ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ಪಿಆರ್‌ಆರ್‌’ ಯೋಜನೆ ಟೆಂಡರ್‌ ರದ್ದು

ಹೊಸದಾಗಿ ಕರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ
Last Updated 23 ಜೂನ್ 2022, 1:54 IST
ಅಕ್ಷರ ಗಾತ್ರ

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಯ ಟೆಂಡರ್‌ ಪ್ರಕ್ರಿಯೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರದ್ದುಪಡಿಸಿದೆ.

ಹೊಸದಾಗಿಯೇ ಟೆಂಡರ್‌ ಕರೆಯಲು ಬಿಡಿಎ ನಿರ್ಧರಿಸಿದೆ. ಭೂಸ್ವಾಧೀನ ಮತ್ತು‌ ವಾಹನಗಳ ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳ ಅಗತ್ಯವಿದೆ ಎಂದು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹೂಡಿಕೆದಾರರು ತಿಳಿಸಿದ್ದರಿಂದ ಬಿಡಿಎ ಈ ತೀರ್ಮಾನ ಕೈಗೊಂಡಿದೆ.

ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಿಡಿಎ ಕಾಯ್ದೆಯೇ ಅನ್ವಯವಾಗುತ್ತದೆ. ಹೀಗಾಗಿ, ‘ನ್ಯಾಯಯುತ ಪರಿಹಾರ ಹಕ್ಕು ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಕಾಯ್ದೆ–2013’ ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶವನ್ನು ಬಿಡಿಎ ಅಧಿಕಾರಿಗಳು ಉಲ್ಲೇಖಿಸಿದ್ದರು.

2013ರ ಕಾಯ್ದೆ ಅನ್ವಯ ಪರಿಹಾರ ನೀಡುವುದಾದರೆ ₹14 ಸಾವಿರ ಕೋಟಿ ಪಾವತಿಸಬೇಕಾಗುತ್ತದೆ ಎಂದು ಬಿಡಿಎ ಕಳೆದ ವರ್ಷ ಅಂದಾಜಿಸಿತ್ತು.

ತುಮಕೂರು ರಸ್ತೆಯಿಂದ ಹೊಸೂರು ರಸ್ತೆ ಸಂಪರ್ಕಕ್ಕೆ ಪಿಆರ್‌ಆರ್‌ ನಿರ್ಮಿಸಲಾಗುತ್ತಿದೆ. ಸುಮಾರು 74 ಕಿ.ಮೀ ಉದ್ದದ ಹಾಗೂ ಎಂಟು ಪಥಗಳ ಪಿಆರ್‌ಆರ್‌ ಸರ್ವಿಸ್‌ ರಸ್ತೆಗಳನ್ನೂ ಒಳಗೊಳ್ಳಲಿದೆ. 100 ಮೀ. ಅಗಲದ ರಸ್ತೆ ಹಾಗೂ ಸೇತುವೆಗಳು, ಮೇಲ್ಸೇತುವೆಗಳು, ರೈಲ್ವೆ ಕೆಳ ಸೇತುವೆಗಳು, ರೈಲ್ವೆ ಮೇಲ್ಸೇತುವೆಗಳು ಈ ಯೋಜನೆ ಅಡಿಯಲ್ಲಿ ನಿರ್ಮಾಣವಾಗಲಿವೆ. ಈ ಯೋಜನೆಗೆ 2,560 ಎಕರೆ ಜಮೀನು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಟೆಂಡರ್‌ ಅನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಅನುಮೋದನೆ ನೀಡಿದ ಬಳಿಕ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಟೆಂಡರ್‌ನಲ್ಲಿ ಎರಡು ವಿದೇಶಿ ಕಂಪನಿಗಳು ಸೇರಿದಂತೆ ಎಂಟು ಕಂಪನಿಗಳು ಭಾಗವಹಿಸಲು ಆಸಕ್ತಿ ತೋರಿದ್ದವು. ಭಾರತದ ನಾಗರ್ಜುನ್‌, ಐಆರ್‌ಬಿ, ಅದಾನಿ, ಎಲ್‌ ಆ್ಯಂಡ್‌ ಟಿ ಸೇರಿದಂತೆ ಆರು ಕಂಪನಿಗಳು ಆಸಕ್ತಿ ವಹಿಸಿದ್ದವು. ಈ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಹೆಚ್ಚು ಸಮಯಾವಕಾಶವನ್ನು ಕೋರಿವೆ ಎಂದು ತಿಳಿಸಿದ್ದಾರೆ.

‘ಅಧ್ಯಯನಕ್ಕೆ ಹೆಚ್ಚು ಸಮಯಾವಕಾಶ ಅಗತ್ಯವಿದೆ’

‘ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಕಂಪನಿಗಳು ಹೆಚ್ಚಿನ ಸಮಯಾವಕಾಶ ಕೋರಿವೆ’ ಎಂದು ಬಿಡಿಎ ಆಯುಕ್ತ ರಾಜೇಶ್‌ ಗೌಡ ತಿಳಿಸಿದ್ದಾರೆ.

‘ಈ ಯೋಜನೆಗಾಗಿ ಕರೆಯಲಾ ಗಿದ್ದ ಟೆಂಡರ್‌ನಲ್ಲಿ ಭಾಗವಹಿಸಲು ಮೊದಲು ಒಂದು ತಿಂಗಳು ಕಾಲಾ ವಕಾಶ ನೀಡಲಾಗಿತ್ತು. ನಂತರ 3 ವಾರಗಳ ಸಮಯ ನೀಡಲಾಯಿತು. ಈ ಅವಧಿಯಲ್ಲಿ ಬಿಡ್‌ಗಳು ಬಂದಿಲ್ಲ. ಪ್ರಿ–ಬಿಡ್‌ನಲ್ಲಿ 8 ಕಂಪನಿಗಳು ಭಾಗ ವಹಿಸಿದ್ದವು. ಬಹುತೇಕ ಕಂಪನಿ ಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಾಗಿದೆ. ಮುಖ್ಯವಾಗಿ ಟ್ರಾಫಿಕ್‌ ಅಧ್ಯಯನ ಮಾಡಬೇಕಾಗಿದ್ದು, 45 ದಿನಗಳು ಬೇಕಾಗಿದೆ. ಸರ್ಕಾರದ ಅನುಮೋದನೆ ಪಡೆದು ಮತ್ತೊಮ್ಮೆ ಹೊಸದಾಗಿ ಇನ್ನೊಂದು ತಿಂಗಳಲ್ಲಿ ಟೆಂಡರ್‌ ಕರೆಯಲಾಗುವುದು’ ಎಂದರು.


ಭೂಸ್ವಾಧೀನದಲ್ಲಿ ಅಕ್ರಮ: ಎಎಪಿ

ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಯ ಟೆಂಡರ್‌ ಪ್ರಕ್ರಿಯೆ ರದ್ದುಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಆಮ್‌ ಆದ್ಮಿ ಪಾರ್ಟಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದೆ.

‘ತುಮಕೂರು ಹಾಗೂ ಹೊಸೂರು ರಸ್ತೆ ಸಂಪರ್ಕ ಕಲ್ಪಿಸುವ 74 ಕಿ.ಮೀ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣದಿಂದ ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಸಾಧ್ಯ. ಇದಕ್ಕೆ ಸರ್ಕಾರ 2,560 ಎಕರೆ ಜಮೀನು ಸರ್ಕಾರ ಭೂಸ್ವಾಧೀನ ಮಾಡಬೇಕಿದೆ. 15 ವರ್ಷಗಳಲ್ಲಿ ಕೇವಲ 1,180 ಎಕರೆ ಭೂಮಿ ಮಾತ್ರ ನೋಟಿಫೈ ಮಾಡಲು ಸಾಧ್ಯವಾಗಿದೆ’ ಎಂದು ಎಎಪಿ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಳೆದ ಹದಿನೈದು ವರ್ಷಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಯೋಜನೆಯನ್ನು ದಂಧೆಯಾಗಿ ಮಾಡಿಕೊಂಡಿವೆ. ಆರಂಭ ದಲ್ಲಿ ರಸ್ತೆ ಅಭಿವೃದ್ಧಿಗೆ ₹3000 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿತ್ತು. ಆದರೆ, ಸದ್ಯ ₹20,000 ಕೋಟಿಗೂ ಅಧಿಕ ವೆಚ್ಚವಾಗುತ್ತದೆ. ರಿಯಲ್ ಎಸ್ಟೇಟ್‌ ತಾಳಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕುಣಿಯುತ್ತಿದೆ’ ಎಂದು ಆರೋಪಿಸಿದರು. ‘ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಾಲೀಕರಿಗೆ ಪರಿಹಾರ ನೀಡುವಂತ ನಿಯಮಾವಳಿ ರೂಪಿಸಬೇಕೆಂದು ರಾಜ್ಯ ಮುಖ್ಯಕಾರ್ಯದರ್ಶಿಗೆ ಬಿಡಿಎ ಪತ್ರ ಬರೆದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಸರ್ಕಾರ ಮಾರುಕಟ್ಟೆ ಬೆಲೆ ನೀಡಲು ಮೀನಮೇಷ ಎಣಿಸುತ್ತಿದೆ. ಗುತ್ತಿಗೆ ಪಡೆಯುವ ಉದ್ಯಮಿಗಳಿಂದ ಸರ್ಕಾರ ಕಮಿಷನ್ ಪಡೆಯುವುದೇ ಸರ್ಕಾರ ಉದ್ದೇಶ. ಸರ್ಕಾರ ಕೂಡಲೇ ರೈತರಿಗೆ ಉತ್ತಮ ಪಾವತಿಸಬೇಕು. ಇಲ್ಲದಿದ್ದರೆ ಎಎಪಿ ಹೋರಾಡಲಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT