ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಸ್ಕೈವಾಕ್‌ ಕಗ್ಗಂಟು: ಸಮಸ್ಯೆ ನೂರೆಂಟು

ಬೇಡಿಕೆಯಿದ್ದರೂ ಸಿಗದ ಮನ್ನಣೆ: ಪಾದಚಾರಿಗಳ ಸ್ಥಿತಿ ಘನಘೋರ...
Published 11 ನವೆಂಬರ್ 2023, 0:30 IST
Last Updated 11 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳನ್ನು ನೋಡಲು ದೂರದ ಊರಿನಿಂದ ರಾತ್ರಿಯಿಡೀ ಬಸ್ಸಿನಲ್ಲಿ ಪ್ರಯಾಣಿಸಿ, ಬೆಳಿಗ್ಗೆ 8 ಗಂಟೆಗೆ ಗೊರಗುಂಟೆಪಾಳ್ಯದ ಜಂಕ್ಷನ್‌ನಲ್ಲಿಳಿದ 76 ವರ್ಷದ ಆ ಹಿರಿಯರು, ಸರ್ಕಲ್‌ನಲ್ಲಿದ್ದ ಸಂಚಾರ ದಟ್ಟಣೆ ನೋಡಿ ‘ಹೇಗಪ್ಪಾ ರಸ್ತೆ ದಾಟುವುದು’ ಎಂದು ಆತಂಕಕ್ಕೊಳಗಾದರು. ನುಗ್ಗಿ ಬರುತ್ತಿದ್ದ ವಾಹನಗಳ ನಡುವೆ ರಸ್ತೆ ದಾಟಲು ಪ್ರಯತ್ನಿಸುತ್ತಾ ವಾಹನಗಳ ನಡುವೆ ಸಿಲುಕಿಯೇಬಿಟ್ಟರು. ಪಕ್ಕದಲ್ಲಿದ್ದವರೊಬ್ಬರು ಅವರನ್ನು ಕೈ ಹಿಡಿದು ರಸ್ತೆ ದಾಟಿಸಿದರು...!

ಹೆಸರಘಟ್ಟಕ್ಕೆ ತೆರಳಲು ಇದೇ ಸರ್ಕಲ್‌ಗೆ ಬಂದ ವೃದ್ದೆಯೊಬ್ಬರು, ಆ ಬದಿಯಲ್ಲಿದ್ದ ಬಸ್‌ ನಿಲ್ದಾಣದತ್ತ ತೆರಳಲು, ಹೆದ್ದಾರಿಯನ್ನು ದಾಟಬೇಕಿತ್ತು. ಶರವೇಗದಲ್ಲಿ ಸಾಲುಗಟ್ಟಿ ಬರುತ್ತಿದ್ದ ವಾಹನಗಳು ಅವರಿಗೆ ಹೆಜ್ಜೆ ಹಾಕುವುದಕ್ಕೂ ಅವಕಾಶ ನೀಡಲಿಲ್ಲ. ಟ್ರಾಫಿಕ್‌ ಸಿಗ್ನಲ್‌ ಬಿಟ್ಟ ತಕ್ಷಣವೇ ಮತ್ತೊಂದು ಕಡೆಯಿಂದ ವಾಹನಗಳು ಮೈಮೇಲೆಯೇ ಬಂದಂತೆ ನುಗ್ಗುತ್ತಿದ್ದವು. ಹಾಗೂ ಹೀಗೂ ಸಾಹಸ ಮಾಡಿ ರಸ್ತೆದಾಟಿದ ಅವರು ಅಬ್ಬಾ ಎಂದು ನಿಟ್ಟುಸಿರುಬಿಟ್ಟರು.

ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ನಿತ್ಯ ಬೆಳಿಗ್ಗೆ 8 ರಿಂದ 10ಗಂಟೆವರೆಗೆ ಕಂಡುಬರುವ ಸಾಮಾನ್ಯ ದೃಶ್ಯಗಳಿವು.

ರಾಜ್ಯದ 25 ಜಿಲ್ಲೆಗಳು ಹಾಗೂ ಮೂರು ರಾಜ್ಯಗಳಿಗೆ ಸಂಪರ್ಕಕೊಂಡಿಯಾಗಿದೆ ಈ ವೃತ್ತ. ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗ ತೆರಳುವವರು, ಉದ್ಯೋಗಕ್ಕಾಗಿ ನಿತ್ಯ ತುಮಕೂರು ಕಡೆಗೆ ಹೋಗುವವರು ಈ ವೃತ್ತದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಾರೆ. ಮೈಸೂರು ರಸ್ತೆ, ಕೆಂಗೇರಿ, ಬನಶಂಕರಿ, ಸುಂಕದಕಟ್ಟೆ, ಹೆಬ್ಬಾಳ, ಕೆ.ಆರ್‌.ಪುರದ ಕಡೆಗೆ ಹೋಗುವವರೂ ಇಲ್ಲಿಂದ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಬಳ್ಳಾರಿ ರಸ್ತೆ ಕಡೆಯಿಂದ ಬರುವ ಬಸ್‌ಗಳನ್ನು ಹೋಟೆಲ್ ವಿವಾಂತ ಕಡೆಯಲ್ಲಿ ನಿಲುಗಡೆ ಮಾಡಲಾಗುತ್ತದೆ. ಅಲ್ಲಿ ಬಸ್‌ ಇಳಿದು, ತುಮಕೂರು ಕಡೆಗೆ ಹೋಗುವವರು ರಸ್ತೆ ದಾಟುವುದಕ್ಕೆ ಹರಸಾಹಸಪಡುತ್ತಾರೆ. ಇದೇ ರೀತಿ, ಮೆಜೆಸ್ಟಿಕ್‌ ಕಡೆಯಿಂದ ಬಂದು ಬಳ್ಳಾರಿ ರಸ್ತೆ ಕಡೆಗೆ ತೆರಳುವವರು ಜೀವ ಭಯದಿಂದಲೇ ರಸ್ತೆ ದಾಟುತ್ತಾರೆ.

ಇಷ್ಟೆಲ್ಲ ದಟ್ಟಣೆ ಇರುವ ಈ ವೃತ್ತದಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟಲು ‘ಪಾದಚಾರಿ ಮೇಲ್ಸೇತುವೆಯ (ಸ್ಕೈವಾಕ್‌) ವ್ಯವಸ್ಥೆ ಇಲ್ಲ. ಹೀಗಾಗಿ ಪಾದಚಾರಿಗಳ ಸ್ಥಿತಿ ಘನಘೋರವಾಗಿದೆ. 

ಸಂಚಾರ ದಟ್ಟಣೆಯನ್ನು ಗಮನಿಸಿದ್ದ ಸಂಚಾರ ಪೊಲೀಸರು ಗೊರಗುಂಟೆಪಾಳ್ಯ, ಸಿಎಂಟಿ ವೃತ್ತದಲ್ಲಿ ಸ್ಕೈವಾಕ್‌ ನಿರ್ಮಿಸುವಂತೆ ಬಿಬಿಎಂಪಿಗೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿದ್ದಾರೆ. ಆ ಪ್ರಸ್ತಾವಕ್ಕೆ ಕಿಮ್ಮತ್ತು ಸಿಗುತ್ತಿಲ್ಲ. ಸಿಎಂಟಿ ವೃತ್ತದಲ್ಲಿ ಬೆಳಿಗ್ಗೆ 8 ರಿಂದ 9.30ರ ತನಕ ಗಾರ್ಮೆಂಟ್ಸ್‌ಗಳಿಗೆ ತೆರಳಲು ಸಾವಿರಾರು ಮಹಿಳೆಯರು ಒಮ್ಮೆಲೇ ಬರುತ್ತಾರೆ. ಸಂಜೆ 5ರಿಂದ ರಾತ್ರಿ 8ರ ವರೆಗೆ ಹೆಚ್ಚಿನ ದಟ್ಟಣೆ ಕಂಡುಬರುತ್ತದೆ. ಆ ವೇಳೆಯಲ್ಲಿ ಸಮಸ್ಯೆ ತೀವ್ರವಾಗಿದೆ.

ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ರಸ್ತೆ ದಾಟುವುದಕ್ಕೆ ವ್ಯವಸ್ಥೆಯಿದೆ. ಅಲ್ಲಿ ಪ್ರಯಾಣಿಕರನ್ನು ಹೊರತು ಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಸ್ಕೈವಾಕ್‌ ನಿರ್ಮಾಣವಾಗುವವರೆಗೆ ಅವಕಾಶ ಕಲ್ಪಿಸುವಂತೆ ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಲಾಗಿತ್ತು. ಅವರು ಅವಕಾಶ ನೀಡಿಲ್ಲ ಎಂದು ಸ್ಥಳೀಯರು ದೂರಿದರು.

ಮೆಟ್ರೊ ಪಿಲ್ಲರ್‌ಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎನ್ನುವ ಕಾರಣಕ್ಕೆ ಕೆಳಸೇತುವೆ ನಿರ್ಮಾಣವನ್ನು ಕೈಗೆತ್ತಿಕೊಂಡಿಲ್ಲ ಎಂದು ಆಟೊ ಚಾಲಕ ಅಬ್ದುಲ್‌ ಹೇಳುತ್ತಾರೆ. 

ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗಬೇಕೆಂದರೆ, ತಕ್ಷಣದಲ್ಲೇ ಇಲ್ಲಿ ಸ್ಕೈವಾಕ್‌ ನಿರ್ಮಾಣವಾಗಬೇಕು. ಅದನ್ನು ಹತ್ತಿ ಓಡಾಡುವುದಕ್ಕೆ ಅನುಕೂಲವಾಗುವಂತೆ ಎರಡೂ ಬದಿಗಳಲ್ಲಿ ಲಿಫ್ಟ್‌ ಅಥವಾ ಎಸ್ಕಲೇಟರ್‌ ಯಂತ್ರ ಜೋಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ರಸ್ತೆ ದಾಟುತ್ತಿರುವ ಪಾದಚಾರಿಗಳು. 
ರಸ್ತೆ ದಾಟುತ್ತಿರುವ ಪಾದಚಾರಿಗಳು. 

ಒಮ್ಮೆ ಸಿಗ್ನಲ್‌ ಬಿಟ್ಟರೆ ಸಾವಿರ ವಾಹನ

ಈ ವೃತ್ತದಲ್ಲಿ ಒಮ್ಮೆ ಸಿಗ್ನಲ್‌ ಬಿಟ್ಟರೆ ಸಾವಿರ ವಾಹನಗಳು ಚಲಿಸುತ್ತವೆ. ಅದಾದ ಮೇಲೆ ದಟ್ಟಣೆ ಅವಧಿಯಲ್ಲಿ ರಸ್ತೆದಾಟಲು 200ರಿಂದ 250 ಮಂದಿ ಕಾಯುತ್ತಿರುತ್ತಾರೆ. ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಎಸ್‌ಆರ್‌ಎಸ್‌ನಿಂದ ಬಿಇಎಲ್‌ (ಹೊರ ವರ್ತುಲ ರಸ್ತೆ) ವೃತ್ತದವರೆಗೆ ಎಲ್ಲೂ ಸ್ಕೈವಾಕ್‌ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಎರಡು ಕಡೆ ಶೌಚಾಲಯ ನಿರ್ಮಾಣ

ಈ ಜಂಕ್ಷನ್‌ನಲ್ಲಿ ಶೌಚಾಲಯವಿಲ್ಲದೆ ಮಹಿಳೆಯರು ತೊಂದರೆಗೆ ಒಳಗಾಗುತ್ತಿದ್ದರು. ಸದ್ಯ ಗೊರಗುಂಟೆಪಾಳ್ಯ ಸಿಎಂಟಿ ವೃತ್ತದಲ್ಲಿ ಎರಡು ಶೌಚಾಲಯ ನಿರ್ಮಿಸಲಾಗಿದೆ. ಪಿಎಸ್ಐ ಒಬ್ಬರು ಸ್ವಂತ ಹಣದಲ್ಲಿ ಮೊಬೈಲ್‌ ಶೌಚಾಲಯ ನಿರ್ಮಿಸಿದ್ದರು. ಇದಾದ ಮೇಲೆ ಎಚ್ಚೆತ್ತ ಬಿಬಿಎಂಪಿ ಎರಡು ವೃತ್ತದಲ್ಲೂ ಶಾಶ್ವತ ಶೌಚಾಲಯ ನಿರ್ಮಿಸಿದೆ ಎಂದು ಮಹಿಳಾ ಕಾರ್ಮಿಕರು ಹೇಳಿದರು.

ಮೈಮೇಲೆಯೇ ವಾಹನಗಳು ನುಗ್ಗುತ್ತವೆ. ಒಮ್ಮೆ ಭಯ ಆತಂಕವಾಗುತ್ತದೆ. ಮೊದಲ ಬಾರಿಗೆ ಗೊರಗುಂಟೆಪಾಳ್ಯ ಜಂಕ್ಷನ್‌ಗೆ ಬಂದವರಿಗೆ ರಸ್ತೆದಾಟುವುದು ಸವಾಲು. ಇಲ್ಲಿಗೆ ಸ್ಕೈವಾಕ್‌ ಅಗತ್ಯವಿದೆ.
– ವಿಶ್ವನಾಥ್‌ ಪಾಟೀಲ್‌ ಕಲಬುರಗಿ
ವಾಹನಗಳ ವೇಗವೂ ಹೆಚ್ಚು ಹೆಬ್ಬಾಳ ದೇವನಹಳ್ಳಿ ಕೆ.ಆರ್‌.ಪುರ ಭಾಗದಿಂದಲೂ ಈ ವೃತ್ತಕ್ಕೆ ವಾಹನಗಳು ಬರುತ್ತವೆ. ಹಸಿರುದೀಪ ಹೊತ್ತಿದ ತಕ್ಷಣ ವಾಹನಗಳ ವೇಗವೂ ಹೆಚ್ಚಿರುತ್ತದೆ. ವೃದ್ಧರು ಮಕ್ಕಳನ್ನೂ ಗಮನಿಸುವುದಿಲ್ಲ. ಸಂಚಾರ ನಿಯಂತ್ರಣಕ್ಕೆ ಕ್ರಮ ಅಗತ್ಯ.
– ರಾಜಶೇಖರ್‌ ಆರಾಧ್ಯ.
ತೋಟದಗುಡ್ಡದಹಳ್ಳಿ ಬಸ್ ನಿಲುಗಡೆಗೆ ಅವಕಾಶ ಬೇಡ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ಖಾಸಗಿ ಬಸ್‌ಗಳನ್ನು ರಸ್ತೆ ಮಧ್ಯದಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಈ ಸ್ಥಳದಲ್ಲಿ ಬಸ್‌ ನಿಲುಗಡೆಗೆ ಅವಕಾಶ ನೀಡಬಾರದು.
– ಸರೋಜಾ, ಉದ್ಯೋಗಿ
ಬಡವರು ಲೆಕ್ಕಕ್ಕೆ ಇಲ್ಲವೇ? ಹೆದ್ದಾರಿ ಬದಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಜಾಗವಿದೆ. ಆ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಬಸ್‌ ನಿಲ್ದಾಣ ಕೆಳಸೇತುವೆ ಸ್ಕೈವಾಕ್‌ ನಿರ್ಮಿಸಬೇಕು. ಸರ್ಕಾರಕ್ಕೆ ಬಡವರು ಲೆಕ್ಕಕ್ಕೆ ಇಲ್ಲವೇ?
-ಈಶ್ವರ್‌, ಉದ್ಯೋಗಿ 8ನೇ ಮೈಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT