ಸೋಮವಾರ, ಆಗಸ್ಟ್ 15, 2022
20 °C
ಪ್ರೀತಿಸಿ ಮದುವೆಯಾಗಿದ್ದ ಪೊಲೀಸ್ ದಂಪತಿ | ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ

ಪತ್ನಿ ಆತ್ಮಹತ್ಯೆ ಕಂಡು ಹೆಡ್ ಕಾನ್‌ಸ್ಟೆಬಲ್ ನೇಣಿಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರೇಶ್ ಮತ್ತು ಶೀಲಾ

ಬೆಂಗಳೂರು: ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಸಿ.ಬಿ. ಶೀಲಾ (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ನೋಡಿದ್ದ ಪತಿಯೂ ಆಗಿರುವ ಹೆಡ್ ಕಾನ್‌ಸ್ಟೆಬಲ್‌ ಡಿ.ವಿ. ಸುರೇಶ್ (36) ಸಹ ನೇಣಿಗೆ ಶರಣರಾಗಿದ್ದಾರೆ.

‘ಮೃತ ಶೀಲಾ, ಪೊಲೀಸ್ ಕಮಿಷನರ್ ಕಚೇರಿ ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದರು. ಡಿ.ವಿ. ಸುರೇಶ್, ಸಂಪಿಗೆಹಳ್ಳಿ ಉಪವಿಭಾಗ ಎಸಿಪಿ ಕಚೇರಿಯಲ್ಲಿ ಬರಹಗಾರರಾಗಿದ್ದರು. ಶೀಲಾ ಅವರ ಸಹೋದರಿ ನೀಡಿರುವ ದೂರು ಆಧರಿಸಿ ಕೊತ್ತನೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮುಳಬಾಗಿಲಿನ ಸುರೇಶ್ ಹಾಗೂ ಕಡೂರಿನ ಶೀಲಾ, ನಗರದಲ್ಲೇ ವೃತ್ತಿ ಆರಂಭಿಸಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ, ಕುಟುಂಬದವರ ಸಮ್ಮುಖದಲ್ಲಿ ಹತ್ತು ವರ್ಷಗಳ ಹಿಂದೆ ಮದುವೆ ಆಗಿದ್ದರು. ಕೊತ್ತನೂರು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.’

‘ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಬಗ್ಗೆ ಅವರಲ್ಲಿ ಬೇಸರವಿತ್ತು. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಸಂಬಂಧಿಕರು ಹಾಗೂ ಪರಿಚಯಸ್ಥರು ಸಹ ಮಕ್ಕಳ ಬಗ್ಗೆಯೇ ಕೇಳುತ್ತಿದ್ದರು. ಇದರಿಂದಲೇ ದಂಪತಿ ಮಾನಸಿಕವಾಗಿ ನೊಂದಿದ್ದರೆಂದು ಹೇಳಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಪತ್ನಿ ಮೃತದೇಹ ನೋಡಿ ಆತ್ಮಹತ್ಯೆ; ‘ಗುರುವಾರ ಕರ್ತವ್ಯಕ್ಕೆ ಹಾಜರಾಗಿದ್ದ ದಂಪತಿ, ರಾತ್ರಿ ಮನೆಗೆ ಹೋಗಿದ್ದರು. ಅದೇ ವೇಳೆಯೇ ಇಬ್ಬರಿಗೂ ಜಗಳ ಆಗಿರುವ ಅನುಮಾನವಿದೆ. ಅದೇ ಕಾರಣಕ್ಕೆ ಇಬ್ಬರೂ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರೆಂದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಡರಾತ್ರಿ ಶೀಲಾ ತಮ್ಮ ಕೊಠಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಸುಕಿನಲ್ಲಿ ಕೊಠಡಿಗೆ ಹೋಗಿದ್ದ ಸುರೇಶ್ ಅವರಿಗೆ, ಪತ್ನಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಗೊತ್ತಾಗಿತ್ತು. ಬಳಿಕ ಅವರು ಸಹ ತಮ್ಮ ಕೊಠಡಿಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಮೃತದೇಹವನ್ನೂ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಜಗಳ ನಡೆದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಸಿಐಡಿ ಡಿವೈಎಸ್ಪಿ ಲಕ್ಷ್ಮಿ ಅವರು ನಿಗೂಢವಾಗಿ ಸಾವಿಗೀಡಾಗಿದ್ದರು. ಅದರ ಬೆನ್ನಲ್ಲೇ ಪೊಲೀಸ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹ ಸಾಗಿಸಲು ₹ 14 ಸಾವಿರ ಕೊಟ್ಟ ಪಿಎಎಸ್‌ಐ
ಬೆಂಗಳೂರು:
ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದ ಸಂತ್ರಸ್ತೆಯ ಮೃತದೇಹ ಸಾಗಿಸಲು ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಬ್ಯಾಡರಹಳ್ಳಿ ಠಾಣೆ ಪಿಎಸ್‌ಐ ವಸೀಂವುಲ್ಲಾ ₹ 14 ಸಾವಿರ ಸಹಾಯ ಮಾಡಿದ್ದಾರೆ.

ಹೊರ ರಾಜ್ಯದ ಯುವತಿ, ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು. ಅವರನ್ನು ಕೊಠಡಿಗೆ ಕರೆಸಿಕೊಂಡಿದ್ದ ಸ್ನೇಹಿತ, ಅತ್ಯಾಚಾರ ಎಸಗಿದ್ದ. ನಂತರ ಪ್ರಜ್ಞೆ ಕಳೆದುಕೊಂಡ ಯುವತಿ ಸಾವಿಗೀಡಾಗಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನೂ ಪೊಲೀಸರು ಬಂಧಿಸಿದ್ದರು.

‘ಸಂತ್ರಸ್ತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಆರ್ಥಿಕವಾಗಿ ತೊಂದರೆಯಲ್ಲಿದ್ದ ಕುಟುಂಬಕ್ಕೆ, ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಸಾಗಿಸಲು ಬೇಕಾದಷ್ಟು ಹಣವಿರಲಿಲ್ಲ. ಹೀಗಾಗಿ, ಆಸ್ಪತ್ರೆಯಲ್ಲೇ ಮೃತದೇಹ ಇರಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪ್ರಕರಣದ ತನಿಖಾ ತಂಡದಲ್ಲಿದ್ದ ಪಿಎಸ್ಐ ವಸೀಂವುಲ್ಲಾ, ಕುಟುಂಬದವರ ಯಾತನೆ ಕಂಡು ಹಣದ ಸಹಾಯ ಮಾಡಿದ್ದಾರೆ. ನಂತರ ಕುಟುಂಬದವರು ಮೃತದೇಹವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು