ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು: ಒ.ಸಿ. ಇಲ್ಲದೆಯೂ ವಿದ್ಯುತ್‌, ನೀರಿನ ಕಾಯಂ ಸಂಪರ್ಕ?

ಒ.ಸಿ ಇಲ್ಲದ ಕಾರಣಕ್ಕೆ 3000ಕ್ಕೂ ಹೆಚ್ಚು ಕಟ್ಟಡಗಳಿಗೆ ಸಿಕ್ಕಿಲ್ಲ ಕಾಯಂ ವಿದ್ಯುತ್‌ ಸಂಪರ್ಕ l ನಿಯಮ ಸಡಿಲಿಸುವಂತೆ ಸರ್ಕಾರದ ಮೇಲೆ ಒತ್ತಡ
Last Updated 31 ಜನವರಿ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಜೂರಾದ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಪರಿಪಾಠ ಅವ್ಯಾಹತವಾಗಿರುವುದು ಗುಟ್ಟಿನ ವಿಚಾರವೇನಲ್ಲ. ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲೆಂದೇ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯದ ಕಟ್ಟಡಗಳಿಗೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ಕಾಯಂ ಸಂಪರ್ಕ ನೀಡುವುದನ್ನು 2017ರ ಡಿಸೆಂಬರ್‌ನಿಂದ ಸ್ಥಗಿತಗೊಳಿಸಲಾಗಿದೆ. ಈ ನಿಯಮ ಸಡಿಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.

ಸ್ವಾಧೀನಾನುಭವ ಪ್ರಮಾಣಪತ್ರ ಮತ್ತು ವಿದ್ಯುತ್‌ ಸಂಪರ್ಕ ಪಡೆಯುವುದರ ನಡುವೆ ಸಂಬಂಧ ಕಲ್ಪಿಸಬಾರದು ಎಂದು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಕಟ್ಟಡಗಳ ಮಾಲೀಕರು ಒತ್ತಾಯಿಸಿದ್ದಾರೆ. ಇದರ ಸಾಧ್ಯಾಸಾಧ್ಯತೆ ಪರಿಶೀಲಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಸಭೆ ಜ.24ರಂದು ನಡೆದಿದೆ. ಬಿಬಿಎಂಪಿ, ಬೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳು ವಿಭಿನ್ನ ಅಭಿಪ್ರಾಯ ನೀಡಿದ್ದಾರೆ.

ನಗರದಲ್ಲಿ ಕಠಿಣ ನಿಯಮಗಳ ಹೊರತಾಗಿಯೂ ಕಟ್ಟಡಗಳನ್ನು ಬೇಕಾಬಿಟ್ಟಿ ನಿರ್ಮಿಸಲಾಗುತ್ತಿದೆ. ಒ.ಸಿ ಇಲ್ಲದ ಕಟ್ಟಡಕ್ಕೂ ವಿದ್ಯುತ್‌ ಹಾಗೂ ಕುಡಿಯುವ ನೀರಿನ ಕಾಯಂ ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸಿದರೆ, ಉಲ್ಲಂಘನೆಗಳು ಮತ್ತಷ್ಟು ಹೆಚ್ಚಲಿವೆ. ಈ ಆತ್ಮಘಾತುಕ ನಿರ್ಧಾರವು ಭವಿಷ್ಯದಲ್ಲಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಲಿದೆ ಎಂದು ಎಚ್ಚರಿಸುತ್ತಾರೆ ನಗರ ಯೋಜನಾ ತಜ್ಞರು.

ಮಂಜೂರಾತಿ ಪಡೆದ ಯೋಜನೆಗೆ ವ್ಯತಿರಿಕ್ತವಾಗಿ ಕಟ್ಟಡ ಕಟ್ಟಿದವರೊಬ್ಬರು ಆ ಕಟ್ಟಡಕ್ಕೆ ನೀರು ಮತ್ತು ವಿದ್ಯುತ್‌ ಸಂಪರ್ಕ ನೀಡಿದ್ದನ್ನೇ ಮುಂದಿಟ್ಟುಕೊಂಡು ಸ್ವಾಧೀನಾನುಭವ ಪತ್ರ ನೀಡುವಂತೆ ಬಿಬಿಎಂಪಿಗೆ ಸೂಚಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.ಈ ಅರ್ಜಿಯ ವಿಲೇವಾರಿ ಸಂದರ್ಭದಲ್ಲಿ ಹೈಕೋರ್ಟ್‌ ಒ.ಸಿ ಹೊಂದಿರದ ಕಟ್ಟಡಗಳಿಗೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬಾರದು ಎಂದು ಆದೇಶ ಮಾಡಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಬಿಬಿಎಂಪಿ ಆಯುಕ್ತರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದು, ‘ಒ.ಸಿ ಪಡೆಯದ ಕಟ್ಟಡಕ್ಕೆ ಕಾಯಂ ವಿದ್ಯುತ್‌ ಸಂಪರ್ಕ ಕಲ್ಪಿಸಬಾರದು’ ಎಂದು ಒತ್ತಾಯಿಸಿದ್ದರು. ಯಾವೆಲ್ಲ ಕಟ್ಟಡಗಳ ಮಾಲೀಕರು ಒ.ಸಿ ಹಾಜರುಪಡಿಸಿಲ್ಲವೋ ಅಂಥಹವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆಯೂ ಒತ್ತಾಯಿಸಿದ್ದರು.

ನಿರ್ಮಾಣ ಹಂತದ ಕಟ್ಟಡಕ್ಕೆ ಪ್ರತಿ ಯೂನಿಟ್‌ಗೆ ಮಾಮೂಲಿಗಿಂತ ಹೆಚ್ಚು ದರ ನಿಗದಿಪಡಿಸಿ, ತಾತ್ಕಾಲಿಕ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಅದನ್ನು ಕಾಯಂ ಸಂಪರ್ಕವನ್ನಾಗಿ ಪರಿವರ್ತಿಸಬಹುದು. ಆದರೆ, ಕಾಯಂ ಸಂಪರ್ಕ ಪಡೆಯಲು ಕಟ್ಟಡದ ಒ.ಸಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2017ರ ಡಿ. 27ರಂದು ಅಧಿಸೂಚನೆ ಹೊರಡಿಸಿತ್ತು.

ಆದರೆ, ಈ ನಿಯಮಕ್ಕೆ ಬೆಸ್ಕಾಂ ಕೂಡ ತಕರಾರು ತೆಗೆದಿದೆ. ಕಟ್ಟಡ ನಿಯಮ ಉಲ್ಲಂಘನೆ ಆಗದಂತೆ ನಿರ್ಮಾಣ ಹಂತದಲ್ಲೇ ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು, ಪೂರ್ಣಗೊಂಡ ಕಟ್ಟಡಕ್ಕೆ ಕಾಯಂ ವಿದ್ಯುತ್‌ ಸಂಪರ್ಕ ಕಲ್ಪಿಸದಂತೆ ನಿರ್ಬಂಧಿಸುವುದು ಸರಿಯಲ್ಲ. ಈ ನಿರ್ಬಂಧದಿಂದಾಗಿಯೇ 800 ಚದರ ಮೀಟರ್‌ ಮತ್ತು ಅದಕ್ಕಿಂತ ಜಾಸ್ತಿ ವಿಸ್ತೀರ್ಣದ ಕಟ್ಟಡಗಳಿಗೆ ಹಾಗೂ 35 ಕೆ.ವಿ.ಗಿಂತ ಜಾಸ್ತಿ ವಿದ್ಯುತ್‌ ಬೇಡಿಕೆ ಇರುವವರಿಗೆ ಸೇವೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದು ಬೆಸ್ಕಾಂ ವಾದ.

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2016ರಲ್ಲಿ ಜಾರಿಗೆ ತಂದಿರುವ ಕಟ್ಟಡಗಳಮಾದರಿ ಉಪವಿಧಿಗಳ ಪ್ರಕಾರ ಕಟ್ಟಡಗಳನ್ನು ಬಳಸಲು ಆರಂಭಿಸುವ ಮುನ್ನ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯಿಂದ ಒ.ಸಿ ಪಡೆಯುವುದು ಕಡ್ಡಾಯ.2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248 ಪ್ರಕಾರ ಕಟ್ಟಡ ನಿಯಮಗಳ ಉಲ್ಲಂಘನೆ ತಡೆಯುವ ಹೊಣೆ ಬಿಬಿಎಂಪಿಯದು.

ಮಂಜೂರಾದ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ (ಉಲ್ಲಂಘನೆ ನಿಗದಿತ ಮಿತಿಗಿಂತ ಜಾಸ್ತಿ ಇದ್ದರೆ) ಒ.ಸಿ ನೀಡಲು ಸಾಧ್ಯವಿಲ್ಲ. ಅಂತಹ ಕಟ್ಟಡಗಳಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕವನ್ನೇ ಮುಂದುವರಿಸಬೇಕಾಗುತ್ತದೆ. ಅದಕ್ಕೆ ದುಬಾರಿ ವಿದ್ಯುತ್‌ ಶುಲ್ಕ ತೆರಬೇಕಾಗುವುದರಿಂದ ಕಟ್ಟಡ ಮಾಲೀಕರು ಮಂಜೂರಾದ ಯೋಜನೆಯನ್ನು ಉಲ್ಲಂಘನೆ ಮಾಡಿದ ತಪ್ಪಿಗೆ ಶಾಶ್ವತವಾಗಿ ಹೊರೆ ಹೊರಬೇಕಾಗುತ್ತದೆ. ಹಾಗಾಗಿ ಕೆಇಆರ್‌ಸಿ ಅಧಿಸೂಚನೆ ಬಳಿಕ, ಸ್ವತ್ತಿನ ಮಾಲೀಕರು ಮಂಜೂರಾತಿ ಪಡೆದ ಯೋಜನೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸುವ ಪರಿಪಾಠಕ್ಕೆ ತಕ್ಕಮಟ್ಟಿನ ಕಡಿವಾಣ ಬಿದ್ದಿದೆ. ಈಗ ಈ ನಿಯಮ ಸಡಿಲಿಸಿದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುವುದು ಬಿಬಿಎಂಪಿ. ಆದರೂ, ಈ ಪ್ರಸ್ತಾವಕ್ಕೆ ಬಿಬಿಎಂಪಿ ಗಟ್ಟಿಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸಿಲ್ಲ.

‘ಕಟ್ಟಡ ಮಾಲೀಕರು ಮಂಜೂರಾತಿ ಪಡೆದ ಯೋಜನೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಿಸಿದರೆ ಅದಕ್ಕೆ ಶಾಶ್ವತವಾಗಿ ಬೆಲೆ ತೆರುವಂತೆ ಮಾಡುವ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೂ ಕಾಯಂ ವಿದ್ಯುತ್‌ ಸಂಪರ್ಕ ನೀಡಲು ಶುರು ಮಾಡಿದರೆ, ನಿಯಮ ಉಲ್ಲಂಘಿಸುವ ಪರಿಪಾಠಕ್ಕೆ ಕಡಿವಾಣ ಹಾಕುವುದು ಮತ್ತಷ್ಟು ದುಸ್ತರ ವಾಗಲಿದೆ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ನೆರೆ ರಾಜ್ಯಗಳಲ್ಲಿ ಯಾವ ನಿಯಮವಿದೆ

ಆಂಧ್ರಪ್ರದೇಶದಲ್ಲಿ 2012ರ ಕಟ್ಟಡ ನಿಮಯಗಳು ಹಾಗೂ ತಮಿಳುನಾಡಿನಲ್ಲಿ 2019ರ ಅಭಿವೃದ್ಧಿ ಮತ್ತು ಕಟ್ಟಡಗಳ ಜಂಟಿ ನಿಯಮಗಳ ಪ್ರಕಾರ ಕಟ್ಟಡ ಪೂರ್ಣಗೊಂಡ ಬಳಿಕ ಅದನ್ನು ಬಳಸುವ ಮುನ್ನ ಪರಿಪೂರ್ಣತಾ ಪ್ರಮಾಣಪತ್ರ/ ಒ.ಸಿ ಪಡೆಯುವುದು ಕಡ್ಡಾಯ. ತಮಿಳುನಾಡಿನಲ್ಲಿ ಒ.ಸಿ ಹಾಜರುಪಡಿಸಿದ ಬಳಿಕವಷ್ಟೇ ಕಟ್ಟಡಕ್ಕೆ ಶಾಶ್ವತ ವಿದ್ಯುತ್‌ ಸಂಪರ್ಕ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಒ.ಸಿ ಹೊಂದಿಲ್ಲದ ಕಟ್ಟಡಗಳಿಗೆ ವಿದ್ಯುತ್‌, ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸುವುದಿಲ್ಲ. ತಾತ್ಕಾಲಿಕ ಸಂಪರ್ಕಕ್ಕೆ ಮಾಮೂಲಿ ದರಕ್ಕಿಂತ ಮೂರು ಪಟ್ಟು ಅಧಿಕ ಶುಲ್ಕ ವಿಧಿಸಲಾಗುತ್ತದೆ ಎಂದು ಬಿಬಿಎಂಪಿಯ ಉನ್ನತ ಮೂಲಗಳು ತಿಳಿಸಿವೆ.

***

‘ಬಿಬಿಎಂಪಿ ಯಾವುದೇ ನಿಲುವು ತೆಗೆದುಕೊಂಡಿಲ್ಲ’

ಒ.ಸಿ. ಕೊಟ್ಟನಂತರವೇ ಕಾಯಂ ವಿದ್ಯುತ್‌ ಸಂಪರ್ಕ ನೀಡಬೇಕು ಎಂದು ಕೆಇಆರ್‌ಸಿ ಆದೇಶ ಮಾಡಿದೆ. ಅದನ್ನು ಸಡಿಲ ಮಾಡಿ, ಒ.ಸಿ. ಇಲ್ಲದ ಕಟ್ಟಡಗಳಿಗೂ ಕಾಯಂ ವಿದ್ಯುತ್‌ ಸಂಪರ್ಕ ನೀಡಲು ಅನುವು ಮಾಡಿಕೊಡಬೇಕು ಎಂಬುದು ಬೆಸ್ಕಾಂ ಅಭಿಪ್ರಾಯ. ಬಿಬಿಎಂಪಿ ಮಟ್ಟದಲ್ಲಿ ಯಾವುದೇ ನಿಲುವು ತಳೆದಿಲ್ಲ. ಜನರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ

ಗೌರವ ಗುಪ್ತ,ಮುಖ್ಯ ಆಯುಕ್ತ, ಬಿಬಿಎಂಪಿ

***

‘ಬೇರೆಲ್ಲೂ ಇಂತಹ ನಿಬಂಧನೆಗಳಿಲ್ಲ’

‘ಕೆಇಆರ್‌ಸಿ ನಿರ್ದೇಶನದ ಪ್ರಕಾರ ಒ.ಸಿ ಇರುವ ಕಟ್ಟಡಗಳಿಗಷ್ಟೇ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. 2017ರ ಡಿಸೆಂಬರ್‌ ಬಳಿಕ ವಿದ್ಯುತ್‌ ಪೂರೈಕೆಯ ಷರತ್ತಿನಲ್ಲೇ ಇದನ್ನು ಅಳವಡಿಸಲಾಗಿದೆ. ಅಲ್ಲಿಯವರೆಗೆ ಈ ನಿಬಂಧನೆ ಜಾರಿಯಲ್ಲಿರಲಿಲ್ಲ. ಈ ನಿಬಂಧನೆಯಿಂದಾಗಿ ಬೆಸ್ಕಾಂನ 3 ಸಾವಿರಕ್ಕೂ ಅಧಿಕ ಗ್ರಾಹಕರು ತಾತ್ಕಾಲಿಕ ಸಂಪರ್ಕವನ್ನೇ ಮುಂದುವರಿಸಬೇಕಾಗಿ ಬಂದಿದೆ. ಹೈ ಟೆಕ್ಷನ್‌ ಹಾಗೂ ಲೋ ಟೆನ್ಷನ್‌ ವಿದ್ಯುತ್‌ ಸಂಪರ್ಕಗಳೆರಡರ ಮೇಲೂ ಇದು ಪರಿಣಾಮ ಬೀರುತ್ತಿದೆ. ಬೇರೆ ಯಾವುದೇ ರಾಜ್ಯಗಳಲ್ಲಿ ಈ ರೀತಿ ನಿಯಮಗಳಿಲ್ಲ’

ರಾಜೇಂದ್ರ ಚೋಳನ್‌,ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ

***

‘ವಿದ್ಯುತ್‌ ಸಂಪರ್ಕವೂ ಮೂಲಭೂತ ಹಕ್ಕು’

ಜನರಿಗೆ ವಿದ್ಯುತ್‌ ಅಗತ್ಯ ಸೌಕರ್ಯ. ಅದು ಅವರ ಮೂಲಭೂತ ಹಕ್ಕು ಕೂಡಾ. ಕಟ್ಟಡ ನಿಯಮ ಉಲ್ಲಂಘನೆ ಸಮಸ್ಯೆಯ ಮೂಲವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಗರದ ಜನಸಂಖ್ಯೆ ಪ್ರತಿ ವರ್ಷ ಅಂದಾಜು 3 ಲಕ್ಷದಷ್ಟು ಹೆಚ್ಚಳವಾಗುತ್ತಿದೆ. ಆದರೆ, 75 ಸಾವಿರ ಜನರಿಗಷ್ಟೇ ವಸತಿ ಸಿಗುತ್ತಿದೆ. ಇನ್ನುಳಿದವರು ಕಾನೂನು ಬದ್ಧವಾಗಿ ವಸತಿ ಹೊಂದಲು ಸಾಧ್ಯವಾಗದ ಕಾರಣ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಪ್ರಮೇಯ ಸೃಷ್ಟಿಯಾಗುತ್ತಿದೆ. ಈ ಸಮಸ್ಯೆ ಅರ್ಥ ಮಾಡಿಕೊಂಡು, ಜನ ಕಾನೂನುಬದ್ಧವಾಗಿ ವಸತಿ ಹೊಂದುವುದಕ್ಕೆ ಪೂರಕ ವಾತಾವರಣ ಕಲ್ಪಿಸುವ ಮೂಲಕ ಉಲ್ಲಂಘನೆ ತಡೆಯಬೇಕೇ ಹೊರತು ವಿದ್ಯುತ್‌ ಪಡೆಯುವ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ಅಲ್ಲ’

ಅಶ್ವಿನ್ ಮಹೇಶ್‌,ನಗರ ಯೋಜನಾ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT