ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿ ದರೋಡೆ: ಉಪ ವಲಯ ಅರಣ್ಯಾಧಿಕಾರಿ ಬಂಧನ

ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಘಟನೆ * ರೌಡಿಗಳು ಸೇರಿ 11 ಮಂದಿ ಸೆರೆ
Published 22 ಡಿಸೆಂಬರ್ 2023, 15:50 IST
Last Updated 22 ಡಿಸೆಂಬರ್ 2023, 15:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಚ್‌ಎಂಟಿ ಬಡಾವಣೆಯಲ್ಲಿರುವ ಉದ್ಯಮಿಯೊಬ್ಬರ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿ ದರೋಡೆ ಮಾಡಿದ್ದ ಆರೋಪದಡಿ ಉಪ ವಲಯ ಅರಣ್ಯಾಧಿಕಾರಿ ಹಾಗೂ ಇಬ್ಬರು ರೌಡಿಗಳು ಸೇರಿದಂತೆ 10 ಮಂದಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಡಿ. 4ರಂದು ರಾತ್ರಿ ನಡೆದಿದ್ದ ದರೋಡೆ ಸಂಬಂಧ ಉದ್ಯಮಿ ದೂರು ನೀಡಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ಉಪ ವಲಯ ಅರಣ್ಯಾಧಿಕಾರಿ ಸುರೇಂದ್ರ, ಟ್ಯಾಟೊ ಕಲಾವಿದ ಸೂರ್ಯ, ರೌಡಿಗಳಾದ ನವಾಜ್, ಶಹಬಾಜ್, ಉಸ್ಮಾನ್, ರಾಹೀಲ್, ನಾಗರಾಜ್, ಅನಿಲ್ ಕುಮಾರ್ ಸೇರಿ 11 ಮಂದಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಬಂಧಿತ ಆರೋಪಿಗಳಿಂದ 273 ಗ್ರಾಂ ಚಿನ್ನಾಭರಣ, ₹ 23.37 ಲಕ್ಷ ನಗದು, 370 ಗ್ರಾಂ ಬೆಳ್ಳಿ ಸಾಮಗ್ರಿ, 13 ಮೊಬೈಲ್‌ಗಳು, 2 ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ದೂರುದಾರರ ಬಳಿ ಕೆಲಸ: ‘ದೂರುದಾರರು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಆರೋಪಿಗಳ ಪೈಕಿ ಒಬ್ಬಾತ, ದೂರುದಾರರ ಬಳಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಣ ಸಂಗ್ರಹದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ ಈತ, ಇತರೆ ಆರೋಪಿಗಳ ಜೊತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಉಪ ವಲಯ ಅರಣ್ಯಾಧಿಕಾರಿ ಎಸ್‌.ಬಿ. ಸುರೇಂದ್ರ, ರೌಡಿ ಜೊತೆ ಒಡನಾಟ ಹೊಂದಿದ್ದ. ದರೋಡೆಗೆ ಸಂಚು ರೂಪಿಸಿದ್ದಾಗಿ ಹೇಳಿದ್ದ ರೌಡಿ, ಸಮವಸ್ತ್ರದಲ್ಲಿ ಬಂದು ಬೆದರಿಸುವಂತೆ ಸುರೇಂದ್ರಗೆ ಕೋರಿದ್ದ. ಬಂದ ಹಣದಲ್ಲಿ ಪಾಲು ನೀಡುವುದಾಗಿಯೂ ರೌಡಿ ಹೇಳಿದ್ದ’ ಎಂದು ವಿವರಿಸಿದರು.

ಪೊಲೀಸ್ ಎಂಬುದಾಗಿ ಪರಿಚಯ: ‘ಅರಣ್ಯ ಇಲಾಖೆ ಸಮವಸ್ತ್ರದಲ್ಲಿದ್ದ ಸುರೇಂದ್ರ, ದೂರುದಾರರ ಮನೆಗೆ ಹೋಗಿ ಬಾಗಿಲು ಬಡಿದಿದ್ದ. ತಾಯಿ ಜೊತೆಗಿದ್ದ ದೂರುದಾರ ಬಾಗಿಲು ತೆಗೆದಿದ್ದರು. ‘ನಾನು ಪೊಲೀಸ್ ಅಧಿಕಾರಿ. ನಿಮ್ಮ ಮನೆ ಪರಿಶೀಲನೆಗೆ ಬಂದಿದ್ದೇನೆ’ ಎಂದು ಆರೋಪಿ ಹೇಳಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕೆಲ ಕ್ಷಣಗಳಲ್ಲಿ ಇತರೆ ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ಎಲ್ಲರೂ ಸೇರಿ ಮನೆಯೊಳಗೆ ನುಗ್ಗಿದ್ದರು. ಮಾರಕಾಸ್ತ್ರ ತೋರಿಸಿ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಮನೆ ಅಕ್ಕ–ಪಕ್ಕದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ, ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಅದೇ ಸುಳಿವು ಆಧರಿಸಿ ತನಿಖೆ ಆರೋಪಿಗಳನ್ನು ವಶಕ್ಕೆ ಪಡೆದಾಗ, ತಪ್ಪೊಪ್ಪಿಕೊಂಡರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT