ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಕಾರ್ಪೊರೇಟರ್‌ ಎನ್‌.ಆರ್‌.ರಮೇಶ್‌ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ

ಬೆದರಿಕೆ, ವೈಯಕ್ತಿಕ ತೇಜೋವಧೆ, ಕರ್ತವ್ಯಕ್ಕೆ ಅಡ್ಡಿ ಬಗ್ಗೆ ದೂರು ದಾಖಲಿಸಲು ಅನುಮತಿ ಕೋರಿದ್ದ ಬಿ.ಎಸ್‌.ಪ್ರಹ್ಲಾದ್‌
Last Updated 28 ಜನವರಿ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಕಾರ್ಪೊರೇಟರ್‌ಎನ್.ಆರ್‌.ರಮೇಶ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರಿಗೆ ಬಿಬಿಎಂಪಿ ಅನುಮತಿ ನೀಡಿದೆ.

ದೂರಿಗೆ ಸಂಬಂಧಿಸಿದ ವಿಷಯವು ಎಂಜಿನಿಯರ್‌ ಅವರ ವೈಯಕ್ತಿಕ ವಿಚಾರವಾಗಿದ್ದು, ಇದರಲ್ಲಿ ಪಾಲಿಕೆಯ ಹಸ್ತಕ್ಷೇಪವಿಲ್ಲ. ದೂರು ನಿರ್ವಹಣೆಗೆ ತಗಲುವ ವೆಚ್ಚವನ್ನು ದೂರುದಾರರೇ ಸಂಪೂರ್ಣವಾಗಿ ಭರಿಸಬೇಕು ಎಂದು ಪಾಲಿಕೆ ಷರತ್ತು ವಿಧಿಸಿದೆ. ಈ ಪ್ರಕರಣಕ್ಕೆ ಪಾಲಿಕೆಯು ಯಾವುದೇ ರೀತಿಯಲ್ಲೂ ಜವಾಬ್ದಾರ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಎನ್‌.ಆರ್‌.ರಮೇಶ್‌ ಅವರು ಅಡ್ಡಿ ಪಡಿಸಿದ್ದಾರೆ. ಬೆದರಿಕೆ ಒಡ್ಡಿದ್ದಾರೆ, ಮಾನಸಿಕ ಒತ್ತಡ ಹೇರಿದ್ದಾರೆ ಹಾಗೂ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಅವರ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು‘ ಎಂದು ಪ್ರಹ್ಲಾದ್‌ ಅವರು ಬಿಬಿಎಂಪಿ ಆಡಳಿತ ವಿಭಾಗವನ್ನು ಕೋರಿದ್ದರು.

‘ಯಾವುದೇ ವ್ಯಕ್ತಿಯಿಂದ ಕರ್ತವ್ಯಕ್ಕೆ ಅಡ್ಡಿ ಉಂಟಾದರೆ ಅಥವಾ ಯಾರಾದರೂ ತಮ್ಮ ತೇಜೋವಧೆ ಮಾಡಿದರೆ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಸರ್ಕಾರಿ ನೌಕರರು ಮೇಲಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಪ್ರಕಾರ, ರಮೇಶ್‌ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಪ್ರಹ್ಲಾದ್‌ ಕೋರಿದ್ದರು. ಇದು ಅವರಿಬ್ಬರ ನಡುವಿನ ವೈಯಕ್ತಿಕ ಸಮಸ್ಯೆ. ಇದರಲ್ಲಿ ಪಾಲಿಕೆಯ ಪಾತ್ರ ಏನೂ ಇಲ್ಲ. ಹಾಗಾಗಿ ಅನುಮತಿ ನೀಡಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಮ್ಮ ವಿರುದ್ಧ ದೂರು ನೀಡಲು ಬಿಬಿಎಂಪಿ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ರಮೇಶ್‌, ‘ನನಗೆ ಹಾಗೂ ಪ್ರಹ್ಹಾದ್‌ ನಡುವೆ ವೈಯಕ್ತಿಕ ವಿಚಾರಗಳೇನೂ ಇಲ್ಲ. ನಾನು ಮಾನಸಿಕ ಕಿರುಕುಳ ನೀಡಿದ್ದೇನೆ ಎಂದು ಆರೋಪಿಸಿದ್ದಾರೆ. ನಾನಂತೂ ಐದೂವರೆ ವರ್ಷದಿಂದ ಅವರನ್ನು ಭೇಟಿಯಾಗಿಲ್ಲ’ ಎಂದರು.

ರಮೇಶ್‌ ವಿರುದ್ಧ ದೂರು ದಾಖಲಿಸಲು ಬಿಬಿಎಂಪಿಯಿಂದ ಅನುಮತಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಲು ಪ್ರಹ್ಲಾದ್‌ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT