ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಜಿ ತೊರೆಯುವಂತೆ ಮಾಲೀಕರ ಒತ್ತಾಯ

ಆಹಾರ ವಿತರಣೆಗೆ ಸಮಸ್ಯೆ , ಆತಂಕದಲ್ಲಿ ಪಿ.ಜಿ.ವಸತಿ ನಿವಾಸಿಗಳು
Last Updated 23 ಮಾರ್ಚ್ 2020, 3:04 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿನಗರದ ಪೇಯಿಂಗ್ ಗೆಸ್ಟ್‌(ಪಿ.ಜಿ) ವಸತಿಗಳಲ್ಲಿ ತಂಗಿರುವವರನ್ನು ಕಟ್ಟಡ ತ್ಯಜಿಸುವಂತೆ ಮಾಲೀಕರು ಬಲವಂತ ಮಾಡುತ್ತಿದ್ದಾರೆ.

ನಗರದಲ್ಲಿರುವ 4,200ಕ್ಕೂ ಹೆಚ್ಚು ಪಿಜಿಗಳಲ್ಲಿ ತಂಗಿದ್ದ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳ ಮೇಲೂ ಇದರಿಂದ ಕಂಗಾಲಾಗಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಘೋಷಣೆ ಆಗಿರುವುದರಿಂದ ಸಾರಿಗೆ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿರುವುದು ಇವರನ್ನು ಇನ್ನಷ್ಟು ಆತಂಕಿತರನ್ನಾಗಿ ಮಾಡಿದೆ.

ಸೋಂಕು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಬಹುತೇಕ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೆಚ್ಚು ಜನ ಸೇರುವೆಡೆ ಸೋಂಕು ಹರಡುವ ಸಾಧ್ಯತೆ ಇದ್ದು, ರಜೆ ಇರುವ ಕಾರಣ ಪಿ.ಜಿ ಕಟ್ಟಡಗಳಲ್ಲಿ ಉಳಿಯುವುದಕ್ಕಿಂತ ಮನೆಗಳಿಗೆ ಮರಳುವುದು ಸೂಕ್ತ ಎಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಇತ್ತೀಚೆಗೆ ಸಲಹೆ ನೀಡಿದ್ದರು. ಆದರೆ ಯಾರನ್ನೂ ಬಲವಂತವಾಗಿ ಕಳುಹಿಸಬಾರದು ಎಂದೂ ಕಟ್ಟುನಿಟ್ಟಾಗಿ ಸೂಚಿಸಿದ್ದರು.

ಇದಕ್ಕೆ ಮಾಲೀಕರು ಕಿವಿಗೊಡುತ್ತಿಲ್ಲ. ‘ನಗರದಲ್ಲಿ ಬಹುತೇಕ ದಿನಸಿ ಅಂಗಡಿಗಳನ್ನು ಮುಚ್ಚಿರುವ ಕಾರಣ, ಪಿ.ಜಿಯಲ್ಲಿರುವವರಿಗೆ ನಿತ್ಯ ಆಹಾರ ಪೂರೈಸಲು ಕಷ್ಟವಾಗುತ್ತಿದೆ. ಹಾಗಾಗಿ ನೀವು ಹೊರಡಿ’ ಎಂದು ಮಾಲೀಕರು ಒತ್ತಾ‌ಯಿಸುತ್ತಿದ್ದಾರೆ. ,

‘ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೊರೊನಾ ಭೀತಿಯ ಪರಿಸ್ಥಿತಿಯಲ್ಲಿ ಎಲ್ಲಿಗೂ ಹೋಗುವುದೂ ಸೂಕ್ತವಲ್ಲ. ಪಿ.ಜಿ ಮಾಲೀಕರು ಏಕಾಏಕಿ ಮನೆಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಈಗಾಗಲೇ ಪಿ.ಜಿಯಲ್ಲಿದ್ದ ಹಲವರು ರಜೆ ಇದ್ದ ಕಾರಣ ಊರುಗಳಿಗೆ ತೆರಳಿದ್ದಾರೆ. ಎರಡು ದಿನಗಳಿಂದ ಊಟ ಕೊಡುವುದನ್ನೂ ನಿಲ್ಲಿಸಿದ್ದಾರೆ. ಇವತ್ತು ಹೋಟೆಲ್‌ಗಳೂ ಮುಚ್ಚಿವೆ. ಹಾಗಾಗಿ ಮನೆಗೆ ಮರಳಲು ನಿರ್ಧರಿಸಿದ್ದೇನೆ’ ಎಂದು ಕೆಂಗೇರಿ ಉಪನಗರದ ಪಿ.ಜಿಯೊಂದರಲ್ಲಿ ತಂಗಿರುವ ಹಾಸನದ ಅರ್ಪಿತಾ ತಿಳಿಸಿದರು.

‘ಪಿ.ಜಿಗಳನ್ನು ಆಶ್ರಿಯಿಸಿರುವವರಿಗೆ ಒಂದು ವಾರದಿಂದ ಆಹಾರ ವಿತರಿಸಲು ಸಾಧ್ಯವಾಗುತ್ತಿಲ್ಲ. ದಿನಸಿ ಅಂಗಡಿ
ಗಳೆಲ್ಲಾ ಮುಚ್ಚಿದ್ದು, ಅಗತ್ಯ ಪ್ರಮಾಣದ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಂಡಿಲ್ಲ. ಬಲವಂತವಾಗಿ ನಾವೂ ಯಾರನ್ನೂ ಖಾಲಿ ಮಾಡಿಸಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಅವರು ಮನೆಗಳಲ್ಲಿರುವುದೇ ಸೂಕ್ತ ಎಂದು ಮನೆಗೆ ತೆರಳುವಂತೆ ಮನವಿ ಮಾಡಿ
ದ್ದೇವೆ’ ಎಂದು ಬಿಟಿಎಂ ಬಡಾವಣೆಯ ಶ್ರೀಸಾಯಿ ಪಿ.ಜಿ ಮಾಲೀಕ ಶೇಖರ್‌ ತಿಳಿಸಿದರು.

‘ಕಡ್ಡಾಯವಾಗಿ ಪಿ.ಜಿಗಳನ್ನು ಖಾಲಿ ಮಾಡುವಂತೆ ಯಾವುದೇ ಆದೇಶ ಮಾಡಿಲ್ಲ. ಆದರೆ ಕಟ್ಟಡ ತೊರೆಯುವಂತೆ ಪಿ.ಜಿ ಮಾಲೀಕರು ಯಾರ ಮೇಲೂ ಒತ್ತಡ ಹೇರಬಾರದು’ ಎಂದು ಪಾಲಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT