ಬುಧವಾರ, ಏಪ್ರಿಲ್ 14, 2021
31 °C
ವಾಹನ ಚಾಲಕ, ಸಹಾಯಕರನ್ನೂ ಕಾಯಂಗೊಳಿಸಿ– ಒತ್ತಾಯ

ಸಂಬಳ ಹೆಚ್ಚಳಕ್ಕೆ ಪೌರ ಕಾರ್ಮಿಕರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸುವ ಆಟೊಟಿಪ್ಪರ್‌ಗಳ ಚಾಲಕರು ಮತ್ತು ಸಹಾಯಕರನ್ನೂ ಕಾಯಂಗೊಳಿಸಬೇಕು. ಪೌರಕಾರ್ಮಿಕರ ತಿಂಗಳ ಸಂಬಳವನ್ನು ₹ 14,040ರಿಂದ ₹ 30 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಪೌರಕಾರ್ಮಿಕರ ಸಂಘದ (ಎಐಸಿಸಿಟಿಯು) ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಪೌರಕಾರ್ಮಿಕರು ಭಾಗವಹಿಸಿದರು.

ಬಿಬಿಎಂಪಿಯು ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕಸ ಗುಡಿಸುವ ಕಾರ್ಯದಲ್ಲಿ ತೊಡಗಿದ್ದ 18 ಸಾವಿರ ಪೌರಕಾರ್ಮಿಕರನ್ನು ಎರಡು ವರ್ಷಗಳ ಹಿಂದೆ ಕಾಯಂಗೊಳಿಸಿತ್ತು. ಆದರೆ, ಆಟೊಟಿಪ್ಪರ್‌ಗಳ ಚಾಲಕರು ಹಾಗೂ ಸಹಾಯಕರು ಈಗಲೂ ಗುತ್ತಿಗೆ ಪದ್ಧತಿಯಲ್ಲಿ ಮುಂದುವರೆದಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯಂತೆ ಅವರನ್ನೂ ನೇರ ವೇತನ ಪಾವತಿ ವ್ಯವಸ್ಥೆಯ ವ್ಯಾಪ್ತಿಗೆ ತಂದು ಕಾಯಂಗೊಳಿಸಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿದರು.  

ಮಸ್ಟರಿಂಗ್‌ ಕೇಂದ್ರಗಳಲ್ಲಿ ಕೆಲವು ಪೌರಕಾರ್ಮಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾರ್ಮಿಕರಿಗೆ ಇಎಸ್‌ಐ ಹಾಗೂ ಪಿಂಚಣಿ  ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಕರ್ತವ್ಯದಲ್ಲಿರುವಾಗಲೇ ಸಾವಿಗೀಡಾದ ಪೌರಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿಯೂ ವಿಳಂಬವಾಗುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.

ಕೆಲಸದ ಸಂದರ್ಭದಲ್ಲಿ ಕುಡಿಯುವ ನೀರು, ಬಿಸಿಯೂಟ, ಶೌಚಾಲಯ, ವಿಶ್ರಾಂತಿ ವ್ಯವಸ್ಥೆ ಒದಗಿಸಬೇಕು. ಈ ಹಿಂದೆ ಉದ್ದ ಕೋಲಿನ ಪೊರಕೆ ನೀಡಲಾಗುತ್ತಿತ್ತು. ಅದರ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಸುರಕ್ಷಾ ಸಾಧನಗಳನ್ನೂ ಒದಗಿಸುತ್ತಿಲ್ಲ. ಕಸ ಸಾಗಣೆಗೆ ಬಳಸುವ ತಳ್ಳುವ ಗಾಡಿಗಳನ್ನು ಹಿಂಪಡೆಯಲಾಗಿದೆ. ಅದರ ಬದಲು ಗೋಣಿ ಚೀಲಕ್ಕೆ ಕಸ ತುಂಬುವಂತೆ ಸೂಚನೆ ನೀಡಲಾಗಿದೆ. ಇದರಿಂದ ಪೌರಕಾರ್ಮಿಕರಿಗೆ ಸಮಸ್ಯೆ ಆಗಿದೆ ಎಂದು ಪ್ರತಿಭಟನಕಾರರು ಗಮನ ಸೆಳೆದರು.

ಪೌರಕಾರ್ಮಿಕರಿಗೆ ಮಾತೃತ್ವ ರಜೆ ಸೌಲಭ್ಯ ಒದಗಿಸುತ್ತಿಲ್ಲ. ಗರ್ಭಿಣಿಯರ ಬಯೋಮೆಟ್ರಿಕ್‌ ಕಾರ್ಡ್ ಕಿತ್ತುಕೊಳ್ಳಲಾಗುತ್ತದೆ. ಪೌರಕಾರ್ಮಿಕರ ಸಂಘಟನೆಗಳಲ್ಲಿ ಸಕ್ರಿಯರಾಗಿರುವವರಿಗೂ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್‌ (ಆಡಳಿತ), ‘ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಪೌರಕಾರ್ಮಿಕರು ಕೆಲಸದ ವೇಳೆ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಇದೇ 27ರ ಒಳಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು. 

ಪೌರ ಕಾರ್ಮಿಕರ ಪ್ರಮುಖ ಬೇಡಿಕೆಗಳು

* ಎಲ್ಲ ಪೌರಕಾರ್ಮಿಕರಿಗೆ ಉಚಿತ ವಸತಿ ಕಲ್ಪಿಸಬೇಕು

* ಮಾತೃತ್ವ ರಜೆ ಸೌಲಭ್ಯ ನೀಡಬೇಕು

* ಹಬ್ಬ–ಹರಿದಿನಗಳಂದು ರಜೆ ನೀಡಬೇಕು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು