ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ರಾಜಕೀಯ ಪ್ರವೇಶ ಸರಿಯಲ್ಲ: ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ

Published 9 ಜನವರಿ 2024, 16:23 IST
Last Updated 9 ಜನವರಿ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ರಾಜಕೀಯಕ್ಕೆ ಬರುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಈ ರೀತಿಯ ನಡೆ ತಾಳುವುದು ಸರಿಯಲ್ಲ’ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ತಿಳಿಸಿದರು. 

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್. ರೇವಣಸಿದ್ದಯ್ಯ ಅವರಿಗೆ ‘ಶ್ರೀ ಸಿದ್ಧಗಂಗಾ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ.

‘ಸರ್ಕಾರಿ ನೌಕರರು 30 ವರ್ಷದಿಂದ 40 ವರ್ಷಗಳು ಸರ್ಕಾರದಿಂದ ವೇತನ ಪಡೆಯುತ್ತಾರೆ. ಇವರು ನಿವೃತ್ತಿಯ ಬಳಿಕ ರಾಜಕೀಯಕ್ಕೆ ಪ್ರವೇಶಿಸುವ ಬದಲು, ತಮ್ಮ ಅನುಭವವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಳಸುವುದು ಉತ್ತಮ’ ಎಂದರು. 

‘ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳನ್ನು ನೀಡುವವರ ಹಾಗೂ ಪಡೆಯುವವರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಶಸ್ತಿಗಳನ್ನು ಕೊಡುವುದು ಹಾಗೂ ಪಡೆಯುವುದು ಕಚೇರಿಗಳ ಬಾಗಿಲುಗಳನ್ನು ಎಳೆದಂತೆ, ತಳ್ಳಿದಂತೆ ಆಗುತ್ತಿದೆ. ಕೆಲವು ಪ್ರಶಸ್ತಿಗಳಿಗೆ ಕೊಡುವವರ ಮನವೊಲಿಕೆ ನಡೆದರೆ, ಇನ್ನೂ ಕೆಲವು ಪ್ರಶಸ್ತಿಗಳಿಗೆ ಸ್ವೀಕರಿಸುವವರ ಮನವೊಲಿಸಬೇಕಾಗುತ್ತದೆ’ ಎಂದು ಹೇಳಿದರು. 

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಈ ನಾಡಿನಲ್ಲಿ ಶರಣ ಚಳವಳಿ ನಡೆಯದಿದ್ದರೆ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಅನ್ನ ಮತ್ತು ಅಕ್ಷರದ ವಿಚಾರದಲ್ಲಿ ಮಠಗಳು ಮಾಡಿದಷ್ಟು ಕೆಲಸವನ್ನು ಬೇರೆ ಯಾವುದೇ ಸಂಸ್ಥೆಗಳು ಮಾಡಿಲ್ಲ. ಈ ಕಾಯಕದಲ್ಲಿ ಸಿದ್ದಗಂಗಾ ಮಠ ಇಡೀ ದೇಶಕ್ಕೆ ಮಾದರಿಯಾಗಿದೆ. ಇದೇ ರೀತಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ನಲ್ಲಿರುವ ಶ್ರೀ ಸತ್ಯ ಸಾಯಿ ಆಸ್ಪತ್ರೆ ಮಾದರಿಯಲ್ಲಿಯೇ ಸಿದ್ದಗಂಗಾ ಮಠವೂ ಆಸ್ಪತ್ರೆ ನಿರ್ಮಾಣ ಮಾಡಲಿ’ ಎಂದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಲ್. ರೇವಣಸಿದ್ದಯ್ಯ, ‘ಸಿದ್ದಗಂಗಾ ಮಠವು ಪೋಷಕರಿಗೆ ಧೃವ ತಾರೆಯಾಗಿದೆ. ತಂದೆ–ತಾಯಂದಿರು ಭರವಸೆಯಿಂದ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಇಲ್ಲಿನ ಹಳೆಯ ವಿದ್ಯಾರ್ಥಿ ಎನ್ನಲು ನಮಗೆ ಹೆಮ್ಮೆ ಆಗುತ್ತದೆ’ ಎಂದು ಹೇಳಿದರು. 

‘ರಾಜಕಾರಣದಲ್ಲಿ ಪಶ್ಚಾತ್ತಾಪ ಪಡುತ್ತಿದ್ದೇವೆ’ 

‘ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಹಾಗೂ ಬಿ.ಎಲ್. ಶಂಕರ್ ರಾಜಕಾರಣಕ್ಕೆ ಸೂಕ್ತರಲ್ಲ. ರಾಜಕೀಯಕ್ಕೆ ಹೇಗೋ ಬಂದಿದ್ದೇವೆ. ಈ ಕ್ಷೇತ್ರವನ್ನು ಬಿಟ್ಟು ಹೋಗಲೂ ಆಗುತ್ತಿಲ್ಲ. ಕಾನೂನು ಪದವೀಧರರಾದ ನಮ್ಮಿಬ್ಬರಿಗೂ ಈಗ ವಕೀಲ ವೃತ್ತಿ ಮಾಡಲು ಸಾಧ್ಯವಿಲ್ಲ. ಎಲ್ಲಿಗೂ ಹೋಗಲು ಸಾಧ್ಯವಾಗದಿದ್ದರಿಂದ ರಾಜಕೀಯದಲ್ಲಿ ಉಳಿದಿದ್ದೇವೆ. ಸಮಾಜ ಬದಲಾವಣೆಯಾಗುತ್ತದೆ ಎಂಬ ಆಶಾವಾದಲ್ಲಿ ಇದ್ದೇವೆ. ರಾಜಕಾರಣ ಇಷ್ಟು ಹೊಲಸಾಗುತ್ತದೆ ಎಂದು ಗೊತ್ತಿದ್ದರೆ ಖಂಡಿತ ಬರುತ್ತಿರಲಿಲ್ಲ. ಈಗ ಪಶ್ಚಾತ್ತಾಪ ಪಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ ಬೇಸರ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT