ಗುರುವಾರ , ಡಿಸೆಂಬರ್ 3, 2020
20 °C
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಆದೇಶ

ಕೊಳವೆ ಬಾವಿಗಾಗಿ ಅನುಮತಿ ಕಡ್ಡಾಯ: ಬೆಂಗಳೂರು ಜಿಲ್ಲಾಧಿಕಾರಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಜಿಲ್ಲೆಯು ಅಂತರ್ಜಲ ಬಳಕೆಗೆ ಸಂಬಂಧಪಟ್ಟಂತೆ ‘ಅತಿಬಳಕೆ’ ಪ್ರದೇಶವೆಂದು ಘೋಷಿಸಲ್ಪಟ್ಟಿದೆ. ಹಾಗಾಗಿ ಕೈಗಾರಿಕೆ, ವಾಣಿಜ್ಯ, ವಸತಿ ಸಮುಚ್ಛಯ ಸೇರಿದಂತೆ ಯಾವುದೇ ಉದ್ದೇಶಕ್ಕೆ ಹೊಸದಾಗಿ ಕೊಳವೆ ಬಾವಿ ಕೊರೆಯುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.

‘ಈಗಾಗಲೇ ಅಂತರ್ಜಲ ಬಳಸುತ್ತಿರುವ ಕೊಳವೆ ಬಾವಿಗಳನ್ನು ಕೂಡ ನೋಂದಣಿ ಮಾಡಿಸಿ, ನಿರಾಕ್ಷೇಪಣ ಪತ್ರ ಪಡೆಯಬೇಕು. ಸಕ್ಷಮ ಪ್ರಾಧಿಕಾರಿದಿಂದ ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಸುವುದು ಹಾಗೂ ನಿರಾಕ್ಷೇಪಣ ಪತ್ರ ಪಡೆಯದೆ ಅಂತರ್ಜಲ ಬಳಸುವುದು ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ಕಾಯ್ದೆ 2011 ಮತ್ತು ನಿಯಮಾವಳಿ 2012ರ ಅನ್ವಯ ಶಿಕ್ಷಾರ್ಹ ಅಪರಾಧವಾಗಲಿದೆ’ ಎಂದು ತಿಳಿಸಿದ್ದಾರೆ.

ಮುಚ್ಚದಿದ್ದರೆ ಕ್ರಮ: ‘ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈಗಾಗಲೇ ಹಲವು ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ. ಸಾರ್ವಜನಿಕರು ತಮ್ಮ ಸ್ವಂತ ನಿವೇಶನದಲ್ಲಿ ಅಥವಾ ಕೃಷಿ ಜಮೀನುಗಳಲ್ಲಿ ಕೊರೆಸುವ ಕೊಳವೆ ಬಾವಿಗಳು ವಿಫಲವಾಗಿದ್ದಲ್ಲಿ ಕೂಡಲೇ ಮುಚ್ಚಳ ಹಾಕಿ, ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ವರದಿ ನೀಡಬೇಕಾಗುತ್ತದೆ. ಸುರಕ್ಷಿತವಾಗಿ ಮುಚ್ಚದ ಕೊಳವೆ ಬಾವಿಗಳಿಂದ ಅವ
ಘಡಗಳು ಸಂಭವಿಸಿದಲ್ಲಿ ಸಂಬಂಧಪಟ್ಟವರ ಮೇಲೆ ಕಠಿಣಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಅಥವಾ ನಿರಪೇಕ್ಷಣಾ ಪತ್ರ ‍ಪಡೆಯಲು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ನಿಗದಿತ ಶುಲ್ಕ ಹಾಗೂ ಅಗತ್ಯ ದಾಖಲಾತಿಗಳನ್ನು ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, 13ನೇ ಮಹಡಿ, ವಿಶ್ವೇಶ್ವರಯ್ಯ ದೊಡ್ಡಗೋಪುರ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು ಈ ವಿಳಾಸಕ್ಕೆ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.

ಸಂಪರ್ಕಕ್ಕೆ ದೂ.: 080 22862108

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು