ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಶವ ಸಾಗಿಸಲು ಮಗನನ್ನೂ ಕರೆದ!

ರಾಮಮಂದಿರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಹತ್ಯೆ * ಶವದ ಪಕ್ಕದಲ್ಲೇ ಕುಳಿತು ದಿನ ಕಳೆದ ಆರೋಪಿ
Last Updated 6 ಸೆಪ್ಟೆಂಬರ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ಫ್ಲ್ಯಾಟ್‌ನಲ್ಲಿ ಕುತ್ತಿಗೆ ಕುಯ್ದು ಪತ್ನಿಯ ಹತ್ಯೆಗೈದ ಹಿರೇನ್ ಎಂಬಾತ, 16 ವರ್ಷದ ಮಗನೊಂದಿಗೆ ರಾತ್ರೋರಾತ್ರಿ ಕಾರಿನಲ್ಲಿ ಶವ ಸಾಗಿಸಲು ಮುಂದಾಗಿದ್ದ. ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಕೊಂಡು ಪಾರ್ಕಿಂಗ್‌ ಪ್ರದೇಶಕ್ಕೆ ಬಂದಾಗ, ಸೆಕ್ಯುರಿಟಿ ಗಾರ್ಡ್‌ ಕೈಗೆ ಸಿಕ್ಕಿಬಿದ್ದು ರಾಜಾಜಿನಗರ ಪೊಲೀಸರ ಅತಿಥಿಯಾಗಿದ್ದಾನೆ.

ಗುಜರಾತ್‌ನ ಹಿರೇನ್, ಪತ್ನಿ–ಮಗನೊಂದಿಗೆ ಎಂಟು ವರ್ಷಗಳಿಂದ ರಾಮಮಂದಿರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ. ಪತ್ನಿಯ ಶೀಲ ಶಂಕಿಸಿ ನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಆತ, ಬುಧವಾರ ಮಧ್ಯಾಹ್ನವೂ ಜಗಳವಾಡಿ ಪತ್ನಿಯ ಕುತ್ತಿಗೆ ಕುಯ್ದಿದ್ದ. ಕಾಲೇಜಿನಿಂದ ಸಂಜೆ 4.30ರ ಸುಮಾರಿಗೆ ಮನೆಗೆ ಮರಳಿದ ಮಗನಿಗೆ, ‘ನಿನ್ನ ತಾಯಿಯನ್ನು ನಾನೇ ಕೊಂದುಬಿಟ್ಟೆ. ನಾನು ಜೈಲಿಗೆ ಹೋದರೆ ನೀನು ಅನಾಥನಾಗುತ್ತೀಯಾ. ಯಾರಿಗೂ ಗೊತ್ತಾಗದಂತೆ ಶವ ಸಾಗಿಸೋಣ’ ಎಂದು ಹೇಳಿದ್ದ.

ತಾಯಿಯನ್ನು ಕಳೆದುಕೊಂಡ ಮಗನಿಗೆ, ತಂದೆಯೂ ಜೈಲು ಪಾಲಾಗುವುದು ಇಷ್ಟವಿರಲಿಲ್ಲ. ಅದೇ ಗೊಂದಲದಲ್ಲಿ ತಂದೆಯ ಮಾತಿನಂತೆಯೇ ನಡೆದುಕೊಂಡಿದ್ದ. ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿದ್ದ ಹಿರೇನ್, ರಾತ್ರಿ 11 ಗಂಟೆ ಸುಮಾರಿಗೆ ಅದನ್ನು ತೆಗೆದುಕೊಂಡು ಪಾರ್ಕಿಂಗ್‌ ಸ್ಥಳಕ್ಕೆ ಬಂದಿದ್ದ.

ಕಾರಿನ ಡಿಕ್ಕಿ ತೆಗೆದ ಸದ್ದು ಕೇಳಿ ಸೆಕ್ಯುರಿಟಿ ಗಾರ್ಡ್ ಪಾರ್ಕಿಂಗ್‌ ಸ್ಥಳಕ್ಕೆ ತೆರಳಿದ್ದರು. ತಂದೆ–ಮಗನನ್ನು ನೋಡಿ, ‘ಇಷ್ಟು ಹೊತ್ತಿಗೆ ಎಲ್ಲಿಗೆ ಹೊರಟಿದ್ದೀರಿ ಸರ್’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಹಿರೇನ್, ‘ಪತ್ನಿ ಮನೆಗೆಲಸ ಮಾಡುವಾಗ ಕಾಲು ಜಾರಿ ಬಿದ್ದಳು. ತಲೆಗೆ ಪೆಟ್ಟಾಗಿ ಮೃತಪಟ್ಟಳು. ಪೊಲೀಸರಿಗೆ ವಿಷಯ ಗೊತ್ತಾದರೆ ತೊಂದರೆ ಆಗುತ್ತದೆಂದು ಶವ ಸಾಗಿಸುತ್ತಿದ್ದೇವೆ. ಈ ವಿಚಾರವನ್ನು ಯಾರಿಗೂ ಹೇಳಬೇಡಿ’ ಎಂದು ಮನವಿ ಮಾಡಿದ್ದ.

ಸೆಕ್ಯುರಿಟಿ ಗಾರ್ಡ್ ಆ ಕೂಡಲೇ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ವಿಷಯ ತಿಳಿಸಿ, ಪೊಲೀಸ್ ನಿಯಂತ್ರಣ ಕೊಠಡಿಗೂ ಕರೆ ಮಾಡಿದ್ದರು. ಸ್ಥಳಕ್ಕೆ ದೌಡಾಯಿಸಿದ ರಾಜಾಜಿನಗರ ಪೊಲೀಸರು, ಬೆಡ್‌ಶೀಟ್ ತೆಗೆದು ನೋಡಿದಾಗ ಕುತ್ತಿಗೆ ಕುಯ್ದು ಕೊಲೆ ಮಾಡಲಾಗಿತ್ತು. ಕೂಡಲೇ ಪತಿ–ಮಗನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.

ಆಗ ಹಿರೇನ್, ‘ಪತ್ನಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಳು. ಅಲ್ಲದೆ, ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಳು. ಕೈಗೆ ಸಿಕ್ಕ ವಸ್ತುಗಳಿಂದ ನನಗೆ ಹೊಡೆಯುತ್ತಿದ್ದಳು. ಮಧ್ಯಾಹ್ನ ಕೂಡ ಇಬ್ಬರ ನಡುವೆ ಜಗಳವಾಯಿತು. ಆಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ, ಕುತ್ತಿಗೆ ಕುಯ್ದುಬಿಟ್ಟೆ. ಇದರಲ್ಲಿ ಮಗನ ತಪ್ಪೇನು ಇಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಹಿರೇನ್, ಕುರಬರಹಳ್ಳಿಯ ‘ಸಾಯಿ ಫುಡ್ ಪ್ರೈವೇಟ್ ಲಿಮಿಟೆಡ್‌’ನಲ್ಲಿ ವ್ಯವಸ್ಥಾಪಕನಾಗಿದ್ದ. ಏನು ಮಾಡುವುದೆಂದು ತೋಚದೆ ಮಗ, ತಂದೆಯ ಮಾತು ಕೇಳಿದ್ದಾನೆ. ಹೀಗಾಗಿ, ಆತನ ಮೇಲೆ ಕ್ರಮ ಜರುಗಿಸಿಲ್ಲ. ಮೃತರ ಪೋಷಕರು ದೂರು ಕೊಟ್ಟಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT