ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ದೈಹಿಕ ಶಿಕ್ಷಕರ ಆಗ್ರಹ, ಪ್ರತಿಭಟನೆ

Published : 29 ಆಗಸ್ಟ್ 2024, 15:25 IST
Last Updated : 29 ಆಗಸ್ಟ್ 2024, 15:25 IST
ಫಾಲೋ ಮಾಡಿ
Comments

ಬೆಂಗಳೂರು: ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಂಘದ ಗೌರವ ಅಧ್ಯಕ್ಷ ಅರುಣ್‌ ಶಹಾಪೂರ ಮಾತನಾಡಿ, ‘ಸರ್ಕಾರ 17 ವರ್ಷಗಳ ಹಿಂದೆಯೇ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರು ಎಂದು ಪರಿಗಣಿಸುವ ಆದೇಶ ಮಾಡಿದೆ. ಆದರೆ, ಶಿಕ್ಷಣ ಇಲಾಖೆ ಇದುವರೆಗೂ ಅದನ್ನು ಅನುಷ್ಠಾನಗೊಳಿಸದೇ ದೈಹಿಕ ಶಿಕ್ಷಕರಿಗೆ ಅನ್ಯಾಯ ಮಾಡುತ್ತಿದೆ. ಕೂಡಲೇ ಈ ಆದೇಶವನ್ನು ಅನುಷ್ಠಾನಗೊಳಿಸಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ದೈಹಿಕ ಶಿಕ್ಷಕರ ಪಾತ್ರ ಮುಖ್ಯ. ಆದರೆ, ರಾಜ್ಯದ ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ’ ಎಂದು ದೂರಿದರು.

ಸಂಘದ ಅಧ್ಯಕ್ಷ ಎಸ್. ಚೌಡಪ್ಪ ಮಾತನಾಡಿ, ‘ಸಮಾನ ವೇತನ, ಸಮಾನ ವಿದ್ಯಾರ್ಹತೆ ಇದ್ದರೂ ಶಾಲಾ ಶಿಕ್ಷಣ ಇಲಾಖೆಯ ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯ, ಬಡ್ತಿಗಳು ದೈಹಿಕ ಶಿಕ್ಷಕರಿಗೆ ಸಿಗುತ್ತಿಲ್ಲ. ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ದೈಹಿಕ ಶಿಕ್ಷಕರನ್ನು ನೇಮಿಸುವ ನಿಯಮ ಬದಲಿಸಬೇಕು. ಪದವಿ‍ಪೂರ್ವ ಕಾಲೇಜುಗಳಲ್ಲೂ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆ ಸೃಜಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಬಿ. ಹುಕ್ಕೇರಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಮನವಿ ಸ್ವೀಕರಿಸಿದರು. ‘ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪರಿಹಾರ ಒದಗಿಸುವ ಭರವಸೆ ನೀಡಿದರು’ ಎಂದು ಚೌಡಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT