ಬುಧವಾರ, ಮೇ 25, 2022
28 °C
* ಚುನಾಯಿತ ಪ್ರತಿನಿಧಿಗಳಿಲ್ಲದೇ ಏಕಪಕ್ಷೀಯ ನಿರ್ಧಾರ ಆರೋಪ * ಬಿಬಿಎಂಪಿ ಅಧಿಕಾರಿಗಳು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

‘ಅಧಿಕಾರಿ’ಗಳ ಪಾರ್ಕಿಂಗ್ ನೀತಿ ವಿರುದ್ಧ ಬೀದಿಗಿಳಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜಾರಿಗೆ ತರುತ್ತಿರುವ ‘ಪಾರ್ಕಿಂಗ್ ನೀತಿ 2.0’ ವಿರೋಧಿಸಿ ಸಾರ್ವಜನಿಕರು ಹಾಗೂ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ.

‘ಜನರ ಪ್ರತಿನಿಧಿಗಳು ಇಲ್ಲದ ಬಿಬಿಎಂಪಿಯಲ್ಲಿ ಅಧಿಕಾರಿಗಳದ್ದೇ ಆಟವಾಗಿದೆ. ಜನರ ಹಾಗೂ ಪರಿಣಿತರ ಅಭಿಪ್ರಾಯವನ್ನು ಪಡೆಯದೇ ರೂಪಿಸಿರುವ ಪಾರ್ಕೀಂಗ್ ನೀತಿ, ಜನವಿರೋಧಿಯಾಗಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ–ಸಿ) ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ‘ಪಾರ್ಕಿಂಗ್ ನೀತಿ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಮೈಸೂರು ಬ್ಯಾಂಕ್ ವೃತ್ತ ಹಾಗೂ ಆನಂದರಾವ್ ವೃತ್ತ ಬಳಿಯ ಕಾಂಗ್ರೆಸ್ ಭವನ ಎದುರು ಪ್ರತ್ಯೇಕವಾಗಿ ಪ್ರತಿಭಟನೆಗಳು ನಡೆದವು. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು.

‘ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ತತ್ತರಿಸಿರುವ ಜನತೆ, ಚೇತರಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲೇ ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದು ದುಡ್ಡು ಮಾಡುವ ತಂತ್ರವಾಗಿದ್ದು, ಜನರ ಸುಲಿಗೆ ಇದರ ಉದ್ದೇಶವಾಗಿದೆ’ ಎಂದೂ ಪ್ರತಿಭಟನಕಾರರು ದೂರಿದರು.

‘ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿದ್ದು, ಇದೀಗ ಅಧಿಕಾರಿಗಳದ್ದೇ ಆಡಳಿತವಿದೆ. ಇಂಥ ಅಧಿಕಾರಿಗಳು, ತಮ್ಮಿಷ್ಟದಂತೆ ಪಾರ್ಕಿಂಗ್ ನೀತಿ ಸಿದ್ಧಪಡಿಸಿದ್ದಾರೆ. ನೀತಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಪರಿಶೀಲನೆ ಮಾಡಬೇಕಾದ ರಾಜ್ಯ ಸರ್ಕಾರವೇ, ನೀತಿ ಜಾರಿಗೆ ಒಪ್ಪಿಗೆ ನೀಡಿರುವುದು ಖಂಡನೀಯ. ಬಿಜೆಪಿ ನೇತೃತ್ವದ ಸರ್ಕಾರ, ಜನರನ್ನು ದಿನದಿಂದ ದಿನಕ್ಕೆ ಇಕ್ಕಟ್ಟಿಗೆ ಸಿಲುಕಿಸುತ್ತಿದೆ’ ಎಂದೂ ಆರೋಪಿಸಿದರು.

‘ಆಟೊಗಳು, ಕ್ಯಾಬ್‌ಗಳು, ಟ್ಯಾಕ್ಸಿಗಳು ಹಾಗೂ ಇತರೆ ಖಾಸಗಿ ವಾಹನಗಳ ಚಾಲಕರು ನಿತ್ಯವೂ ದುಡಿಮೆ ನಂಬಿ ಜೀವನ ನಡೆಸುತ್ತಿದ್ದಾರೆ. ಆ ಪೈಕಿ ಬಹುತೇಕ ವಾಹನಗಳನ್ನು ರಸ್ತೆಯಲ್ಲಿ ಹಾಗೂ ಮನೆಗಳ ಮುಂದೆ ನಿಲ್ಲಿಸಲಾಗುತ್ತಿದೆ. ಚಾಲಕರಿಂದ ಏಕಾಏಕಿ ಸಾವಿರಾರು ರೂಪಾಯಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿದರೆ, ಅವರು ಹಣವನ್ನು ಎಲ್ಲಿಂದ ಪಾವತಿ ಮಾಡಬೇಕು. ತೈಲ ಬೆಲೆ ಹೆಚ್ಚಳ ಹಾಗೂ ಪ್ರಯಾಣಿಕರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಚಾಲಕರು, ಪಾರ್ಕಿಂಗ್ ನೀತಿಯಿಂದ ಮತ್ತಷ್ಟು ನರಳಲಿದ್ದಾರೆ. ಅವರ ಅನ್ನವನ್ನೇ ಸರ್ಕಾರ ಕಿತ್ತುಕೊಳ್ಳಲು ಹೊರಟಿದೆ’ ಎಂದೂ ಪ್ರತಿಭಟನಕಾರರು ದೂರಿದರು.

‘ಪಾರ್ಕಿಂಗ್ ನೀತಿಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಇದರ ವಿರುದ್ಧ ಪ್ರತಿಯೊಂದು ವಾರ್ಡ್‌ನಲ್ಲೂ ಹೋರಾಟ ನಡೆಸಲಾಗುವುದು’ ಎಂದೂ ಅವರು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು