ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಬ್‌ -ಬಾರ್‌ನಲ್ಲಿ ವಿದ್ಯಾರ್ಥಿಗಳು, ಪೊಲೀಸರ ದಾಳಿ

ಕಮಿಷನರ್‌ಗೆ ದೂರು ನೀಡಿದ್ದ ಶಾಲೆ ಶಿಕ್ಷಕರು
Published 9 ಸೆಪ್ಟೆಂಬರ್ 2023, 14:11 IST
Last Updated 9 ಸೆಪ್ಟೆಂಬರ್ 2023, 14:11 IST
ಅಕ್ಷರ ಗಾತ್ರ

ಬೆಂಗಳೂರು: ‘ಮದ್ಯ, ತಂಬಾಕು ಉತ್ಪನ್ನ, ಇತರೆ ನಿಷೇಧಿತ ವಸ್ತುಗಳನ್ನು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಶಾಲೆ ಶಿಕ್ಷಕರು ದೂರು ನೀಡಿದ್ದ ಬೆನ್ನಲ್ಲೇ ನಗರದ ಪಬ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ಶುಕ್ರವಾರ ರಾತ್ರಿ ದಾಳಿ ಮಾಡಿದರು.

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌, ಬಾಣಸವಾಡಿ, ಹೆಣ್ಣೂರಿನಲ್ಲಿರುವ ಪಬ್‌, ಬಾರ್‌ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ ಹಾಗೂ ಇತರೆ ಸ್ಥಳಗಳ ಮೇಲೆ ದಾಳಿ ನಡೆದಿದೆ.

‘ಪಬ್‌, ಬಾರ್‌ ಆ್ಯಂಡ್ ರೆಸ್ಟೋರೆಂಟ್ ಹಾಗೂ ಇತರೆ ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ, ಪೊಲೀಸರ ವಿಶೇಷ ತಂಡಗಳನ್ನು ರಚಿಸಿ ಶುಕ್ರವಾರ ರಾತ್ರಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ಹೇಳಿದರು.

701 ಸ್ಥಳಗಳಲ್ಲಿ ಪರಿಶೀಲನೆ, 506 ಪ್ರಕರಣ: ‘ನಗರದ 701 ಸ್ಥಳಗಳನ್ನು ಗುರುತಿಸಲಾಗಿತ್ತು. ಪ್ರತಿಯೊಂದು ಸ್ಥಳದ ಮೇಲೂ ವಿಶೇಷ ತಂಡಗಳು ದಾಳಿ ಮಾಡಿದವು. ಕೆಲವು ಸ್ಥಳಗಳಲ್ಲಿ ಅಪ್ತಾಪ್ತರು ಪತ್ತೆಯಾದರು. ಅವರೆಲ್ಲರಿಗೂ ಬುದ್ದಿವಾದ ಹೇಳಿ. ಮನೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘390 ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. ಬಾಲನ್ಯಾಯ ಕಾಯ್ದೆ, ಅಬಕಾರಿ ಕಾಯ್ದೆ, ಕೋಟ್ಬಾ ಕಾಯ್ದೆಯಡಿ ಒಟ್ಟು 506 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕೆಲವೆಡೆ ಮಾಲೀಕರು ಹಾಗೂ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿವೆ.

‘ಬಾಲಕ ಹಾಗೂ ಬಾಲಕಿಯರಿಗೆ ಪ್ರವೇಶ ನೀಡಲಾಗುತ್ತಿತ್ತು. ಅವರಿಗೆ ಮದ್ಯ, ತಂಬಾಕು ಉತ್ಪನ್ನ ಹಾಗೂ ಇತರೆ ನಿಷೇಧಿತ ವಸ್ತುಗಳನ್ನು ವಿತರಣೆ ಮಾಡುತ್ತಿರುವುದು ಪತ್ತೆಯಾಗಿದೆ’ ಎಂದು ಹೇಳಿವೆ.

‘ವಿದ್ಯಾರ್ಥಿಗಳು ಕ್ರಮೇಣ ವ್ಯಸನಿಗಳಾಗುತ್ತಿದ್ದರು. ಇದರಿಂದಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಶಿಕ್ಷಕರು ದೂರು ನೀಡಿದ್ದರು’ ಎಂದು ತಿಳಿಸಿವೆ.

ಮಾಲೀಕರಿಗೆ ಎಚ್ಚರಿಕೆ: ‘ಪರವಾನಗಿ ಸಂದರ್ಭದಲ್ಲಿ ಸೂಚಿಸಿರುವ ನಿಯಮ, ಷರತ್ತು ಹಾಗೂ ಸೂಚನೆಗಳನ್ನು ಪಾಲಿಸುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಬಿ. ದಯಾನಂದ್ ಹೇಳಿದರು.

‘ಗಂಭೀರ ಸ್ವರೂಪದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಮಾಲೀಕರ ಪಟ್ಟಿ ಸಿದ್ಧಪಡಿಸಲಾಗಿದೆ. ಅವರಿಗೆ ನೀಡಿರುವ ಪರವಾನಗಿ ರದ್ದುಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT