತಹದೇ ಮತ್ತೊಂದು ಪ್ರಕರಣದಲ್ಲಿ ಎಂ. ಮುನಿರಾಜು ಎಂಬುವವರಿಗೆ ಅಯ್ಯಪ್ಪ ಬಂಡೆ ಜೈಲಿನಿಂದ ಕರೆ ಮಾಡಿ ₹ 5ಲಕ್ಷ ಕೊಡದಿದ್ದರೆ ಬಿಡುಗಡೆಯಾಗಿ ಬಂದ ಬಳಿಕ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಲಾಗಿದೆ.

ನಾನು 15ದಿನಗಳ ಹಿಂದೆ ಪೂರ್ವಜರಿಂದ ಬಂದಿರುವ ಆಸ್ತಿ ಮಾರಾಟ ಮಾಡಲು ತೀರ್ಮಾನಿಸಿದೆ. ಆನಂತರ ಜೈಲಿನಿಂದ ಕರೆ ಬಂದಿದೆ ಎಂದು ಮುನಿರಾಜು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಕೋರ್ಟ್‌ ಅನುಮತಿಯ ಬಳಿಕ ಸಿದ್ಧಾಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು