ಮಂಗಳವಾರ, ಜನವರಿ 28, 2020
29 °C
ಹಲವು ವೈವಿಧ್ಯಗಳ ಅನಾವರಣ ಮಾಡಿದ ‘ಗ್ರಾಮೀಣ ಉತ್ಸವ’ l ಕಲಾತಂಡಗಳ ರಂಜನೆ

ಹಳ್ಳಿ ಸೊಗಡಿಗೆ ಬೆರಗಾದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಗಡೆ ಆಟ, ಮಲ್ಲಕಂಬ, ಮಡಕೆ ಒಡೆಯುವ ಸ್ಪರ್ಧೆ, ಭತ್ತ ಕುಟ್ಟುವುದು, ರಾಗಿ ಬೀಸುವಿಕೆ, ಹೂವು ಕಟ್ಟುವುದು... ಹೀಗೆ ಗ್ರಾಮೀಣ ಪ್ರದೇಶದ ಹಲವು ವೈವಿಧ್ಯಗಳಿಗೆ ನಗರದ ಜನತೆ ಮನಸೋತರು. 

ಸೇಂಟ್‌ ಜೋಸೆಫ್‌ ಬಾಲಕರ ಪ್ರೌಢಶಾಲೆ ಶುಕ್ರವಾರ ಆಯೋಜಿಸಿದ್ದ ‘ಗ್ರಾಮೀಣ ಉತ್ಸವ’ಕ್ಕೆ ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು. ಮಕ್ಕಳು, ಮಹಿಳೆಯರು, ವೃದ್ಧರೂ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಉತ್ಸವದಲ್ಲಿ ವಿವಿಧ ಕಲಾತಂಡಗಳು ನೆರೆದಿದ್ದವರನ್ನು ರಂಜಿಸಿತು. ಡೊಳ್ಳು ಕುಣಿತ, ಕಂಸಾಳೆ, ಪಟ ಕುಣಿತ, ಹುಲಿ ವೇಷ, ಕೀಲು ಕುದುರೆ ಸೇರಿದಂತೆ ವಿವಿಧ ಕಲಾ ತಂಡಗಳು ನರ್ತಿಸುವ ಮೂಲಕ ಜನಪದ ಸೊಗಡನ್ನೂ ಪರಿಚಯಿಸಿದವು. ಹಸುವಿನ ಹಾಲು ಕರೆಯುವುದನ್ನೂ ತಿಳಿಸಿಕೊಡಲಾಯಿತು. ಮಕ್ಕಳು ಕೂಡ ಕಲಾವಿದರೊಂದಿಗೆ ಕುಣಿದು, ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.


ಹುಲಿ ವೇಷದ ಕಲಾವಿದರೊಂದಿಗೆ ಮಕ್ಕಳು- ಪ್ರಜಾವಾಣಿ ಚಿತ್ರ

ಆಟದಲ್ಲಿ ತಲ್ಲೀನರಾದ ಮಕ್ಕಳು: ಮರೆಯಾಗುತ್ತಿರುವ ಗ್ರಾಮೀಣ ಆಟಗಳನ್ನು ತಿಳಿಸಿಕೊಡಲೆಂದೇ ಪ್ರತ್ಯೇಕ ಮಳಿಗೆಗಳಿದ್ದವು. ಆಟ ಆಡುವ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನವನ್ನೂ ನೀಡಲಾಯಿತು. ಗೋಲಿ, ಗಿಲ್ಲಿ ದಾಂಡು, ಕುಂಟೆಬಿಲ್ಲೆ, ಲಗೋರಿ, ಮಡಕೆ ಒಡೆಯುವ ಆಟಗಳನ್ನು ಮಕ್ಕಳು ಆಡಿದರು. ಎತ್ತಿನಗಾಡಿಯಲ್ಲಿ ಸುತ್ತುವ ಮೂಲಕ ಮಕ್ಕಳು ಸಂಭ್ರಮಿಸಿದರು. 

ಕಲ್ಲಿನಿಂದ ರಾಗಿ ಬೀಸುವುದು, ಕಡಗೋಲಿನಲ್ಲಿ ಮಜ್ಜಿಗೆ ಕಡೆಯುವುದು ಹಾಗೂ ಭತ್ತ ಕುಟ್ಟುವುದನ್ನು ಮಹಿಳೆಯರಿಗೆ ಕಲಿಸಿಕೊಡಲಾಯಿತು. ಹುಲ್ಲಿನಿಂದಲೇ ಗುಡಿಸಲಿನ ಮಾದರಿಯಲ್ಲಿ ನಿರ್ಮಿಸಿದ್ದ ಚಿಕ್ಕ ಚಿಕ್ಕ ಮಳಿಗೆಗಳು ಕೂಡ ಹಳ್ಳಿಯ ಸೊಗಡನ್ನು ಕಣ್ಮುಂದೆ ತಂದವು. ಶಾಸಕ ಎನ್‌.ಎ. ಹ್ಯಾರಿಸ್, ಜೆಸ್ಯೂಯಿಟ್ ಸಂಸ್ಥೆಯ ಬ್ರೈಯನ್ ಪೆರೈರಾ, ಪ್ರೌಢಶಾಲೆ ಪ್ರಾಂಶುಪಾಲ ಸುನೀಲ್ ಫೆರ್ನಾಂಡಿಸ್ ಇದ್ದರು.

ವಿವಿಧ ಖಾದ್ಯ ಸವಿದ ಜನತೆ

ಬಗೆಬಗೆಯ ಖಾದ್ಯಗಳು ಉತ್ಸವಕ್ಕೆ ಬಂದವರ ಹಸಿವನ್ನು ನೀಗಿಸಿತು. ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ನಾಡಿನ ವಿವಿಧ ಭಾಗದ ತಿನಿಸುಗಳಿದ್ದವು. ರಾತ್ರಿಯವರೆಗೂ ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಜನತೆ, ಹಳ್ಳಿ ಶೈಲಿಯ ಊಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತಿದೆ. ಗ್ರಾಮೀಣ ಸಂಸ್ಕೃತಿ ಹಾಗೂ ಅಲ್ಲಿನ ವೈವಿಧ್ಯದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲು ಇಂತಹ ಉತ್ಸವ ನಡೆಯಬೇಕು.

- ಲಕ್ಷ್ಮಿ, ಬಸವನಗುಡಿ


ಹುಲಿ ವೇಷದ ಕಲಾವಿದರ ಕಂಡು ಹೆದರಿದ ಮಗು- ಪ್ರಜಾವಾಣಿ ಚಿತ್ರ

 

ಪ್ರತಿಕ್ರಿಯಿಸಿ (+)